ಮೆಳ್ಳೇಕಟ್ಟೆ ಭಕ್ತರು ಮಠಕ್ಕೆ ಕೊಟ್ಟ ಜಾಗದಲ್ಲಿ ಹಾಲಿನ ಡೈರಿಗೆ ಮಳಿಗೆ ಕಟ್ಟಿಸಿಕೊಟ್ಟ ಸಿರಿಗೆರೆ ಶ್ರೀ

ದಾವಣಗೆರೆ, ಮಾ.29-ಮಠದ ಹೆಸರಿಗೆ ಬರೆಯಲಾದ ಜಾಗವನ್ನು ಮರಳಿ  ಅದೇ ಗ್ರಾಮದ ಹಾಲಿನ ಡೈರಿಗೆ ಹಿಂತಿರುಗಿಸಿದ್ದಲ್ಲದೇ, ಅಲ್ಲಿ ಮಳಿಗೆಯನ್ನು ಕಟ್ಟಿಸಿಕೊಟ್ಟಿರುವ ಶ್ರೀ ತರಳಬಾಳು ಜಗದ್ಗುರುಗಳ ಔದಾರ್ಯವನ್ನು ಗ್ರಾಮಸ್ಥರು ಕೊಂಡಾಡಿ, ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಸುಮಾರು 50 ವರ್ಷಗಳ ಹಿಂದೆ ಶ್ರೀ ತರಳಬಾಳು ಮಠಕ್ಕೆ ಮೆಳ್ಳೇಕಟ್ಟೆ ಗ್ರಾಮದಲ್ಲಿನ ಜಾಗವನ್ನು ದಾನವಾಗಿ ಬರೆಯಲಾಗಿತ್ತು.  ಆಗ ಜಾಗ ಖಾಲಿ ಇತ್ತು. ಗ್ರಾಮದಲ್ಲಿ ಹಾಲಿನ ಡೈರಿಗೆ ಸರಿಯಾದ ಕೊಠಡಿ ಇಲ್ಲದ ಕಾರಣ ಆ ಜಾಗದಲ್ಲಿ
ಕೊಠಡಿ ನಿರ್ಮಿಸಿಕೊಡುವಂತೆ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಲ್ಲಿ ಸಂಘವು ಮನವಿ ಮಾಡಿತ್ತು.   ಮಠದ ಖರ್ಚಿನಿಂದಲೇ ನೂತನ ಕೊಠಡಿ ಕಟ್ಟಿಸಿ ಕೊಡುವುದಕ್ಕೆ  ಶ್ರೀಗಳು ಸಮ್ಮತಿಸಿದ್ದರು.

ರೈತರ ಬಾಳಿನ ಆಶಾಕಿರಣ ಎನ್ನುವ ಮಾತಿಗೆ ಸಾಕ್ಷಿಯಾದ ಗುರುಗಳು, ಕೊಠಡಿಯನ್ನು ನಿರ್ಮಿಸಿ ಕೊಡುವ ಮೂಲಕ ಗ್ರಾಮದ ಜನರ ಜೀವನಕ್ಕೆ ಆಧಾರವಾಗಿರುವ ಹಾಲು ಉತ್ಪಾದಕರ  ಸಂಘಕ್ಕೆ ದಾರಿದೀಪವಾದರು.

ಜಗದ್ಗುರುಗಳು ಕಳೆದ ಮಾ.26ರ ಶನಿವಾರ ಗ್ರಾಮಕ್ಕೆ ಆಗಮಿಸಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿ ಮತ್ತು ಸದಸ್ಯರು ಹಾಗು ಗ್ರಾಮಸ್ಥರ  ಸಮ್ಮುಖದಲ್ಲಿ   ಕೊಠಡಿ ಉದ್ಘಾಟನೆ ಮಾಡಿ, ಅಧ್ಯಕ್ಷರ ಕೈಗೆ ಕೊಠಡಿಯ ಕೀಯನ್ನು ಹಸ್ತಾಂತರಿಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೊಠಡಿ ನಿರ್ಮಾಣಕ್ಕೆ ಶ್ರಮಿಸಿದ ಸಿ.ಟಿ.ಕುಮಾರ ಮತ್ತು  ಸಿ.ಎಂ.ಮಾರುತಿ, ಚನ್ನಬಸಪ್ಪ, ಗುರುಸಿದ್ದಪ್ಪ, ಎಂ.ಎಂ.ಗಿರೀಶ್, ಎ.ಇ.ನಾಗರಾಜ್, ಮಹಿಳಾ ಹಾಲು ಉತ್ಪಾದಕರ ಸಂಘದ ಸದಸ್ಯರು ಹಾಜರಿದ್ದರು.

error: Content is protected !!