ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಶ್ಲ್ಯಾಘನೀಯ

ದಾವಣಗೆರೆ, ಜ. 17- ನಮಗಿಂತ ಹೆಚ್ಚು ಸಾಧನೆ, ಸೇವೆಯನ್ನು ಮುಂದಿನ ದಿನಗಳಲ್ಲಿ ನೀವು ಮಾಡುವಂತಾಗಲಿ ಎಂದು ಮಹರ್ಷಿ ಶ್ರೀ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ಜಗಳೂರು ಶಾಸಕರೂ ಆದ ಎಸ್.ವಿ. ರಾಮಚಂದ್ರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ `ಜ್ಞಾನಕಾಶಿ ಪ್ರತಿಭಾ ಪುರಸ್ಕಾರ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹತ್ತನೇ ತರಗತಿ, ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇಲ್ಲಿ ಉತ್ತೀರ್ಣರಾದವರು ಮುಂದೆ ವೈದ್ಯರು, ಇಂಜಿನಿಯರ್‌ಗಳು, ರಾಜಕಾರಣಿಗಳು ಹೀಗೆ ಯಾವುದಾದರೂ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿ, ಇಂತಹ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲ್ಯಾಘಿಸಿದರು.

ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಸಲು ಯುವ ಜನತೆಯು ಮುಂದಾಗಬೇಕು. ಉತ್ತಮ ಅಂಕ  ಪಡೆದು ಹೆತ್ತವರಿಗೆ, ಶಾಲೆಗೆ ಹಾಗೂ ನಿಮಗೆ  ಪುರಸ್ಕರಿಸಿದ ಸಂಘ-ಸಂಸ್ಥೆಗಳಿಗೆ ಒಳ್ಳೆಯ ಹೆಸರು ತನ್ನಿ ಎಂದು ಹೇಳಿದರು.

ಪರಿಸರ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಸದಸ್ಯರೂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಕೆ.ಅಮರನಾರಾಯಣ ಅವರು,  ಕನ್ನಡದ ಮೇಲಿನ ಪ್ರೇಮ ಹೃದಯದಿಂದ ಬರಬೇಕೇ ಹೊರತು ಯಾರದೋ ಒತ್ತಾಯ ದಿಂದಲ್ಲ. ಕನ್ನಡಕ್ಕಾಗಿ ಕೆಲಸ ಮಾಡುವ ಮನಸ್ಸಿದ್ದರೆ ಯಾವ ಕನ್ನಡಿಗನಾದರೂ ಕೂಡ ಮಾಡಬಹುದು. ತಮ್ಮ ಅವಧಿಯಲ್ಲಿ ಕಚೇರಿಯ ಆಡಳಿತ ಸಂಪೂರ್ಣ ಕನ್ನಡದಲ್ಲಿಯೇ ನಡೆಯುತ್ತಿತ್ತು. ಇದಕ್ಕಾಗಿ ಅಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಮಾಣ ಪತ್ರ ನೀಡಿತ್ತು ಎಂದು ನೆನಪಿಸಿಕೊಂಡರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಶ್ಲ್ಯಾಘನೀಯ - Janathavani

ರಾಜ್ಯದ ಹೃಯದ ಭಾಗವಾದ ದಾವಣಗೆರೆಗೆ ಪರಭಾಷಿಗರ ಸೋಂಕಿಲ್ಲ. ತಮಿಳು, ತೆಲುಗು, ಮಲೆಯಾಳಿ ಇಂತಹ ಭಾಷಿಗರ ಹಾವಳಿ ಇಲ್ಲಿ ಕಡಿಮೆ. ಇಲ್ಲಿ ಅಚ್ಚ ಕನ್ನಡಿಗರೇ ಇದ್ದಾರೆ. ಆದರೆ ಅಚ್ಚ ಕನ್ನಡ ಬಳಸುವವರ ಸಂಖ್ಯೆ ಕಡಿಮೆ.ಅಚ್ಚಕನ್ನಡಿಗರು ಸ್ವಚ್ಛ ಕನ್ನಡ ಬಳಸದೇ ಮತ್ತಾರು ಬಳಸಬೇಕು. ಈ ನಿಟ್ಟಿನಲ್ಲಿ ದಾವಣಗೆರೆ ಉತ್ತಮ ಜಿಲ್ಲೆಯಾಗಬೇಕು ಎಂದರು.

ಮತ್ತೋರ್ವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಜಾನಪದ ತಜ್ಞರೂ ಆದ ಡಾ.ಎಂ.ಜಿ. ಈಶ್ವರಪ್ಪ ಅವರು `ಸಾಂಸ್ಕೃತಿಕ ಸಿರಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ಕನ್ನಡಕ್ಕೆ ಬಂದಿರುವ ಆತಂಕವನ್ನು ಎದುರಿಸಲು ಎಲ್ಲರೂ ಸಜ್ಜಾಗಿ ನಿಂತಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125 ಅಂಕ ಗಳಿಸುವ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳಿಂದ ಕನ್ನಡದ ಏಳ್ಗೆ ಮುಂದುವರೆಯಲಿ ಎಂದು ಆಶಿಸಿದರು.

ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಎಂ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.  ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ಡಿ.ಜಿ.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಹೆಚ್. ವಿಶ್ವನಾಥ್, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್,  ಶ್ರೀಮತಿ ಪರಿಮಳ ಅಮರನಾರಾಯಣ, ಪಾಲಿಕೆ ಸದಸ್ಯ ಸೈಯದ್ ಚಾರ್ಲಿ ಉಪಸ್ಥಿತರಿದ್ದರು. ಮಿಮಿಕ್ರಿ ಗೋಪಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.  ಬಸವರಾಜ್ ನಿರೂಪಿಸಿದರು.

error: Content is protected !!