ಅವಾಂತರ ಸೃಷ್ಟಿಸಿದ ಅನಿರೀಕ್ಷಿತ ಮಳೆ

ದಾವಣಗೆರೆ ಕೆ.ಆರ್. ಮಾರುಕಟ್ಟೆಯಲ್ಲಿ ಮಳೆ ನೀರಿನಿಂದ ತೇವಗೊಂಡಿದ್ದ ಆಹಾರ ಧಾನ್ಯಗಳನ್ನು ಶನಿವಾರ ಒಣಗಿಸುತ್ತಿರುವುದು

ಅಂಗಡಿ ಮಳಿಗೆಗೆ ನೀರು ನುಗ್ಗಿ ಆಹಾರ ಪದಾರ್ಥ ನೀರು ಪಾಲು, ಲಕ್ಷಾಂತರ ರೂ. ನಷ್ಟ

ರಸ್ತೆಗಳು, ಮನೆಗಳು, ಬೆಳೆ ಹಾನಿ, ಸ್ಮಾರ್ಟ್ ಸಿಟಿ ಕಾಮಗಾರಿಗೆ ನಗರ ಜನತೆ ಆಕ್ರೋಶ

ದಾವಣಗೆರೆ, ಜ.9- ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ತಡ ರಾತ್ರಿವರೆಗೆ ಸುರಿದ ಅನಿರೀಕ್ಷಿತ ಮಳೆ ಭಾರೀ ಅವಾಂತರ ಸೃಷ್ಟಿಸಿದ್ದು, ನಗರ ಸೇರಿದಂತೆ ತಾಲ್ಲೂಕುಗಳ ಹಲವೆಡೆ ರಸ್ತೆ, ಮನೆಗಳು ಹಾಗೂ ಬೆಳೆಗಳಿಗೆ ಹಾನಿಯಾಗಿದೆ.

ನಗರದಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನತೆ ರಾತ್ರಿ ಇಡೀ ಜಾಗರಣೆ ಮಾಡುವಂತಾಗಿತ್ತು. ಇನ್ನು ಚಾಮರಾಜ ಪೇಟೆ, ಕೆ.ಆರ್. ಮಾರುಕಟ್ಟೆಯಲ್ಲಿದ್ದ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ನೀರು ಪಾಲಾದವು. ಕೆಲವೆಡೆ ವಿದ್ಯುತ್ ಕಂಬಗಳನ್ನೂ ಮಳೆ ಧರೆಗುಳಿಸಿದೆ.

ಹಲವೆಡೆ ಜಲಸಿರಿ, ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ಪೈಪ್ ಲೈನ್ ಅಳವಡಿಸಲು ತೆಗೆಯಲಾಗಿದ್ದ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರೆ, ಮುಚ್ಚಲಾಗಿದ್ದ ಗುಂಡಿಗಳ ಮೇಲಿನ ಮಣ್ಣು ಕುಸಿದಿದ್ದರಿಂದ ಬೆಳಿಗ್ಗೆ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗಿತ್ತು. 

ಬೇತೂರು ರಸ್ತೆಯಲ್ಲಿ ರಾಜ ಕಾಲುವೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗಿ ಗೋಡೆ ಕುಸಿದಿದೆ. ಅರಳಿ ಮರದ ಬಳಿ ಹಣ್ಣು ವ್ಯಾಪಾರಿ ಯೊಬ್ಬರ  ಗಾಡಿ ಮೇಲೆ ತೆಂಗಿನ ಮರ ಬಿದ್ದಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಗಳಿಂದಲೇ ಅವಾಂತರ ಸೃಷ್ಟಿಯಾಗುತ್ತಿದೆ ಎಂದು ಆಕ್ರೋಶ ಗೊಂಡ ಕೆಲವರು ಕಾಮಗಾರಿ ಮಾಡಲು ನಿಂತಿದ್ದ ಜೆಸಿಬಿಗೆ ಕಲ್ಲು ಹೊಡೆದು ಗಾಜು ಪುಡಿ ಮಾಡಿದ ಘಟನೆ ನಡೆದಿದೆ.

ಚಾಮರಾಜ ಪೇಟೆಯಲ್ಲಿನ ತಗ್ಗು ಪ್ರದೇಶದಲ್ಲಿನ ಸುಮಾರು 30ಕ್ಕೂ ಹೆಚ್ಚು ಅಂಗಡಿ ಮಳಿಗೆಗಳಿಗೆ ಮಳೆ ನೀರು ನುಗ್ಗಿ ಮಸಾಲೆ ಪದಾರ್ಥಗಳು ಸೇರಿದಂತೆ ಆಹಾರ ಪದಾರ್ಥಗಳಿಗೆ ಹಾನಿ ಮಾಡಿದೆ. ಶನಿವಾರ ಬೆಳಿಗ್ಗೆ ತೇವಗೊಂಡಿದ್ದ ಆಹಾರ ಪದಾರ್ಥಗಳನ್ನು ವ್ಯಾಪಾರಿಗಳು ಒಣಗಿಸುತ್ತಿದ್ದುದು ಕಂಡು ಬಂತು.

ಮೇಯರ್ ಅಜಯ್ ಭೇಟಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಾದ ಮಾಗನೂರು ಬಸಪ್ಪ ಶಾಲೆ, ಬೇತೂರು ರಸ್ತೆ, ಭರತ್ ಕಾಲೋನಿ, ಚಾಮರಾಜ ಪೇಟೆ, ಬಿ.ಡಿ ಲೇ ಔಟ್ ಮತ್ತಿತರೆ ಕಡೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಹಾಗೂ ಆಯುಕ್ತ ವಿಶ್ವನಾಥ ಮುದಜ್ಜಿ ಭೇಟಿ ನೀಡಿ  ಪರಿಶೀಲಿಸಿದರು.

ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿದ್ದನ್ನು ಮೇಯರ್ ತಂಡ ಗಮನಿಸಿತು. ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಸ್ಮಾರ್ಟ್ ಕಾಮಗಾರಿಯಿಂದಾಗಿ ಹಾಳಾಗಿದ್ದ ರಸ್ತೆಯಲ್ಲಿ ಓಡಾಟ ದುಸ್ತರವಾಗಿತ್ತು. ಮಣ್ಣು ಹಾಕಿ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಯಿತು. 

ಮತ್ತೊಂದು ಸ್ಮಾರ್ಟ್ ಕಾಮಗಾರಿ ಸ್ಥಳವಾದ ಎಲ್‌ಐಸಿ ಕಾಲೋನಿಯಲ್ಲಿ ರಾಜಕಾಲುವೆ ನಿರ್ಮಾಣ ಕಾಮಗಾರಿ ವೇಳೆ ಲಿಂಕ್ ಕೊಡದ ಪರಿಣಾಮ ಪ್ರತಿ ಬಾರಿ ಮಳೆ ಬಂದು ಸಮಸ್ಯೆ ಯಾಗುವಂತೆ ಈ ಬಾರಿಯೂ ನೀರು ನಿಂತಿತ್ತು. ಪಾಲಿಕೆ ವತಿಯಿಂದ ನಿಂತ ನೀರು ತೆಗೆಸಲಾಯಿತು.

ಮೇಯರ್ ಭೇಟಿ ವೇಳೆ  ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಕೆ.ಎನ್. ವೀರೇಶ್, ಮಂಜಾನಾಯ್ಕ, ಮುಖಂಡ ನರೇಂದ್ರ ಕುಮಾರ್ ಇತರರು ಇದ್ದರು.

error: Content is protected !!