ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಿ

ಹರಪನಹಳ್ಳಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಹರಪನಹಳ್ಳಿ, ಮಾ. 28- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಪಟ್ಟಣದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕೇಂದ್ರೀಯ ಜಂಟಿ ಕಾರ್ಮಿಕ ಸಂಘಟನೆ ತಾಲ್ಲೂಕು ಘಟಕದ ಆಶ್ರಯದಲ್ಲಿ  ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಪ್ರವಾಸಿ ಮಂದಿರ ವೃತ್ತದಿಂದ ಹೊಸಪೇಟೆ ರಸ್ತೆ ಮೂಲಕ ಇಜಾರಿ ಶಿಸರಪ್ಪ ವೃತ್ತಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಿದರು.

ಅಂಗನವಾಡಿ ಮತ್ತು ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತರಿಗೆ ಕನಿಷ್ಟ 21 ಸಾವಿರ ರೂ.ಗಳ ವೇತನ ನೀಡಬೇಕು. ರಾಷ್ಟ್ರೀಯ ಆರ್ಥಿಕತೆಯನ್ನು ಪುನರುಜ್ಜೀವನ ಗೊಳಿಸಲು ಶ್ರೀಮಂತರಿಗೆ ಆಸ್ತಿ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಇತರೆ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು.  ಪೆಟ್ರೋ ಲಿಯಂ ಉತ್ಪನ್ನದ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದು ಮತ್ತು ಬೆಲೆ ಏರಿಕೆಯನ್ನು ನಿಗ್ರಹಿಸಲು ದೃಢವಾದ ಪರಿಹಾರ ಕ್ರಮ ಕೈಗೊಳ್ಳುವುದು, ಹರಪನಹಳ್ಳಿಯಲ್ಲಿ ಬಡ ಹಿಂದುಳಿದ ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆ ಮಾಡಬೇಕು. ಹರಪನಹಳ್ಳಿಯಲ್ಲಿ ಇಎಸ್ ಐ ಆಸ್ಪತ್ರೆ ಸ್ಥಾಪನೆ ಮಾಡಬೇಕು, ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಹರಪನಹಳ್ಳಿಯಲ್ಲಿ ಕಾರ್ಮಿಕ ಭವನ ಸ್ಥಾಪನೆ ಮಾಡಬೇಕು, ಕರ್ನಾಟಕ ರಾಜ್ಯ ಟೈಲರ್ ಮಂಡಳಿ ಸ್ಥಾಪನೆ ಮಾಡಬೇಕು, ದೇವದಾಸಿ ಮಕ್ಕಳ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು , ಮಾಜಿ ದೇವದಾಸಿಯರಿಗೆ 3 ಎಕರೆ ಜಮೀನು, ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಅವರು   ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಮುಖಂಡರಾದ ಟಿ.ವಿ. ರೇಣುಕಮ್ಮ, ಗುಡಿಹಳ್ಳಿ ಹಾಲೇಶ್, ಬಳಿಗಾನೂರು ಕೊಟ್ರೇಶ್, ಹೆಚ್. ವೆಂಕಟೇಶ, ಹುಲಿಕಟ್ಟಿ ರಹಮತ್, ಬಿ. ಹನುಮಂತಪ್ಪ, ದಾದಾಪೀರ್, ಭರಮಪ್ಪ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

error: Content is protected !!