ಜಿಲ್ಲೆಯಲ್ಲಿ ಕಾರ್ಮಿಕರ ಸಂಘಟನೆಗಳ ಮುಷ್ಕರ

ದಾವಣಗೆರೆ, ಮಾ.28- ರೈತ-ಕಾರ್ಮಿಕ ವಿರೋಧಿ ನೀತಿ ಖಂಡಿಸಿ,  ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಗರದಲ್ಲೂ ಯಶಸ್ವಿಯಾಗಿ ನಡೆಯಿತು.

ಜಯದೇವ ವೃತ್ತದಿಂದ ಆರಂಭಿಸಿದ ಪ್ರತಿಭಟನಾ ಮೆರವಣಿಗೆ    ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶಿವಪ್ಪಯ್ಯ ವೃತ್ತದ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆಸಿಟಿಯು ಮುಖಂಡ ಆವರಗೆರೆ ಹೆಚ್.ಜಿ. ಉಮೇಶ್ ಅವರು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಖಾತ್ರಿಪಡಿಸಬೇಕು. ವಿದ್ಯುಚ್ಛಕ್ತಿ ಮಸೂದೆ ಹಿಂಪಡೆಯಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ತಡೆಯಬೇಕು. ಎನ್‌ಎಂಪಿ ರದ್ದುಗೊಳಿಸುವಂತೆ ಒತ್ತಾಯಿಸಿದರು.

ಎಐಟಿಯುಸಿ ಮುಖಂಡ ರಾಘವೇಂದ್ರ ನಾಯರಿ ಮಾತನಾಡಿ, ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ಮಾಸಿಕ 7500 ಆಹಾರ ಮತ್ತು ಆದಾಯ ಬೆಂಬಲ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿ, ಈ ಯೋಜನೆ ಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡ ಬೇಕು. ಕಾರ್ಮಿಕ ಕಲ್ಯಾಣ ಮಂಡಳಿಯ ಅಕ್ರಮ ತಡೆಗಟ್ಟಿ, ಬೋಗಸ್ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದರು.

ಎಐಯುಟಿಯುಸಿ ಮುಖಂಡ ಕೈದಾಳೆ ಮಂಜುನಾಥ್ ಮಾತನಾಡಿ, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರು ಸೇರಿದಂತೆ ಇತರೆ ಕೆಲಸಗಾರರಿಗೆ ಕನಿಷ್ಟ ವೇತನ ನಿಗದಿಗೊಳಿಸಬೇಕು. ಕೋವಿಡ್ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸುವ ಜೊತೆಗೆ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ತೈಲ ಬೆಲೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಂಜುನಾಥ್ ಒತ್ತಾಯಿಸಿದರು.

ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಆವರಗೆರೆ ಚಂದ್ರು, ಐರಣಿ ಚಂದ್ರು, ಕೆ.ಹೆಚ್. ಆನಂದರಾಜ್, ಆವರಗೆರೆ ವಾಸು, ಯರಗುಂಟಿ ಸುರೇಶ್, ಜಬೀನಾ ಖಾನಂ, ತಿಪ್ಪೇಸ್ವಾಮಿ, ವಿಶ್ವನಾಥ್, ಎಂ.ಬಿ. ಶಾರದಮ್ಮ, ಸರೋಜಮ್ಮ, ಪಿ.ಕೆ. ಲಿಂಗರಾಜ್, ಎಸ್.ಜಯಪ್ಪ, ನಾಗರಾಜ್, ನಾಗೇಶ್ವರಿ, ಸಂಧ್ಯಾ, ಬಿ. ಆನಂದಮೂರ್ತಿ, ತಿಪ್ಪೇಸ್ವಾಮಿ ಮತ್ತಿತರರಿದ್ದರು.

ಸಿಐಟಿಯು ಪ್ರತಿಭಟನೆ

ದಾವಣಗೆರೆ, ಮಾ. 28- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಜಿಲ್ಲಾ ಸಮಿತಿ ವತಿಯಿಂದ ನಗರದ ವಿಶ್ವೇಶ್ವರಯ್ಯ ಉದ್ಯಾನ ವನದ ಬಳಿ ಪ್ರತಿಭಟನೆ ನಡೆಸಲಾಯಿತು.

ಔಷಧ ಮಾರಾಟ ಪ್ರತಿನಿಧಿಗಳು, ಎಲ್‌ಐಸಿ ಏಜೆಂಟರು, ಎಲ್‌ಐಸಿ ನೌಕರರು, ಹಾಸ್ಟೆಲ್ ಹೊರಗುತ್ತಿಗೆ ನೌಕರರು, ಕಟ್ಟಡ ಕಾರ್ಮಿಕರು, ಗ್ರಾಮ ಪಂಚಾಯತಿ ನೌಕರರು, ಹಮಾಲಿಗಳು, ಬೀದಿ ಬದಿ ವ್ಯಾಪಾರಿಗಳು, ಬೀಡಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಬೇಕು. ಪೆಟ್ರೋಲಿಯಂ ವಸ್ತುಗಳ ಮೇಲಿನ ಕೇಂದ್ರೀಯ ಅಬಕಾರಿ ತೆರಿಗೆ ಕಡಿಮೆ ಮಾಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ 7500 ನೇರ ನಗದು ವರ್ಗಾವಣೆ ಮಾಡಬೇಕು. ಪ್ರತಿ ವ್ಯಕ್ತಿಗೂ ತಲಾ 10 ಕೆಜಿ ಆಹಾರ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಪ್ರತಿಭಟನಾಕಾರರು ಆಗ್ರಹಿಸಿದರು.

 ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ಹೆಚ್. ಆನಂದರಾಜ್, ಗಿರೀಶ್, ವೆಂಕಟೇಶ್, ಶಿವಮೂರ್ತಿ, ಮಹಾದೇವಪ್ಪ, ಹಾಲೇಶ್ ನಾಯಕ, ಏಕಾಂತಪ್ಪ, ರವಿ, ಶ್ರೀನಿವಾಸಮೂರ್ತಿ, ವೆಂಕಟೇಶಪ್ಪ, ಗುಡ್ಡಪ್ಪ, ನೇತ್ರಾವತಿ, ಮಹಾವೀರ ಮತ್ತಿತರರು ಭಾಗವಹಿಸಿದ್ದರು. 

error: Content is protected !!