ಸಂಕ್ರಾಂತಿ ಉತ್ತರಾಯಣ

ಕರ್ನಾಟಕದಲ್ಲಿ ಎಳ್ಳು, ಸಕ್ಕರೆ, ಬೆಲ್ಲ, ಕೊಬ್ಬರಿ, ಕಡಲೆಗಳ ಮಿಶ್ರಣವನ್ನು ನೆರೆಹೊರೆಯವರಿಗೆ, ಬಂಧು-ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಸಂಕ್ರಾಂತಿ ಹಬ್ಬದ ವಿಶೇಷಗಳಲ್ಲೊಂದು. ಹಲವೆಡೆಗಳಲ್ಲಿ ದನ ಕರುಗಳಿಗೆ ಮೈತೊಳೆದು, ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವ ಪರಿಯೂ ಉಂಟು.

ಜಗತ್ತಿಗೆ ಶಾಖ, ಬೆಳಕು ನೀಡಿ, ಇಡೀ ಭೂಮಂಡಲದ ಸಕಲ ಜೀವರಾಶಿಗಳಿಗೆ ಸದಾ ಜೀವಂತಿಕೆ ಚೈತನ್ಯ ನೀಡುತ್ತಿರುವ ಸೂರ್ಯನು, ಆಗಸದಲ್ಲಿ ಒಂದು ರಾಶಿಯಿಂದ ಮತ್ತೊಂದು ನಕ್ಷತ್ರ ರಾಶಿಗೆ ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಹೀಗೆ 12 ನಕ್ಷತ್ರ ರಾಶಿಗಳ ಮುನ್ನೆಲೆಯಲ್ಲಿ ಪ್ರವೇಶಿ ಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವದವು ಗಳಾಗಿವೆ. “ಸೂರ್ಯ ಆತ್ಮಾಜಗತಃ ತಸ್ಥುಷಶ್ಚ” ಎಂಬ ಶ್ಲೋಕ ಅರ್ಥಪೂರ್ಣವಾಗಿದೆ. ಅಂದರೆ ಸೂರ್ಯನು ಈ ಜಗತ್ತಿನ ಆತ್ಮ ಮತ್ತು ಈ ಜಗತ್ತಿನ ಕಣ್ಣು.

ಯುಗಾದಿಯಂದು ಬೇವು-ಬೆಲ್ಲ ಹಂಚುವಂತೆ, ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಹಂಚುವ, ತಿನ್ನುವ ಮೂಲಕ ಚಳಿಗಾಲ ದೇಹದ ಆಂತರಿಕ ಜಡ್ಡುತನಕ್ಕೆ, ಶೀತ, ಕೆಮ್ಮುಗಳಿಗೆ ಔಷಧೀಯಾಗಿಯೂ ಮಹತ್ವ ಪಡೆದಿವೆ ಈ ವಸ್ತುಗಳು.

ಪುರಾತನ ನಂಬಿಕೆಗಳು : ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಸಂತಸವೆನಿಸಿದ ಸಂಕ್ರಾಂತಿ ಎಂಬ ನಂಬಿಕೆಗಳಿವೆ.

ಆಯನವೆಂದರೆ ಸೂರ್ಯನು ಚಲಿಸುವ ಮಾರ್ಗವಾಗಿದ್ದು, ಸೂರ್ಯನು ಕರ್ಕಾಯನ ಬಿಂದು (ಜೂನ್ 21 ರಿಂದ) ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯೆಂದು ಮಕರಾಯನ ಬಿಂದು (ಡಿಸೆಂಬರ್ 21) ಮುಟ್ಟಿ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆಂಬುದು ಈ ಹಬ್ಬದ ಖಗೋಳ ವೈಶಿಷ್ಟ್ಯತೆಯ ಸಂಕೇತವೇ ಆಗಿದೆ. ಸೂರ್ಯನ ಚಲನೆಯ ಬದಲಾವಣೆಯ ಮಹತ್ವ ಪಡೆದ ಈ ಸಂಕ್ರಾಂತಿ ಖಗೋಳಾಸಕ್ತರಿಗೆ ನೆರಳು-ಬೆಳಕು ಗಳನ್ನು ಅಧ್ಯಯನ ಮಾಡುವವರಿಗೆ ಸಂಭ್ರಮವೇ ಸರಿ. ಇನ್ನು ಹಗಲು ಹೆಚ್ಚಾಗಿ, ರಾತ್ರಿಯ ಅವಧಿ ಕಡಿಮೆಯಾಗುವುದನ್ನೂ ಗಮನಿಸಬಹುದು.

“ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂಬ ನಂಬಿಕೆ ಪುರಾಣಗಳಲ್ಲಿನ ನಂಬಿಕೆ ಯಾಗಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ ಎಂಬು ನಂಬಿಕೆಯೂ ಹಲವು ಪುರಾಣಗಳಲ್ಲಿದೆ.

ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುವ ಪದ್ಧತಿ ಹಲವರದು. ಮಹಾಭಾರತದ ಕಥೆಯಲ್ಲಿ ಇಚ್ಛಾಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವಕಾಲಕ್ಕಾಗಿ ಕಾದಿದ್ದರು ಎಂಬ ಉಲ್ಲೇಖವೂ ಇದೆ.

ವಿವಿಧ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ : ಸಂಕ್ರಾಂತಿಯನ್ನು ಮುಖ್ಯವಾಗಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ಕೇರಳಗಳಲ್ಲಿ ಆಚರಿಸಲಾಗುತ್ತದೆ. ಬೆಳೆಗಳು ಕಟಾವಿಗೆ ಬಂದು, ಧಾನ್ಯಲಕ್ಷ್ಮಿಯನ್ನು ಮನೆಗೆ ಬರುವ ಈ ಸುಗ್ಗಿ ಸಂದರ್ಭದಲ್ಲಿ ಆಚರಿಸ ಲಾಗುವ ಸಂಕ್ರಾಂತಿ ಹಬ್ಬ ಒಂದು ರೀತಿಯ ಸಮೃ ದ್ಧಿಯ ಸಂಕೇತವೇ ಆಗಿದೆ. ಭಾರತದೆಲ್ಲೆಡೆ ಈ ಸಂಕ್ರಾಂತಿಯ ಆಚರಣೆಗಳು ವಿಭಿನ್ನವಾಗಿವೆ. ಈ ಸಂಕ್ರಾಂತಿಯಲ್ಲಿ ಹಲವಾರು ಧಾರ್ಮಿಕ ಆಚರಣೆ ಗಳು ನಡೆದರೂ, ಖಗೋಳದ ಮಹತ್ವ ಪಡೆದಿರು ವುದಕ್ಕೆ ವಿಶೇಷ ವೈಜ್ಞಾನಿಕ ಹಬ್ಬವೇ ಆಗಿದೆ.

ತಮಿಳು ನಾಡಿನಲ್ಲಿ ಪೊಂಗಲ್, ಪಂಜಾಬ್‌ನಲ್ಲಿ ಮಾಗೀ ಎಂದು ಇನ್ನೂ ಬೇರೆ ಬೇರೆ ರಾಜ್ಯಗಳಲ್ಲಿ ಮಾಘ, ಮೇಳ, ಭೋಗಿ ಎಂಬ ಹೆಸರುಗಳಿಂದಲೂ ಆಚರಿಸುತ್ತಾರೆ. ಮಕರ ಸಂಕ್ರಾಂತಿ ಹಬ್ಬವೆಂದು ಕರ್ನಾಟಕದಲ್ಲಿ ನಾವು ಆಚರಿಸಿದರೆ, ಗುಜರಾತ್‌ ನಲ್ಲಿ ಉತ್ತರಾಯಣ್, ಪಂಜಾಬ್‌ನಲ್ಲಿ ಲೋರಿ, ಪಶ್ಚಿಮ ಬಂಗಾಳದಲ್ಲಿ ಪೌಶ್ ಸಂಕ್ರಾಂತಿ, ಓಡಿಸ್ಸಾ ದಲ್ಲಿ ಮಕರ ಚೌಲಾ, ಮಹಾರಾಷ್ಟ್ರ ಮತ್ತು ಹರಿ ಯಾಣಗಳಲ್ಲಿ ಮಾಗಿ ಸಂಕ್ರಾಂತಿ, ಅಸ್ಸಾಂನಲ್ಲಿ ಭೋ ಗಾಲಿ ಬಿಹು, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಕಿಚಡಿ ಪರ್ವ್… ಹೀಗೆ ವಿವಿಧ ಹೆಸರುಗಳಿಂದಲೂ ಭಾರತದಾದ್ಯಂತ ವಿಭಿನ್ನವಾಗಿ ಆಚರಿಸುವ ಹಬ್ಬ ಈ ಸಂಕ್ರಾಂತಿಯಾಗಿದೆ. ಗಾಳಿಪಟ ಹಾರಿಸುವುದು, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ದಾನಗಳನ್ನು ನೀಡುವುದು, ಎತ್ತುಗಳನ್ನು ಓಡಿಸುವ ಸ್ಪರ್ಧೆಗಳು ಹೀಗೆ ವಿವಿಧ ಆಚರಣೆಗಳು ಈ ಸಂಕ್ರಾಂತಿ ಹಬ್ಬದ ವಿಶೇಷಗಳಾಗಿವೆ.

ಸೂರ್ಯನ ಉತ್ತರಾಯಣ ಚಲನೆಯ ವೈಜ್ಞಾನಿಕ ವಿವರಣೆ : ನಮ್ಮ ಭೂಮಿಯು ಸೂರ್ಯನ ಸುತ್ತ 365 1/4 ದಿನಗಳಿಗೊಮ್ಮೆ ಸುತ್ತುತ್ತಿರುವುದು ನಮಗೆ ಗೊತ್ತೇ ಇದೆ. ಆದರೆ ಭೂಮಿಯ ಮೇಲೆ ನಿಂತು ಸೂರ್ಯನ ಚಲನೆಯನ್ನು ನೋಡುವ ವೀಕ್ಷಕನಿಗೆ, ಸೂರ್ಯನೇ ಭೂಮಿಯ ಸುತ್ತಾ ಸುತ್ತುತ್ತಿರುವಂತೆ ಭಾಸವಾಗು ತ್ತದೆ. ಸೂರ್ಯನ ಸುತ್ತಲಿನ ಭೂಕಕ್ಷೆಯನ್ನು ನಾವು ಕಾಲ್ಪನಿಕವಾಗಿ ಖಗೋಳವನ್ನು ಮುಟ್ಟುವವರೆಗೆ ವಿಸ್ತರಿಸೋಣ. ಆಗ ದೊರೆಯುವು ವೃತ್ತವನ್ನು ಕ್ರಾಂತಿ ವೃತ್ತ (Ecliptic) ಎಂದು ಕರೆಯುತ್ತೇವೆ. ನಮ್ಮ ಸೂರ್ಯನ ತೋರಿಕೆಯ ವಾರ್ಷಿಕ ಚಲನೆಯ ಮಾರ್ಗ ಈ ಕ್ರಾಂತಿ ವೃತ್ತವೇ ಆಗಿದೆ.

ಭೂಮಿಯ ಭ್ರಮಣೆಯ ಅಕ್ಷ, ಸೂರ್ಯನ ಸುತ್ತಲಿನ ಕಕ್ಷೆಯ ಸಮತಲಕ್ಕೆ ಲಂಬವಾಗಿರದೇ 23.5 ಡಿಗ್ರಿ ಓರೆಯಾಗಿದೆ. ಈ ಕಾರಣದಿಂದ ಕ್ರಾಂತಿ ವೃತ್ತವೂ, ಖಗೋಳೀಯ ವಿಷುವದ್ ವೃತ್ತಗೆ 23.5 ಡಿಗ್ರಿ ಓರೆಯಾಗಿದೆ.

ಈ ಎರಡೂ ವೃತ್ತಗಳನ್ನು ಛೇದಿಸುವ ಬಿಂದುಗಳನ್ನು ವಸಂತ ವಿಷುವ ಬಿಂದು (Vernal Equinox) ಮತ್ತು ಶರದ್ವಿಷುವ ಬಿಂದು (Autumnal Equinox) ಎಂದು ಕರೆಯುತ್ತೇವೆ.

ಹಾಗೆಯೇ ಈ ಎರಡೂ ವೃತ್ತಗಳ ಮಧ್ಯದ ಅಂತರ ಗರಿಷ್ಟ ಪ್ರಮಾಣವನ್ನು ಮುಟ್ಟುವ ಎರಡು ಬಿಂದುಗಳನ್ನು ಕರ್ಕಾಯನ ಬಿಂದು (Summer Solstice) ಮತ್ತು ಮಕರಾಯನ ಬಿಂದು (winter Solstice) ಎಂದೂ ಕರೆಯುತ್ತೇವೆ.

ಸೂರ್ಯ ಮಾರ್ಚ್ 21ರಂದು ವಸಂತ ವಿಷುವ ಬಿಂದುವಿಗೂ, ಸೆಪ್ಟಂಬರ್ 23ರಂದು ಶರದ್ವಿಷುವ ಬಿಂದುವಿಗೂ ಬರುತ್ತಾನೆ. ಈ ಎರಡೂ ದಿನಗಳು ಮಾತ್ರ ಹಗಲು ಮತ್ತು ಇರುಳಿನ ಅವಧಿ ಸಮವಾಗಿರುತ್ತದೆ. ಅಂದರೆ 12 ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲು ಮತ್ತು ಇರುಳುಗಳ ಪಾಲು ಸಮವಾಗಿರು ವುದಿಲ್ಲ. ಇದಲ್ಲದೇ ಸೂರ್ಯನು ಜೂನ್ 21ರಂದು ಕರ್ಕಾಯನ ಬಿಂದುವಿಗೂ ಮತ್ತು ಡಿಸೆಂಬರ್ 21ರಂದು ಮಕರಾಯನ ಬಿಂದುವಿಗೂ ಬರುತ್ತಾನೆ.

ಕರ್ಕಾಯನ ಬಿಂದುವಿನಿಂದ, ಮಕರಾಯನ ಬಿಂದುವಿನ ಕಡೆಗೆ, ದಕ್ಷಿಣ ದಿಕ್ಕಿನ ಸೂರ್ಯನ ಚಲನೆಯನ್ನು ಮತ್ತು ಕಾಲವನ್ನು ದಕ್ಷಿಣಾಯನ ಕಾಲವೆಂದೂ, ಮಕರಾಯನ ಬಿಂದುವಿನಿಂದ ಕರ್ಕಾಯನ ಬಿಂದುವಿನ ಕಡೆಗಿನ ಉತ್ತರ ದಿಕ್ಕಿನ ಚಲನೆಯ ಕಾಲವನ್ನು ಉತ್ತರಾಯಣ ಕಾಲವೆಂದು ಕರೆಯುತ್ತೇವೆ. ಹಾಗಾದರೆ ಸೂರ್ಯ ತನ್ನ ದಕ್ಷಿಣ ದಿಕ್ಕಿನ ಚಲನೆಯನ್ನು ಮುಗಿಸಿ, ಉತ್ತರ ದಿಕ್ಕಿನ ಕಡೆಗಿನ ಚಲನೆಯನ್ನು ಡಿಸೆಂಬರ್ 21 ರಿಂದಲೇ ಆರಂಭಿಸಿದ್ದಾನೆ. ಅಂದರೆ ಮಕರ ಸಂಕ್ರಾಂತಿಯ ಕಾಲ ಆಗಲೇ ಆರಂಭವಾಗಿದೆ.

ಆದರೆ ಗ್ರೆಗೋರಿಯನ್ ಪಂಚಾಂಗದ ಪ್ರಕಾರ ಈ ದಿನ ಜನವರಿ 14ರಂದು ಆಗಿರುವುದರಿಂದ, ಸಂಕ್ರಾಂತಿ ಹಬ್ಬವನ್ನು ಜನವರಿ 14ರಂದು ಆಚರಿಸುತ್ತೇವೆ. ವೈಜ್ಞಾನಿಕವಾಗಿ, ವಾಸ್ತವವಾಗಿ ಡಿಸೆಂಬರ್ 21 ರಿಂದಲೇ ಸೂರ್ಯ, ದಕ್ಷಿಣ ದಿಕ್ಕಿನ ಪಯಣದ ಅಂಚಲ್ಲಿ ನಿಂತು, ಉತ್ತರ ದಿಕ್ಕಿನೆಡೆಗೆ  ಸಂಚಾರ ಆರಂಭಿಸಿದ್ದಾನೆನ್ನುವ ಸತ್ಯ ಈ ಸಂಕ್ರಾಂ ತಿಯ ಸಂಭ್ರಮದಂದು ನಾವು ತಿಳಿದುಕೊಳ್ಳಲೆಂ ಬುದು ನನ್ನ ಆಶಯ. ಉತ್ತರ ದಿಕ್ಕಿನೆಡೆಗೆ ಬೀಳುವ ವಸ್ತುಗಳ ನೆರಳೂ ಕ್ರಮೇಣ ಕಡಿಮೆಯಾಗಿ ದಕ್ಷಿಣ ದಿಕ್ಕಿನೆಡೆಗೆ ವಸ್ತುಗಳ ನೆರಳು ಹೆಚ್ಚಾಗಿ ಬೀಳುವುದನ್ನು ಅಧ್ಯಯನ ಮಾಡಿ ಅರಿಯಬಹುದಾಗಿದೆ.

ಖಗೋಳೀಯ ಮಹತ್ವದ ಈ ಸಂಕ್ರಾಂತಿ ಎಳ್ಳು-ಬೆಲ್ಲದೊಂದಿಗೆ ನಮ್ಮೆಲ್ಲಾ ತೊಂದರೆಗಳನ್ನು ಕಡಿಮೆ ಮಾಡಿ, ನೆಮ್ಮದಿ ಉಕ್ಕಿಸಲಿ.


ಸಂಕ್ರಾಂತಿ ಉತ್ತರಾಯಣ - Janathavaniಹರೋನಹಳ್ಳಿ ಸ್ವಾಮಿ,
ಅಧ್ಯಾಪಕರು
ಹವ್ಯಾಸಿ ಖಗೋಳ ವೀಕ್ಷಕರು, ಭದ್ರಾವತಿ.
[email protected]

 

error: Content is protected !!