ಶ್ಯಾಗಲೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ, ಜ.11- ನಗರದಿಂದ ಶ್ಯಾಗಲೆ ಗ್ರಾಮಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಆಲ್‍ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಕೆಎಸ್‍ಆರ್‍ಟಿಸಿ ಡಿಪೋ ಆವರಣದಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಂತರ ಕೆಎಸ್‍ಆರ್‍ಟಿಸಿ ಡಿಪೋ ಅಧಿಕಾರಿಗೆ ಮನವಿ ಸಲ್ಲಿಸಿದರು.

ಶ್ಯಾಗಲೆ ಗ್ರಾಮಕ್ಕೆ ಸರ್ಕಾರಿ ಸಾರಿಗೆಯ ಕೊರತೆಯಿದೆ. ಶ್ಯಾಗಲೆ, ಲೋಕಿಕೆರೆ, ಯರವನಾಗತಿ ಹಳ್ಳಿ ಕ್ಯಾಂಪ್, ಕೋಲ್ಕುಂಟೆ, ತುರ್ಚಗಟ್ಟ, ಬೆಳವನೂರು ಈ ಎಲ್ಲಾ ಹಳ್ಳಿಯ ಮೂಲಗಳಿಂದ ಬಡ ರೈತ-ಕೂಲಿ ಕಾರ್ಮಿಕರ ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕೆ ನಗರಕ್ಕೆ ಬರುತ್ತಿದ್ದು, ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಬಡ ವಿದ್ಯಾರ್ಥಿ-ಕುಟುಂಬಗಳಿಗೆ ತೊಂದರೆ ಆಗುತ್ತಿದೆ. ಓದುವ ಕನಸು ಹೊತ್ತ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸಾರಿಗೆಯ ತೊಂದರೆಯಾಗಿ ತಮ್ಮ ಕನಸುಗಳಿಗೆ ಸ್ವತಃ ತಾವೇ ಎಳ್ಳುನೀರು ಬಿಟ್ಟಿದ್ದಾರೆ. ಈ ಸಮಸ್ಯೆಯ ಕುರಿತಾದ ಮನವಿ ಪತ್ರವನ್ನು ಗ್ರಾಮದ ನಾಗರಿಕರು, ವಿದ್ಯಾರ್ಥಿಗಳೆಲ್ಲರೂ ಸೇರಿ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಸ್ತುತ ದಿನಮಾನಗಳಲ್ಲಿ ಶಾಲಾ- ಕಾಲೇಜುಗಳಿಗೆ ಹೋಗಲು ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆಯೇ ಇಲ್ಲದಂತಾಗಿದೆ. ಒಂದು ದಿನಕ್ಕೆ 60 ರೂ. ಖರ್ಚು, ವರ್ಷಕ್ಕೆ 21,900 ರೂಗಳು. ಇಷ್ಟು ಖರ್ಚನ್ನು ವ್ಯಯಿಸುವ ಆರ್ಥಿಕ ಸಾಮರ್ಥ್ಯ ಇಲ್ಲದ ಬಡ ಕುಟುಂಬದವರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರಿ ಸಾರಿಗೆ ಇಲಾಖೆಯ ಜವಾಬ್ದಾರಿ ಎಂದು ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ. 

ಪ್ರತಿಭಟನೆಯಲ್ಲಿ ಎಐಡಿಎಸ್ ಒ ಜಿಲ್ಲಾ ಉಪಾಧ್ಯಕ್ಷರಾದ ನಾಗಜ್ಯೋತಿ, ಜಂಟಿ ಕಾರ್ಯದರ್ಶಿ ಕಾವ್ಯ, ಸಂಘಟನಾಕಾರರಾದ ಪುಷ್ಪ, ಸ್ವಪ್ನ ಹಾಗೂ ಕಾವೇರಿ, ಕವಿತ, ಶಿಲ್ಪ, ಮಂಜು ಸೇರಿದಂತೆ ಶ್ಯಾಗಲೆ, ಲೋಕಿಕೆರೆ ಕ್ಯಾಂಪ್, ಲೋಕಿಕೆರೆ  ಗ್ರಾಮದ ವಿದ್ಯಾರ್ಥಿಗಳು ಭಾಗವಗಹಿಸಿದ್ದರು.

error: Content is protected !!