ಸಭ್ಯ ಸಮಾಜ ನಿರ್ಮಾಣಕ್ಕೆ ಲೇಖನಿ ಎತ್ತಿ

ದಾವಣಗೆರೆ, ಮಾ. 27- ಸಭ್ಯ ಸಮಾಜ ನಿರ್ಮಾಣಕ್ಕಾಗಿ ಯುವಕರು ಲೇಖನಿ ಎತ್ತಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಇಳಕಲ್ಲು ವಿಶ್ರಾಂತ ಪ್ರಾಚಾರ್ಯ ಡಾ.ಶಂಭು ಬಳಿಗಾರ ಹೇಳಿದರು.

ಸಮೀಪದ ಎಲೆಬೇತೂರಿನ ಮಾಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಆಯೋಜಿಸ ಲಾಗಿದ್ದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.

ಯುವಕರಿಗೆ ಕನ್ನಡ ಸಾಹಿತ್ಯ ಪರಂಪರೆಯ ಅರಿವಿರಬೇಕು. ಜೀವನದ ಮೌಲ್ಯ, ನೆಲದ ಸಂಸ್ಕೃತಿಯ ಬಗ್ಗೆ ಅರಿವಿಲ್ಲದ ಬರವಣಿಗೆ ಅನಾಹುತಕ್ಕೆ ಕಾರಣವಾಗುತ್ತದೆ ಎಂದೂ ಸಹ ಅವರು ಇದೇ ವೇಳೆ ಎಚ್ಚರಿಸಿದರು.

ನಮ್ಮ ಸಂಸ್ಕೃತಿ, ಮಣ್ಣಿನ ಗುಣಗಳು ಲೇಖನಿ ಮೂಲಕ ಮುಂದಿನ ಪೀಳಿಗೆಗೆ ತಲುಪಬೇಕು. ಆ ಮೂಲಕ  ಅವರು ಸಮಾಜದಲ್ಲಿ ಸಭ್ಯರಾಗಿ ಬಾಳುವಂತಾಗಲಿ ಎಂದು ಆಶಿಸಿದರು.

ಸುಖ, ಸಮೃದ್ಧಿಯ ಜೀವನ ನಡೆಸುತ್ತಿದ್ದ ನಾವು ಇಂದು ಯಾವ ಸ್ಥಿತಿಗೆ ತಲುಪಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಹಳ್ಳಿಗಳ ಮನೆಗಳಲ್ಲಿ ಅರ್ಧ ಜನರಿದ್ದರೆ, ಅರ್ಧ ದನಗಳಿ ರುತ್ತಿದ್ದವು. ಪಡಸಾಲೆಯಲ್ಲಿ ಕಾಳು-ಕಡಿ ತುಂಬಿರುತ್ತಿದ್ದವು. ಉತ್ಕೃಷ್ಟ ಆಹಾರ ಸೇವಿಸುತ್ತಾ ಸುಖವಾಗಿದ್ದ ರೈತರ ಮನೆಗಳಲ್ಲೀಗ ಆಕಳು-ಎಮ್ಮೆ ಮರೆಯಾಗಿವೆ. ಎತ್ತುಗಳ ಜಾಗವನ್ನು ಟ್ರ್ಯಾಕ್ಟರ್‌ಗಳು ಆಕ್ರಮಿಸಿವೆ. ದನಗಳಿಲ್ಲದೆ, ಗೊಬ್ಬರ ಇಲ್ಲ. ರಾಸಾಯನಿಕ ಗೊಬ್ಬರಗಳಿಂದಾಗಿ ಭೂಮಿ ಬರಡಾಗುವ ಹಂತಕ್ಕೆ ತಲುಪಿದೆ. ಸ್ವಾವಲಂಬಿಗಳಾಗಿದ್ದವರು ನಮ್ಮ ಅಸ್ಮಿತೆ, ನಮ್ಮತನವನ್ನೇ ಕಳೆದುಕೊಳ್ಳುವಷ್ಟರ ಮಟ್ಟಿಗೆ ಪರಾವಲಂಬಿಗಳಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಫೈವ್ ಸ್ಟಾರ್ ಸಂಸ್ಕೃತಿಯ ಸುಖವಿರದಿದ್ದರೂ ಬದುಕಿನಲ್ಲಿ ಸ್ವಾಲವಂಬನೆ, ನೆಮ್ಮದಿ ಇತ್ತು. ಆದರೆ ಆಧುನಿಕ ಸಂಸ್ಕೃತಿಯಿಂದಾಗಿ ಸ್ವಾರ್ಥ ಮನೆ ಮಾಡಿದೆ. ಪರಸ್ಪರ ಉಪಕಾರ ಮಾಡುವ ಮನೋಭಾವ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಯುವಕರು ಸಭ್ಯ ಸಮಾಜ ನಿರ್ಮಾಣಕ್ಕಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಪಂಪ ಭಾರತದಲ್ಲಿ ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿಸಿದ ಶ್ರೀ ಕೃಷ್ಣ,  ಕೌರವರನ್ನು ಬಿಟ್ಟು ಪಾಂಡವರ ಕಡೆ ಬರುವಂತೆ ಹೇಳಿದಾಗ, ಕರ್ಣ ಅಧಿಕಾರದ ಆಸೆಗಾಗಿ ತನ್ನ ಸ್ನೇಹ, ನಂಬಿಕೆಗೆ ದ್ರೋಹ ಬಗೆಯುವುದಿಲ್ಲ ಎಂಬ ದೃಷ್ಟಾಂತ ಸೇರಿದಂತೆ ರಾಘವಾಂಕನ ಸಾಹಿತ್ಯ, ಶರಣರ ವಚನಗಳಲ್ಲಿನ ಜೀವನ ಮೌಲ್ಯಗಳನ್ನು ಉದಾಹರಿಸಿದ ಬಳಿಗಾರ ಅವರು, ಇಂತಹ ಸಾಹಿತ್ಯದ ಮೌಲ್ಯಗಳನ್ನು ಯುವಕರು ಅರಿತಿರಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಎಂ.ಜಿ. ಈಶ್ವರಪ್ಪ, ಶಾಸಕ ಎಂ.ಪಿ. ರೇಣುಕಾಚಾರ್ಯ,  ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

error: Content is protected !!