ಜಾತ್ರೆ ವೇಳೆಗೆ ಮೀಸಲಾತಿ ಹೆಚ್ಚಿಸದಿದ್ದರೆ ಜಾತ್ರೆಯಂದು ನಮ್ಮ ತೀರ್ಮಾನ ಪ್ರಕಟ : ವಾಲ್ಮೀಕಿ ಸ್ವಾಮೀಜಿ ಎಚ್ಚರಿಕೆ

ಮಲೇಬೆನ್ನೂರು, ಜ.11- ಎಸ್ಸಿ-ಎಸ್ಟಿ ಜನರನ್ನು ಸರ್ಕಾರಗಳು ತಾತ್ಸಾರದಿಂದ ನೋಡುತ್ತಾ ಬಂದಿದ್ದು, ಚುನಾವಣೆ ಬಂದಾಗ ಹಣ, ಹೆಂಡ ಕೊಟ್ಟರೆ ಅವರು ನಾವು ಹೇಳಿದಂತೆ ಕೇಳುತ್ತಾರೆ ಎಂಬ ಕೀಳರಿಮೆ ರಾಜಕೀಯ ಮುಖಂಡರಲ್ಲಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಹಮ್ಮಿ ಕೊಂಡಿದ್ದ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ರಾಜಕೀಯ ಪಕ್ಷಗಳು ಚುನಾ ವಣೆ ಸಂದರ್ಭದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳಿ ನಮ್ಮನ್ನು ಬಳಸಿಕೊಂಡು ನಂತರ ಮೋಸ ಮಾಡಿದ್ದಾರೆ. ಮೋಸ ಮಾಡುವವರನ್ನು ಪದೇ ಪದೇ ನಂಬುವಷ್ಟು ದಡ್ಡರು ಯಾರೂ ಇಲ್ಲ ಎಂಬುದನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. 1958 ರಲ್ಲಿ ನಮ್ಮನ್ನು ಎಸ್ಟಿಗೆ ಸೇರಿಸಿದ ನಂತರ ರಾಜ್ಯದಲ್ಲಿ 2 ವಿಧಾನಸಭಾ ಕ್ಷೇತ್ರಗಳು ನಮಗೆ ಮೀಸಲಾಗಿದ್ದವು.

2001ರ ಜನಗಣತಿ ಆಧಾರದ ಮೇಲೆ 2008ರಲ್ಲಿ ಅಂದಿನ ಕೇಂದ್ರ ಸರ್ಕಾರ ಎಸ್ಟಿಗೆ ಮೀಸಲಾತಿ ಪ್ರಮಾಣವನ್ನು ಶೇ.7.5 ಕ್ಕೆ ಹೆಚ್ಚಿಸಿ, ರಾಜ್ಯದಲ್ಲಿ 15 ವಿಧಾನಸಭೆ ಮತ್ತು 2 ಲೋಕ ಸಭಾ ಕ್ಷೇತ್ರಗಳನ್ನು ನಿಗದಿ ಮಾಡಿದ್ದರ ಫಲವಾಗಿ ಇವತ್ತು ನಮ್ಮ ಸಮುದಾಯದ 15 ಜನ ಶಾಸಕರು, ಇಬ್ಬರು ಸಂಸದರು ಮೀಸಲಾತಿಯಲ್ಲಿ ಗೆದ್ದಿದ್ದಾರೆ.

ಜೊತೆಗೆ ಕೇಂದ್ರ ಸರ್ಕಾರ ಶಿಕ್ಷಣ, ಉದ್ಯೋಗದಲ್ಲೂ ಮೀಸ ಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ರಾಜ್ಯದಲ್ಲೂ ಕೇಂದ್ರದ ಮಾದರಿ ಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸಬೇಕೆಂಬುದು ಸಂವಿ ಧಾನ ಬದ್ದವಾದ ಒತ್ತಾಯ. ಆಗ್ರಹ ನಮ್ಮದಾಗಿದೆ ಎಂದು ಸ್ವಾಮೀಜಿ ಹೇಳಿದರು.

ಮೀಸಲಾತಿ ಹೆಚ್ಚಳಕ್ಕಾಗಿ ನಾವು ಮಾಡಿದ ಪಾದಯಾತ್ರೆ ಹಾಗೂ ಸಮುದಾಯದ ಸಿಂಹ  ಘರ್ಜನೆಯ ಫಲವಾಗಿ ಆಯೋಗ ರಚನೆಯಾಯಿತು. ಆಯೋಗ ತನ್ನ ವರದಿ ನೀಡಿ, 6 ತಿಂಗಳಾದರೂ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸುವ ವಿಚಾರದಲ್ಲಿ ಮೀನಾಮೇಷ ಮಾಡುತ್ತಿರುವುದು ಬೇಸರ ತಂದಿದೆ.

ಬರುವ ಫೆಬ್ರವರಿ 8 ಮತ್ತು 9 ರಂದು ಹಮ್ಮಿಕೊಂಡಿರುವ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಒಳಗಾಗಿ ಅಥವಾ ಜಾತ್ರೆಯ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ಮೀಸಲಾತಿ ಪ್ರಮಾಣ ಹೆಚ್ಚಳದ ನಿರ್ಧಾರ ಪ್ರಕಟಿಸುತ್ತಾರೆಂಬ ನಂಬಿಕೆ ಇದೆ. ಒಂದು ವೇಳೆ ಸರ್ಕಾರ ನಮ್ಮ ನಂಬಿಕೆಗೆ ಸ್ಪಂದಿಸದಿದ್ದರೆ ಜಾತ್ರೆಯ ಕೊನೆಯ ದಿನ ನಮ್ಮ ಮುಂದಿನ ತೀರ್ಮಾನವನ್ನು ಪ್ರಕಟಿಸುತ್ತೇವೆ. ಇದು ನಮ್ಮ ಅಂತಿಮ ಗಡುವು ಕೂಡಾ ಎಂದು ಸ್ವಾಮೀಜಿ ಖಡಕ್ ಆಗಿ ಹೇಳಿದರು.

ಮಠದ ಆವರಣದಲ್ಲಿ ಬಹಳ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ವಾಲ್ಮೀಕಿ ಭವನ ಹಾಗೂ ದೇವಸ್ಥಾನದ ಕಾಮಗಾರಿಗೆ ಸಚಿವರಾದ ರಮೇಶ್ ಜಾರಕಿಹೊಳಿ ಅವರು 5 ಕೋಟಿ ರೂ. ಮತ್ತು ಮಠದ ಸುತ್ತಲಿನ ರಸ್ತೆಗಳ ಅಭಿವೃದ್ಧಿಗೂ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.

ಮಾಜಿ ಸಚಿವರೂ, ಸಂಡೂರು ಕ್ಷೇತ್ರದ ಶಾಸಕ ಈ. ತುಕಾರಾಂ ಮಾತನಾಡಿ ರಾಜಕೀಯ, ಅಧಿಕಾರ ಶಾಶ್ವತ ಅಲ್ಲ. ಈ ಸಮಾಜದಲ್ಲಿ ಹುಟ್ಟಿರುವ ನಾವು ಪುಣ್ಯವಂತರು. ಸಮಾಜಕ್ಕಾಗಿ ನಮ್ಮಿಂದ ಏನಾದರೂ ಒಳ್ಳೆಯ ಕೊಡುಗೆ ನೀಡಬೇಕೆಂಬ ಹಂಬಲ ನಮ್ಮೆಲ್ಲರಲ್ಲಿ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಬಳ್ಳಾರಿ ಸಂಸದ ಅರಸಿಕೆರೆ ದೇವೇಂದ್ರಪ್ಪ ಮಾತನಾಡಿ, ಗುರುಪೀಠದ ಆಶ್ರಯದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಬಗ್ಗೆ ಸಚಿವರು, ಶಾಸಕರು ಗಮನ ಹರಿಸಬೇಕೆಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ 3ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷರೂ, ಜಲಸಂಪನ್ಮೂಲ ಸಚಿವರೂ ಆದ ರಮೇಶ್ ಜಾರಕಿಹೊಳಿ ಮಾತನಾಡಿ, ಮೀಸಲಾತಿ ಪ್ರಮಾಣ ಹೆಚ್ಚಳ ಆಗಬೇಕೆಂಬುದು ಸಂವಿಧಾನದ ಆಶಯವೂ ಕೂಡಾ ಆಗಿದ್ದು, ನಮ್ಮ ಸರ್ಕಾರ ನಮ್ಮ ಬೇಡಿಕೆಗೆ ಸಂವಿಧಾನದ ಅಡಿಯಲ್ಲಿ ಸ್ಪಂದಿಸುತ್ತದೆ ಎಂಬ ನಂಬಿಕೆ ನನಗೂ ಇದೆ. ಈ ವಿಚಾರವಾಗಿ ಶ್ರೀಗಳ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ  ಪ್ರಾಸ್ತಾವಿಕವಾಗಿ ಮಾತನಾಡಿದರು. 

ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಸಿರಗುಪ್ಪದ ಎಂ.ಎಸ್.ಸೋಮಲಿಂಗಪ್ಪ, ಹೆಚ್.ಟಿ.ಕೋಟೆಯ ಅನಿಲ್ ಚಿಕ್ಕಮಾದು, ಕಂಪ್ಲಿ ಗಣೇಶ್, ಮಸ್ಕಿ ಪ್ರತಾಪ್‌ಗೌಡ ಪಾಟೀಲ್, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಧರ್ಮದರ್ಶಿಗಳಾದ ಡಾ. ವಾಲ್ಮೀಕಿ, ಹೊಸಪೇಟೆಯ ಜಂಬಯ್ಯ ನಾಯಕ, ನಲುವಾಗಲು ನಾಗರಾಜಪ್ಪ, ಶಿವಮೊಗ್ಗದ ಬಸವರಾಜಪ್ಪ, ಕೆ.ಬಿ.ಮಂಜುನಾಥ್, ಭರತ್ ಮುಗದೂರು, ಹರ್ತಿಕೋಟೆ ವೀರೇಂದ್ರ ಸಿಂಹ, ಮಂಗೇನಹಳ್ಳಿ ಲೋಹಿತ್ ಕುಮಾರ್, ರಾಜನಹಳ್ಳಿ ಭೀಮಣ್ಣ, ಶಿಕ್ಷಕ ವಾಸನದ ಮಹಾಂತೇಶ್, ಪತ್ರಕರ್ತ ಜಿಗಳಿ ಪ್ರಕಾಶ್, ಪಾಳೇಗಾರ ನಾಗರಾಜ್, ಮದಕರಿ ಪಾಲಾಕ್ಷಪ್ಪ, ಮೆಣಸಿನಾಳ್ ಬಸವರಾಜ್, ಹರಪನಹಳ್ಳಿಯ ಹುಚ್ಚೆಂಗೆಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಶಂಕುಸ್ಥಾಪನೆ : ಮಠದ ಆವರಣದಲ್ಲಿ ವಾಲ್ಮೀಕಿ ಭವನ ಮತ್ತು ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಶ್ರೀಗಳ, ಸಂಸದರ, ಶಾಸಕರ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಸಚಿವರ ವಿಶೇಷ ಕರ್ತವ್ಯಾಧಿಕಾರಿ ರುದ್ರಯ್ಯ, ತುಂಗಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಯತೀಶ್ ಚಂದ್ರ, ಭದ್ರಾ ಅಧೀಕ್ಷಕ ಅಭಿಯಂತರ ಚಂದ್ರಹಾಸ್, ಮಲೇಬೆನ್ನೂರು ವಿಭಾಗದ ಇಇ ಚಿದಂಬರ್ ಲಾಲ್, ಎಇಇ ಸಂತೋಷ್ ಈ ವೇಳೆ ಹಾಜರಿದ್ದರು.

error: Content is protected !!