ಪಾದಯಾತ್ರೆ ಆರಂಭಿಸಿದ ಬಸವ ಜಯಮೃತ್ಯುಂಜಯ ಶ್ರೀ

ಕೂಡಲ ಸಂಗಮ, ಜ.14- ಪಂಚಮಸಾಲಿ ಸಮಾಜದ  ನಿಜಲಿಂಗಪ್ಪ, ಜತ್ತಿ, ಕಂಠಿ. ವೀರೇಂದ್ರ ಪಾಟೀಲ, ಜೆ.ಎಚ್. ಪಟೇಲರಿಗೆ ನೀಡದ ಬೆಂಬಲವನ್ನು  ಮುಖ್ಯಮಂತ್ರಿ ಯಡಿ ಯೂರಪ್ಪನವರಿಗೆ ನೀಡಿದೆ. ಹೀಗಾಗಿ ಸಮಾಜದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ  ಅವರ ಮೇಲಿದೆ ಎಂದು ಕೂಡಲಸಂಗಮ  ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು.

ಪಂಚಮಸಾಲಿ ಸಮಾಜವನ್ನು 2ಎ ಮೀಸ ಲಾತಿಗೆ ಒಳಪಡಿಸಬೇಕೆಂದು ಒತ್ತಾಯಿಸಿ ಕೂಡ ಲಸಂಗಮದಿಂದ ಬೆಂಗಳೂರಿನವರೆಗೆ ಹಮ್ಮಿ ಕೊಂಡಿರುವ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸಮಾಜದ ಜನರಿಗೆ ಮಂತ್ರಿ, ನಿಗಮ ಮಂಡಳಿ ಸ್ಥಾನ ನೀಡುವುದು ನಮಗೆ ಬೇಕಿಲ್ಲ. ಬಹು  ವರ್ಷಗಳ ಬೇಡಿಕೆಯಾದ 2ಎ ಮೀಸ ಲಾತಿ ಕಲ್ಪಿಸಬೇಕೆಂಬುದು ನಮ್ಮ ಹೋರಾಟ. ಇದನ್ನು ನಮ್ಮ  ಪಾದಯಾತ್ರೆ ಮುಗಿಯವ ದಿನಾಂಕದೊಳಗೆ ಈಡೇರಿಸಬೇಕು. ಇಲ್ಲದಿದ್ದರೆ, ಮಠಕ್ಕೆ  ಸರ್ಕಾರ ನೀಡಿದ  4  ಕೋಟಿ ರೂ. ಹಣವನ್ನು ಮರಳಿಸುವುದಾಗಿ ಎಚ್ಚರಿಸಿದರು.

ಎಲ್ಲ ಸಮಾಜಗಳ ಹೋರಾಟ ಜನಪ್ರತಿನಿಧಿ ಗಳಿಂದ ನಡೆದಿದ್ದರೆ, ನಮ್ಮ ಹೋರಾಟ ಮಣ್ಣಿನ ಮಕ್ಕಳಿಂದ  ಆರಂಭಗೊಂಡಿದೆ. ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿರುವ ಈ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ  ಕಲ್ಪಿಸುವುದು ಅಗತ್ಯವಾಗಿದ್ದು, ಇದಕ್ಕಾಗಿ ತಾನು ಯಾವುದೇ ಹೋರಾಟಕ್ಕೂ ಸಿದ್ದ ಎಂದರು. 

ಲಿಂಗಾಯತ ಪಂಚಮಸಾಲಿ ಟ್ರಸ್ಟ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾ ನಂದ ಕಾಶೆಪ್ಪನವರ  ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ. ಮೀಸಲಾತಿ ನೀಡುತ್ತೇನೆ ಎಂದು ಮಾತುಕೊಟ್ಟ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಈಗ ಮಾತು ತಪ್ಪುವ ಮೂಲಕ ವಚನ ಭ್ರಷ್ಟರಾಗಿದ್ದಾರೆ ಎಂದರು. 

ಪಾದಯಾತ್ರೆಗೆ ಚಾಲನೆ ನೀಡಿದ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ಬಸವ ಜಯ ಮೃತ್ಯುಂಜಯ ಶ್ರೀಗಳು ಕೈಗೊಂಡ ಹೋರಾಟ ವನ್ನು ಹತ್ತಿಕ್ಕುವ ಕಾರ್ಯ  ನಡೆದಿದೆ. ಆದರೆ ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು ಎಂದರು.

ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಕೈಗೊಂಡ ಪಾದಯಾತ್ರೆಯ ಹಿಂದೆ ಅವರ ಮಠದ ಉದ್ಧಾರದ  ಉದ್ದೇಶವಿಲ್ಲ. ಬದಲಾಗಿ ಪಂಚಮಸಾಲಿ ಸಮಾಜದ ಜನರ ಭವಿಷ್ಯ ಅಡಗಿದೆ. ಈ ಕಾರಣಕ್ಕೆ ಸಮಾಜದ  ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿಧಾನಸಭೆ ಮೂರನೆ ಮಹಡಿಯಲ್ಲಿ ಕುಳಿತ ಜನರ  ಕಣ್ಣು ತೆರೆಸಬೇಕೆಂದು ಹೇಳಿದರು.  

ಸರ್ಕಾರದ ಹಣ ಕೊಟ್ಟು ಮಠಗಳ  ಖರೀದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ.  ಪಂಚಮಸಾಲಿ ಮಠಕ್ಕೆ ಈ ಹಣ ಬೇಡ. ನಾವು ಜನರಿಂದ ಹಣ ಸಂಗ್ರಹಿಸಿ, ಮಠ ಕಟ್ಟುತ್ತೇವೆ ಎಂದರು.

ಶ್ರೀ ಸಿದ್ದಲಿಂಗ ಸ್ವಾಮಿಜಿ, ಮಾಜಿ ಸಂಸದರಾದ ಮಂಜುನಾಥ ಕನ್ನೂರ ಹಾಗೂ ಶಿವರಾಮೇಗೌಡ, ಮಾಜಿ  ಶಾಸಕರಾದ ರವಿಕಾಂತ ಪಾಟೀಲ, ನಂದಿಹಳ್ಳಿ ಹಾಲಪ್ಪ, ಶಶಿಕಾಂತ ನಾಯಿಕ, ಡಾ. ಸಾರ್ವಭೌಮ ಬಗಲಿ,  ರವಿಕಾಂತ ಪಾಟೀಲ, ಸೋಮಣ್ಣ ಬೇವಿನಮರದ ಇತರರು ಇದ್ದರು. 

error: Content is protected !!