ರಾಣಿ ಚೆನ್ನಮ್ಮನ ಜೊತೆ ಸಂಗೊಳ್ಳಿ ರಾಯಣ್ಣ ಇದ್ದಂತೆ, ಸಿದ್ಧರಾಮಯ್ಯನವರ ಜೊತೆ ಪಂಚಮಸಾಲಿ ಪೀಠ ಇರುತ್ತದೆ : ವಚನಾನಂದ ಶ್ರೀಗಳು
ಹರಿಹರ, ಜ.15- ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹಮ್ಮಿಕೊಂಡಿದ್ದ ಹರ ಜಾತ್ರಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ತೃತೀಯ ಪೀಠಾರೋಹಣ ನಾಡಿನ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು.
ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಅವರು ಶ್ರೀ ವಚನಾನಂದ ಸ್ವಾಮೀಜಿ ಅವರಿಗೆ ರುದ್ರಾಕ್ಷಿ ಕಿರೀಟವನ್ನು ತೊಡಿಸುವ ಮೂಲಕ ಪೀಠಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭಕ್ಕೆ ಸಾಕ್ಷಿಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ವಚನಾನಂದ ಶ್ರೀಗಳು ಈ ಪೀಠಕ್ಕೆ ಬರುವುದಕ್ಕಿಂತ ಮುಂಚಿನಿಂದ ನನಗೆ ಪರಿಚಿತರಾಗಿದ್ದರು.
ಗುರುಗಳಾದವರು ಜಾತ್ಯತೀತ ತತ್ವ ಹೊಂದಿ, ಸಾಮಾಜಿಕ ಸುವ್ಯವಸ್ಥೆಯಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡಿರಬೇಕು. ಧರ್ಮ ಪ್ರಚಾರ, ಶಿಕ್ಷಣ, ಆರ್ಥಿಕ ಸಮಾನತೆ ಆಗದ ಹೊರತು, ಸಮಾಜದಲ್ಲಿ ಬದಲಾವಣೆ ಅಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಸಮಾಜದಲ್ಲಿರುವ ಮೇಲು ಕೀಳು, ಅಸುರಕ್ಷತೆಗಳನ್ನು ದೇವರು ಮಾಡಿಲ್ಲ. ನಾವು ನಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದೇವೆ. ಕಾಯಕ ಉತ್ಪಾದನೆ ಮಾಡುವ ಕಾಯಕದವರು ಬಡವರಾಗಿಯೇ ಇದ್ದಾರೆ. ಕಾಯಕದ ಲಾಭ ಪಡೆದವರು ಕಾಯಕ ಮಾಡದವರು ಎಂದು ಬೇಸರ ವ್ಯಕ್ತಪಡಿಸಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ ನಡೆಯುತ್ತಿರುವ ಹರಜಾತ್ರಾ ಮಹೋತ್ಸವದ ಎರಡನೇ ದಿನದ ಸಂಜೆ ಏರ್ಪಾಡಾಗಿದ್ದ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಯವರ ತೃತೀಯ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಭಾಗವಹಿಸಿದ್ದರು.
ಪಂಚಮಸಾಲಿ ಸಮಾಜದವರು ಮೂಲತಃ ಕೃಷಿಕರಾಗಿದ್ದು, ಸ್ವಾರ್ಥಕ್ಕಾಗಿ ಉತ್ಪಾದನೆ ಮಾಡಿಲ್ಲ. ಸಮಾಜಕ್ಕಾಗಿ ಅರ್ಪಿಸಿದ್ದಾರೆ. ಪ್ರತಿಯೊಬ್ಬರೂ ಕಾಯಕ ಮಾಡಬೇಕು. ಕಾಯಕದಿಂದ ಬಂದಿದ್ದನ್ನು ಹಂಚಿ ತಿಂದಾಗ ಸಮಾನತೆ ಬರಲು ಸಾಧ್ಯ ಎಂದರು.
ಜಾತಿ, ಆರ್ಥಿಕ, ಸಾಮಾಜಿಕ ಅಸಮಾನತೆ ಇರದಂತಹ ಸಮಾಜ ನಿರ್ಮಾಣ ಆಗಬೇಕೆಂಬ ಉದ್ದೇಶದಿಂದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಪಶು ಭಾಗ್ಯ, ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳು ಜಾರಿಗೆ ತಂದೆ. ಆದರೂ ನನ್ನನ್ನು ಕುರುಬ ಜಾತಿಯವನು ಎಂದು ಕರೆಯುತ್ತಾರೆ.
ನಾನು ಒಂದು ಜಾತಿಗೆ ಸೀಮಿತವಾಗಿಲ್ಲ, ಇಡೀ ಮಾನವ ಕುಲದಲ್ಲಿ ನಾನೊಬ್ಬ, ನನ್ನದು ಮನುಷ್ಯ ಜಾತಿ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಾನು ಸಿಎಂ ಆಗಿದ್ದಾಗ ವಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ಹೆಸರನ್ನು ನಾಮಕರಣ ಮಾಡಿದೆವು. ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವಂತೆ ಆದೇಶ ಮಾಡಿದೆ ಎಂದ ಸಿದ್ದರಾಮಯ್ಯನವರು, ಈ ಮಠ ಶ್ರೀಗಳ ನೇತೃತ್ವದಲ್ಲಿ ದೊಡ್ಡ ಧಾರ್ಮಿಕ ಕೇಂದ್ರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು, ನಾನು ನೀರಾವರಿ ಸಚಿವನಾಗಿದ್ದಾಗ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ, ಎಲ್ಲಾ ರೈತರಿಗೆ ನೆರವಾದ ತೃಪ್ತಿ ನನಗಿದೆ ಎಂದು ಹೇಳಿದರು.
ವಿಧಾನ ಸಭೆಯ ಉಪಸಭಾಪತಿ ಆನಂದ ಮಾಮನಿ, ರಾಣೇಬೆನ್ನೂರು ಶಾಸಕ ಅರುಣ್‌ಕುಮಾರ್ ಪೂಜಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮಠದ ಮಾತನಾಡಿದರು.
ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಉಸಿರಿನ ಮೇಲೆ ಹಿಡಿತ ಇಟ್ಟುಕೊಂಡಿರುವವರು ಸಾಧಕರಾಗುತ್ತಾರೆ ಎಂಬುದಕ್ಕೆ ವಚನಾನಂದ ಶ್ರೀಗಳೇ ಸಾಕ್ಷಿಯಾಗಿದ್ದಾರೆ. ಯೋಗ ಗುರುವಾಗಿ ಜನರಿಗೆ ಆರೋ ಗ್ಯದ ಜ್ಞಾನ ನೀಡುವ ಶ್ರೀಗಳು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.
ದಿವ್ಯ ನೇತೃತ್ವ ವಹಿಸಿದ್ದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಸಿದ್ದರಾಮಯ್ಯನವರಿಗೆ ಯೋಗ ಇದೆ.
ಆ ಯೋಗ ಆದಷ್ಟು ಬೇಗ ಬರಲಿ ಎಂದು ಶುಭ ಹಾರೈಸಿ, ಅಂದು ಕಿತ್ತೂರು ರಾಣಿ ಚೆನ್ನಮ್ಮ ಜೊತೆ ಸಂಗೊಳ್ಳಿ ರಾಯಣ್ಣ ಇದ್ದಂತೆ ಇಂದು ನಿಮ್ಮ ಜೊತೆ ಪಂಚಮಸಾಲಿ ಪೀಠ ಇರುತ್ತದೆ ಎಂದು ಬೆಂಬಲ ನೀಡಿದರು.
ಎಂ.ಬಿ. ಪಾಟೀಲ್ ಅವರು ಮಾಡಿದ ನೀರಾವರಿ ಯೋಜನೆಗಳ ಲಾಭ ನಮ್ಮ ರೈತರಿಗೆ ಆಗಿದೆ. ಅದಕ್ಕಾಗಿ ನಾವು ಅವರನ್ನು ಆಧುನಿಕ ಭಗೀರಥ ಎಂದು ಕರೆಯುತ್ತೇವೆ ಎಂದರು.
ಪೀಠದ ಧರ್ಮದರ್ಶಿ ಬಾವಿ ಬೆಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಿಧಾನಪರಿಷತ್ ಸದಸ್ಯ ಕೆ. ಗೋವಿಂದರಾಜು, ಸಮಾಜದ ಹಿರಿಯರಾದ ಎನ್.ಜಿ. ನಾಗನಗೌಡ್ರು, ಪೀಠದ ಧರ್ಮದರ್ಶಿಗಳಾದ ಬಿ.ಸಿ. ಉಮಾಪತಿ, ಬಸವರಾಜ್ ದಿಂಡೂರು, ಚಂದ್ರಶೇಖರ್ ಪೂಜಾರ್, ಎಚ್.ಪಿ. ಬಾಬಣ್ಣ, ಜ್ಯೋತಿಪ್ರಕಾಶ್, ಗುರುಶಾಂತ ನಿಡೋಣಿ, ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಿ. ನಾಗನಗೌಡ, ಜಾತ್ರಾ ಸಮಿತಿ ಅಧ್ಯಕ್ಷ ಬಿ. ಲೋಕೇಶ್, ಬಂಕಾಪುರದ ಶಿವಣ್ಣ, ಶಿವಾನಂದಪ್ಪ, ಷಣ್ಮುಖಪ್ಪ, ಗುತ್ತೂರು ಕರಿಬಸಪ್ಪ, ಶಿವಕುಮಾರ್ ಪಾಲ್ಗೊಂಡಿದ್ದರು.
ಪಂಚಮಸಾಲಿ ಪೀಠದ ಕಾರ್ಯಾಧ್ಯಕ್ಷ ಜಿ.ಪಿ. ಪಾಟೀಲ ಸ್ವಾಗತಿಸಿದರು. ಪೀಠದ ಧರ್ಮದರ್ಶಿ ಪಿ.ಡಿ. ಶಿರೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಗಳಿ ಪ್ರಕಾಶ್,
[email protected]