ದಾವಣಗೆರೆ, ಮಾ.28- ಎನ್ಪಿಎಸ್ ಪದ್ಧತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಮರು ಸ್ಥಾಪಿಸಬೇಕು, ಅಂಚೆ ಇಲಾಖೆಯ ಖಾಸಗೀಕರಣ ಕೈ ಬಿಡಬೇಕು ಎಂದು ಆಗ್ರಹಿಸಿ, ಅಂಚೆ ನೌಕರರ ಸಂಘಗಳ ಜಂಟಿ ಕ್ರಿಯಾ ಸಮಿತಿ ದಾವಣಗೆರೆ ವಿಭಾಗದ ನೇತೃತ್ವದಲ್ಲಿ ಅಂಚೆ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು.
ಅಂಚೆ ಇಲಾಖೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ಪ್ರಯುಕ್ತ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿನ ತಮ್ಮ ಕೆಲಸಗಳಿಂದ ದೂರ ಸರಿದು, ಕಚೇರಿಗೆ ಬೀಗ ಹಾಕಿ ಪ್ರತಿಭಟನಾ ಧರಣಿ ನಡೆಸಿದ ನೌಕರರು, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ನಜ್ಮಾ ಅವರಿಗೆ ಮನವಿ ಸಲ್ಲಿಸಿ, ಸಂವಹನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ರವಾನಿಸಲಾಯಿತು.
ಅಂಚೆ ಇಲಾಖೆಯಲ್ಲಿನ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಜನವರಿ 2020ರಿಂದ ಜೂನ್ 2022ರವರೆಗೆ ತಡೆ ಹಿಡಿಯಲಾಗಿರುವ ಡಿ.ಎ., ಡಿ.ಆರ್. ಬಾಕಿಯನ್ನು ಶೀಘ್ರದಲ್ಲಿ ಪಾವತಿಸಬೇಕು. ಎಂಟನೇ ವೇತನ ಆಯೋಗವನ್ನು ರಚಿಸುವುದು ಹಾಗೂ ವಾರಕ್ಕೆ ಐದು ದಿನ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕು. ಜಿಡಿಎಸ್ ನೌಕರರಿಗೆ 12, 24, 36 ವರ್ಷಗಳಿಗೊಮ್ಮೆ ವೇತನ ಹೆಚ್ಚಳ ಮಾಡಬೇಕು. ಅಂಚೆ ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ಜಿಡಿಎಸ್ ನೌಕರರಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಕಮಲೇಶ್ಚಂದ್ರ ವರದಿಯನ್ನು ಜಿಡಿಎಸ್ ನೌಕರರಿಗೆ ಅನುಷ್ಠಾನಗೊಳಿಸಬೇಕು ಹಾಗೂ 180 ದಿನಗಳ ಗಳಿಕೆ ರಜೆಯನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಅಂಚೆ ಕಛೇರಿಗಳಿಗೆ ಹಾಗೂ ಬ್ರಾಂಚ್ ಆಫೀಸ್ಗಳಲ್ಲಿ ಇರುವ ನೆಟ್ವರ್ಕ್ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನದಲ್ಲಿರುವ ನ್ಯೂನತೆ ಸರಿಪಡಿಸಬೇಕು. ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಎಲ್ಲಾ ಅಂಚೆ ನೌಕರರಿಗೆ ವಿಶೇಷ ರಜೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಬೇಕು. ಬಡ್ತಿಗಾಗಿ ಅತ್ಯುತ್ತಮ ಬೆಂಚ್ ಮಾರ್ಕ್ ಮಾನದಂಡವನ್ನು ತೆಗೆದುಹಾಕಬೇಕು.
ಪ್ರತಿಭಟನೆಯಲ್ಲಿ ಮುಖಂಡರಾದ ಎಸ್. ಕೃಷ್ಣಮೂರ್ತಿ, ಹೆಚ್. ಮಲ್ಲಪ್ಪ, ಕೆ.ಎಂ. ಸತೀಶ್, ಜೆ. ಲಿಂಗಾನಾಯ್ಕ್ ಸೇರಿದಂತೆ ಅಖಿಲ ಭಾರತ ಅಂಚೆ ನೌಕರರ ಸಂಘಗಳು, ರಾಷ್ಟ್ರೀಯ ಅಂಚೆ ನೌಕರರ ಸಂಘಗಳು, ಗ್ರಾಮೀಣ ಅಂಚೆ ಸೇವಕರ ಸಂಘಗಳ ದಾವಣಗೆರೆ ವಿಭಾಗದ ಪದಾಧಿಕಾರಿಗಳು, ನೌಕರರು ಭಾಗವಹಿಸಿದ್ದರು.