ನಾಯಕತ್ವದ ವಿರುದ್ಧ ದೂರು ನೀಡಿಲ್ಲ

ನಾಯಕತ್ವದ ವಿರುದ್ಧ ದೂರು ನೀಡಿಲ್ಲ - Janathavaniನನಗೆ ಸಚಿವ ಸ್ಥಾನ ನೀಡಿ ಎಂದು ಎಲ್ಲೂ ಕೇಳಿಲ್ಲ. ಮುಂದೆಯೂ ಕೇಳುವುದಿಲ್ಲ. ಬಿಜೆಪಿಯ ಹಿರಿಯ ಶಾಸಕರಿಗೆ ನೋವುಂಟಾಗಿದೆ. ಅದನ್ನು ಸರಿಪಡಿಸುವಂತೆ ಕೇಳಿದ್ದೇನೆ. ನಾಲ್ಕು ಗೋಡೆಗಳ ಮಧ್ಯೆ, ಪಕ್ಷದ ಇತಿಮಿತಿಯೊಳಗೆ ಚರ್ಚೆ ಮಾಡುತ್ತೇವೆ.

– ಎಂ.ಪಿ. ರೇಣುಕಾಚಾರ್ಯ,  ಸಿ.ಎಂ. ರಾಜಕೀಯ ಕಾರ್ಯದರ್ಶಿ

ಹೊನ್ನಾಳಿ, ಜ.17 – ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ನಾನು ದೂರು ನೀಡಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದರು. 

ಭಾನುವಾರ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಕರ್ನಾಟಕ ಬಿಜೆಪಿಯಲ್ಲಿನ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದೇನೆಯೇ ಹೊರತು ಯಡಿಯೂರಪ್ಪ ಅವರ ವಿರುದ್ಧ ನಾನು ದೂರು ನೀಡಿಲ್ಲ ಎಂದು ತಿಳಿಸಿದರು.

ನಾನು ಎಲ್ಲಾ ಶಾಸಕರೊಂದಿಗೆ ಸ್ನೇಹದಿಂದ ಇದ್ದೇನೆ. ನಾನು ಕ್ಯಾಪ್ಟನ್ ಅಲ್ಲ, ರೆಬೆಲ್ ಕೂಡ ಅಲ್ಲ. ನಾನು ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ. ಮತ್ತೊಮ್ಮೆ ದೆಹಲಿಗೆ ತೆರಳಬೇಕಿದೆ. ಶಾಸಕರ ಸಭೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಾವು ಯಾವುದೇ ಕಾರಣಕ್ಕೂ ಫೈವ್ ಸ್ಟಾರ್ ಹೋಟೆಲ್ ರಾಜಕೀಯ ಮಾಡುವುದಿಲ್ಲ. ಶಾಸಕರ ಮನೆಯಲ್ಲೇ ಚರ್ಚೆ ಮಾಡುತ್ತೇವೆ. 

ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸುವಂತೆ ಮನವಿ ಮಾಡು ತ್ತೇವೆ ಎಂದು ತಿಳಿಸಿದರು. 

ಸರ್ಕಾರ ಬೆಂಗಳೂರು-ಬೆಳಗಾವಿಗೆ ಮಾತ್ರ ಸೀಮಿತವಾಗಬಾರದು. ಸಾಮಾಜಿಕ ಅಸಮತೋಲನ ಸರಿಪಡಿಸುವಂತೆ ಮನವಿ ಮಾಡುವುದರ ಜೊತೆಗೆ ಎರಡು ವರ್ಷ ಸಚಿವರಾಗಿರುವವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ವಿನಂತಿಸಲಾಗುವುದು ಎಂದರು.

ಯಡಿಯೂರಪ್ಪ ಅವರ ಆಡಳಿತ ವೈಖರಿಯನ್ನು ಗೃಹ ಸಚಿವ ಅಮಿತ್ ಷಾ, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಕ್ತಕಂಠದಿಂದ ಶ್ಲಾಘಿಸಿದ್ದು, ನಾಯಕತ್ವದ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆ ಕುರಿತ ಚರ್ಚೆ ಸದ್ಯಕ್ಕೆ ಅಪ್ರಸ್ತುತ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿಗೆ ಟಾಂಗ್: ಒಬ್ಬ ವ್ಯಕ್ತಿ 9 ಕೋಟಿ ಖರ್ಚು ಮಾಡಿದ್ದಾರೆ. ತಮ್ಮ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಎಂಟಿಬಿ ನಾಗರಾಜ್ ಅವರಿಂದ 9 ಕೋಟಿ ರೂ. ಸಾಲ ಪಡೆದಿದ್ದಾರೆ. ಹಣಕ್ಕಾಗಿ ತಮ್ಮ ಮನೆ ಅಡ ಇಟ್ಟಿದ್ದಾರೆ ಎಂದು  ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಆದರೆ, ಜನರಿಂದ ತಿರಸ್ಕೃತರಾದ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಪತ್ನಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ನಿವೃತ್ತಿಯಾಗುವಂತೆ ಮಾಡಿದ ವ್ಯಕ್ತಿಯ ಬಗ್ಗೆ, ಯಾವ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷ ನೆಲ ಕಚ್ಚಿದೆಯೋ ಆ ತಾಲ್ಲೂಕನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ವಹಿಸಿಕೊಂಡು ರಮೇಶ್ ಜಾರಕಿಹೊಳಿ ಏಕೆ ಮಾತನಾಡುತ್ತಾರೋ ತಿಳಿಯುತ್ತಿಲ್ಲ ಎಂದರು.  ರಮೇಶಣ್ಣ ನಿನಗೇಕಣ್ಣ? ನಿನಗೆ ಬಯಸಿದ ಖಾತೆ ಸಿಕ್ಕಿದೆ. ಒಬ್ಬ ವ್ಯಕ್ತಿಯನ್ನು ವೈಭವೀಕರಿಸುವುದು ಬೇಡ ಎಂದು ಕಿವಿಮಾತು ಹೇಳಿದರು.

ರಮೇಶ್ ಜಾರಕಿಹೊಳಿ ಅವರು ಹೇಳಿರುವು ದೆಲ್ಲ ಸುಳ್ಳು. ಆ ವ್ಯಕ್ತಿ ಮನೆಯನ್ನು ಅಡ ಇಟ್ಟಿಲ್ಲ. ಆ ವಿಷಯವನ್ನು ನಮ್ಮ ಸ್ನೇಹಿತರೇ ಸ್ಪಷ್ಟಪಡಿಸಿದ್ದಾರೆ. ಇದನ್ನು ಸಿದ್ಧರಾಮಯ್ಯ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಅವ್ಯವಹಾರ ಮಾಡಿದ, ಜನರಿಗೆ ಮೋಸ ಮಾಡಿದ ಆ ವ್ಯಕ್ತಿಯ ಬಗ್ಗೆ ಪಕ್ಷದ
ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿ ವರಿಷ್ಠರಿಗೆ, ಎಲ್ಲಿ ತಿಳಿಸಬೇಕೋ ಅಲ್ಲಿಗೆ ಹೋಗಿ ತಿಳಿಸಿದ್ದೇನೆ ಎಂದು ಹೇಳಿದರು.

error: Content is protected !!