ಏಳು ಶಾಸಕರಿಗೆ ಸಚಿವ ಸ್ಥಾನ

ಮೂಲ ಬಿಜೆಪಿ ಶಾಸಕರ ಆಕ್ರೋಶದ ನಡುವೆ ಮಂತ್ರಿಮಂಡಲ ವಿಸ್ತರಣೆ

ಬೆಂಗಳೂರು, ಜ. 13- ಮೂಲ ಬಿಜೆಪಿ ಶಾಸಕರ ಆಕ್ರೋಶದ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿ, ಹೊಸದಾಗಿ ಏಳು ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. 

ಸರ್ಕಾರ ರಚನೆಗೆ ಪ್ರಮುಖ ಕಾರಣ ರಾದ ಮೂವರು ಸೇರಿದಂತೆ ಪಕ್ಷದ ನಾಲ್ವರು ಹಿರಿಯ ಶಾಸಕರಿಗೆ ಮಂತ್ರಿಮಂಡಲದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಸಂಪುಟ ಗಾತ್ರವನ್ನು 27 ರಿಂದ 33ಕ್ಕೆ ಹೆಚ್ಚಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈಬಿಟ್ಟು, ಅವರಿಂದ ತೆರವಾದ ಸ್ಥಾನವನ್ನು ಹಾಗೆಯೇ ಖಾಲಿ ಉಳಿಸಿಕೊಂಡಿದ್ದಾರೆ. 

ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾ ದವರಿಗೆ ಅಧಿಕಾರ ಕಲ್ಪಿಸುವ ಉದ್ದೇಶದಿಂದಲೇ ಇಂದು ಮಂತ್ರಿ ಮಂಡಲ ವಿಸ್ತರಿಸಿದರೂ, ಮುಖ್ಯಮಂತ್ರಿಯವರ ಅಪೇಕ್ಷೆಯಂತೆ ಎಲ್ಲ ರಿಗೂ ಅಧಿಕಾರ ಕೊಡಿಸಲು ಸಾಧ್ಯವಾಗಿಲ್ಲ. 

ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಗೊಂಡ ಮುನಿರತ್ನ ನಾಯ್ಡು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿಯವರು 16 ತಾಸುಗಳ ಕಾಲ ಕಸರತ್ತು ನಡೆಸಿದರೂ, ವರಿಷ್ಠರು ಇದಕ್ಕೆ ಮಣೆ ಹಾಕಲಿಲ್ಲ. 

ಸರ್ಕಾರ ರಚನೆಗೆ ಕಾರಣರಾದ ಹಾಗೂ ವಿಧಾನಪರಿಷತ್‍ನ ಸದಸ್ಯರಾದ ಎಂಟಿಬಿ ನಾಗರಾಜ್, ಸಿ.ಪಿ. ಯೋಗೇಶ್ವರ್, ಆರ್. ಶಂಕರ್‍ಗೆ ಅವಕಾಶ ನೀಡಿದರಾದರೂ, ಮುನಿರತ್ನ ಹಾಗೂ ಹೆಚ್.ವಿಶ್ವನಾಥ್ ಅವರಿಗೆ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. 

ಮುಖ್ಯಮಂತ್ರಿಯವರು ಮಾಡಿದ ಶಿಫಾರಸ್ಸಿಗೆ ಮೂರು ಮಂದಿಗೆ ಮಾತ್ರ ಅವಕಾಶ ನೀಡಿ, ಉಳಿದ ಹೆಸರುಗಳನ್ನು ವರಿಷ್ಠರೇ ಕಳುಹಿಸಿಕೊಟ್ಟಿದ್ದಾರೆ. 

ವರಿಷ್ಠರು ಕಳುಹಿಸಿದ ಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಿ, ಮುನಿರತ್ನ ನಾಯ್ಡು ಸೇರಿದಂತೆ ತಮಗೆ ಬೇಕಾದ ಇಬ್ಬರನ್ನು ತೆಗೆದುಕೊಳ್ಳಲು ಇಂದು ಬೆಳಿಗ್ಗೆ 11 ಗಂಟೆಯವರೆಗೂ ಹರಸಾಹಸ ನಡೆಸಿದರು. 

ಮುಖ್ಯಮಂತ್ರಿಯವರ ಮನವಿಗೆ ವರಿಷ್ಠರು ಸ್ಪಂದಿಸದ ಕಾರಣ 11.30ಕ್ಕೆ ಮಂತ್ರಿಮಂಡಲಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ಹಾಗೂ ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡುವ ಪ್ರಸ್ತಾವವನ್ನು ರಾಜಭವನಕ್ಕೆ ಕಳುಹಿಸಿ, ನಂತರ ಮಾಧ್ಯಮಗಳಿಗೆ ಅಧಿಕೃತವಾಗಿ ಸಂಪುಟಕ್ಕೆ ಸೇರ್ಪಡೆಗೊಳ್ಳುವವರ ಪಟ್ಟಿ ಬಿಡುಗಡೆ ಮಾಡಿದರು. 

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಾಜುಭಾಯ್ ರೂಢಾಬಾಯ್ ವಾಲಾ, ನೂತನ ಸದಸ್ಯರಿಗೆ ಗೌಪ್ಯತಾ ವಿಧಿ ಬೋಧಿಸಿದರು. 

ಕೋವಿಡ್-19 ಹಿನ್ನೆಲೆಯಲ್ಲಿ ರಾಜಭವನದ ಪ್ರವೇಶಕ್ಕೆ ರಾಜ್ಯಪಾಲರು ಭಾರೀ ನಿರ್ಬಂಧ ಹೇರಿದ್ದರಿಂದ ಸಾರ್ವಜನಿಕರು ಹಾಗೂ ಸಂಪುಟಕ್ಕೆ ಸೇರ್ಪಡೆಗೊಂಡ ಸದಸ್ಯರ ಕುಟುಂಬದ ಸದಸ್ಯರಿಗೂ ಒಳಪ್ರವೇಶವಿರಲಿಲ್ಲ. 

ಸಚಿವರು, ಶಾಸಕರು, ಸಂಸದರು ಹಾಗೂ ಕೆಲ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲೇ ಏಳು ಮಂದಿ ಪ್ರಮಾಣ ವಚನ ಸ್ವೀಕರಿಸಿದರು. 

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹೊರತುಪಡಿಸಿದರೆ, ಉಳಿದ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಹಾಗೂ ಜನಪ್ರತಿನಿಧಿಗಳು ಸಮಾರಂಭದಿಂದ ದೂರ ಉಳಿದಿದ್ದರು. 

ನಿಗದಿತ ಸಮಯಕ್ಕಿಂತ 12 ನಿಮಿಷ ತಡವಾಗಿ ಕಾರ್ಯಕ್ರಮ ಆರಂಭಗೊಂಡರೂ, 23 ನಿಮಿಷಗಳಲ್ಲೇ ಮುಕ್ತಾಯಗೊಂಡಿತು. 

ಇಂದು ಸೇರ್ಪಡೆಗೊಂಡ ನೂತನ ಸಚಿವರಲ್ಲಿ ತಲಾ ಇಬ್ಬರು ವೀರಶೈವ ಹಾಗೂ ಕುರುಬ ಸಮುದಾಯ ಉಳಿದಂತೆ ಪರಿಶಿಷ್ಠಜಾತಿ ಹಾಗೂ ವರ್ಗಕ್ಕೆ ತಲಾ ಒಂದು ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 

ವಿಧಾನಸಭೆಗೆ ಎಂಟು ಬಾರಿ ಆಯ್ಕೆಗೊಂಡಿದ್ದರೂ, ಉಮೇಶ್ ಕತ್ತಿ ಅವರನ್ನು ಇಷ್ಟು ದಿನಗಳ ಕಾಲ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ವರಿಷ್ಠರು ಅವಕಾಶ ಮಾಡಿಕೊಟ್ಟಿರಲಿಲ್ಲ. ಮೊದಲ ಎರಡು ವಿಸ್ತರಣೆಗಳಲ್ಲೂ ಸರ್ಕಾರ ರಚನೆಗೆ ಕಾರಣಕರ್ತರಾದವರಿಗೆ ಹೆಚ್ಚು ಅವಕಾಶ ನೀಡಲಾಗಿತ್ತು. 

ವರಿಷ್ಠರು ಮಧ್ಯೆ ಪ್ರವೇಶ ಮಾಡಿದ್ದರಿಂದ ಪಕ್ಷದ ಹಿರಿಯ ಸದಸ್ಯರಾದ ಅರವಿಂದ ಲಿಂಬಾವಳಿ, ಎಸ್. ಅಂಗಾರ ಅವರಿಗೆ ಮಂತ್ರಿಯಾಗುವ ಅವಕಾಶ ದೊರೆಯಿತು. ಲಿಂಬಾವಳಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರೆ, ಮೀಸಲು ಕ್ಷೇತ್ರದಿಂದ ಸತತವಾಗಿ ಆರನೇ ಬಾರಿ ವಿಧಾನಸಭಾ ಪ್ರವೇಶ ಮಾಡಿದ್ದಾರೆ.

error: Content is protected !!