ರೇಣುಕಾಚಾರ್ಯರ ಜಯಂತಿ ಬೇಡ ರೇವಣಸಿದ್ದೇಶ್ವರ ಜಯಂತಿ ಮಾಡಿ

ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯಲು ಕಾಗಿನೆಲೆ ಶ್ರೀಗಳ ಆಗ್ರಹ

ಮಲೇಬೆನ್ನೂರು, ಮಾ.27- ರಾಜ್ಯ ಸರ್ಕಾರ ಘೋಷಿಸಿರುವ ಶ್ರೀ ರೇಣುಕಾಚಾರ್ಯರ ಜಯಂತಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಆಗ್ರಹಿಸಿದರು. 

ಬೆಳ್ಳೂಡಿ ಶಾಖಾಮಠದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀಮಠದ 6ನೇ ವಾರ್ಷಿಕೋತ್ಸವ ಮತ್ತು ಶ್ರೀ ಕನಕ ಜಯಂತ್ಯೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಶ್ರೀ ರೇಣುಕಾಚಾರ್ಯರಿಗಿಂಥ ಆದಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರರು ಮೂಲ ಪುರುಷರಾಗಿ ರುವುದರಿಂದ, ಶ್ರೀ ರೇಣುಕಾಚಾರ್ಯರ ಜಯಂತಿ ಬದಲಾಗಿ ಅದೇ ದಿನದಂದು `ಶ್ರೀ ರೇವಣಸಿದ್ಧೇಶ್ವರ ಜಯಂತಿ’ ಎಂದು ಘೋಷಿಸಬೇಕು ಎಂದು ಸ್ವಾಮೀಜಿ ಅವರು ಮನವಿ ಪತ್ರದ ಮೂಲಕ ರಾಜ್ಯ ಸರ್ಕಾರವನ್ನು ಕೋರಿದರು. ವಾಸ್ತವದಲ್ಲಿ ರೇಣುಕಾಚಾರ್ಯ ಎಂಬ ವ್ಯಕ್ತಿಯೇ ಇಲ್ಲ, ಈ ಬಗ್ಗೆ ಅನೇಕ ಶಾಸನಗಳಲ್ಲಿ ಉಲ್ಲೇಖಿತವಾಗಿದ್ದು, ಶ್ರೀ ರೇವಣಸಿದ್ಧರನ್ನೇ ಆದಿ ರೇಣುಕ, ರೇಣುಕ, ರೇಣುಕಾಚಾರ್ಯ, ರೇಣುಕಾರಾಧ್ಯ ಇನ್ನೂ ಮುಂತಾದ ಕಲ್ಪಿತ, ಪೌರಾಣಿಕ ನಾಮಗಳನ್ನು ಸೃಷ್ಠಿಸಿ, ಹಾಲುಮತದ ಕುಲಗುರು, ಆದಿ ಜಗದ್ಗುರು ಶ್ರೀ ರೇವಣಸಿದ್ಧರ ನಾಮವನ್ನು ದುರ್ಬಳಕೆ ಮಾಡಲಾಗುತ್ತಿದೆ. ಶ್ರೀ ರೇವಣಸಿದ್ಧ ಐತಿಹಾಸಿಕ ವ್ಯಕ್ತಿ ಎಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಮತ್ತು ಡಾ. ಎಂ.ಎಂ ಕಲಬುರ್ಗಿ ಸೇರಿದಂತೆ ಅನೇಕರು ಈಗಾಗಲೇ ಅಧ್ಯಯನದ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಆದರೆ ರಾಜ್ಯ ಸರ್ಕಾರ ನಿಜವಾದ ಐತಿಹಾಸಿಕ ಜಗದ್ಗುರು ಶ್ರೀ ರೇವಣಸಿದ್ಧರರಿಗೆ ಸಿಗಬೇಕಾದ ಗೌರವ ತಪ್ಪಿಸಿ, ಹಾಲು ಮತ ಧರ್ಮಕ್ಕೆ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ಸರ್ಕಾರ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಹಾಲುಮತ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. 

ಶ್ರೀ ಮರುಳಸಿದ್ದೇಶ್ವರರಿಗೆ ಕಾರುಣ್ಯ ನೀಡಿದ್ದೇ ಶ್ರೀ ರೇವಣಸಿದ್ದರೆಂದು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಲವು ಬಾರಿ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದರು.

ಸ್ವಾಮೀಜಿ ಬೇಸರ : ಮಾರಿ ಹಬ್ಬದ ಹೆಸರಿನಲ್ಲಿ ಕುರಿ, ಕೋಳಿ ತಿನ್ನುವುದಕ್ಕೆ ಕೊಟ್ಟ ಆದ್ಯತೆಯನ್ನು ಶ್ರೀ ಮಠದ ಕಾರ್ಯಕ್ರಮಕ್ಕೆ ಕೊಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ದೇವತೆಯ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವ ದುರಂತದ, ಅನಾಚಾರದ ಹಬ್ಬಗಳು ಶೋಷಿತ ಸಮುದಾಯಗಳಿಗೆ ಮಾರಕವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮೌಢ್ಯದ ಹಬ್ಬಗಳನ್ನು ಎಲ್ಲಿಯವರೆಗೆ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಶೋಷಿತರ, ಹಿಂದುಳಿದವರ ಉದ್ಧಾರ ಸಾಧ್ಯವಿಲ್ಲ. ಇಂತಹ ಹಬ್ಬಗಳಿಂದ ಜನ ಜಾಗೃತರಾಗಿ ಹಬ್ಬಕ್ಕೆ ದುಂದುವೆಚ್ಚ ಮಾಡುವ ಹಣವನ್ನು ಮಕ್ಕಳ ಉತ್ತಮ ಶಿಕ್ಷಣಕ್ಕೆ ಬಳಸಿದರೆ ಅದು ಸಾರ್ಥಕವಾಗುತ್ತದೆ.

ನಾವು ಮಾಂಸಾಹಾರದ ವಿರೋಧಿ ಅಲ್ಲ, ದೇವರ ಹೆಸರಿನಲ್ಲಿ ಮನೆತನ ಹಾಳು ಮಾಡಿಕೊಳ್ಳುತ್ತಿರುವುದಕ್ಕೆ ನಮ್ಮ ವ್ಯಾಪಕ ವಿರೋಧವಿದೆ. ಬಡವರ ಹತ್ತಿರ ಹಣ ಇರಲ್ಲ, ಹಬ್ಬಕ್ಕೆ ಬಡ್ಡಿಯಂತೆ ಸಾಲ ಮಾಡಿ ಕುರಿ ತಂದು ಹಬ್ಬ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ಶ್ರೀಗಳು, ಇಂತಹ ಹಬ್ಬಗಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಮಠದ ಸಮುದಾಯ ಭವನಕ್ಕೆ ಅವಶ್ಯವಿರುವ 6 ಕೊಠಡಿಗಳ ನಿರ್ಮಾಣಕ್ಕೆ ಸಚಿವರು, ಸಂಸದರು ಗಮನ ಹರಿಸಬೇಕು. ಕಾರ್ಗಿಲ್ ಕಂಪನಿಯಿಂದ ಬರುವ ಕೆಟ್ಟ ವಾಸನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಕೆಟ್ಟ ವಾಸನೆ ಬರದಂತೆ ನಿಲ್ಲಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಮಾತನಾಡಿ, ಹೊಸದುರ್ಗದಲ್ಲಿ ನಿರ್ಮಿಸುತ್ತಿರುವ ಕನಕದಾಸರ ಏಕಶಿಲೆ ಪ್ರತಿಮೆ ಕಾಮಗಾರಿಗೆ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಮೈಲಾರ ಶಾಖಾ ಮಠದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 10 ಕೋಟಿ ಅನುದಾನ ನೀಡಿದ್ದೇವೆ. ದಾವಣಗೆರೆ – ಹರಿಹರ ಮತ್ತಿತರೆ ಕಡೆ ಹಬ್ಬಗಳಿಂದಾಗಿ ಈ ಬಾರಿ ಸರಳವಾಗಿ ಆಗಿರುವ ಈ ಕಾರ್ಯಕ್ರಮವನ್ನು ಮುಂದಿನ ವರ್ಷ ವಿಜೃಂಭಣೆಯಿಂದ ಮಾಡೋಣ ಎಂದು ಭೈರತಿ ಬಸವರಾಜ ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಶ್ರೀಗಳು ಹೇಳಿದಂತೆ ಮಾರಿ ಹಬ್ಬದ ಹೆಸರಿನಲ್ಲಿ ನಡೆಯುವ ದುಂದು ವೆಚ್ಚ ನಿಲ್ಲಬೇಕು. ಇದರಿಂದ ಬಡವರಿಗೆ ಬಹಳ ತೊಂದರೆಯಾಗುತ್ತದೆ. ದಾವಣಗೆರೆಯಲ್ಲಿ ನಡೆದ ದುಗ್ಗಮ್ಮನ ಹಬ್ಬಕ್ಕೆ ಕನಿಷ್ಠ 50 ಕೋಟಿ ರೂ. ಖರ್ಚಾಗಿದೆ. ಮಾರಿಹಬ್ಬ ಮಾಡುವವರು ನೀವು, ಬಂದು ಊಟ ಉಂಡು ಹೋಗುವವರು ಲಿಂಗಾಯತರು, ಬ್ರಾಹ್ಮಣರು ಎಂದು ಹಾಸ್ಯವಾಗಿ ಹೇಳಿದರು.

ದುಡ್ಡು ದೊಡ್ಡದಲ್ಲ, ವಿದ್ಯೆ ದೊಡ್ಡದು. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಮಾರಿ ಹಬ್ಬ ನಿಲ್ಲಿಸಿ,  ವಿದ್ಯೆಗೆ ಹಣ ಖರ್ಚು ಮಾಡಿ, ನಿಮ್ಮ ಮಕ್ಕಳು ಚನ್ನಾಗಿ ಓದಿದರೆ ನಿಮ್ಮ ಮನೆಗೆ, ಊರಿಗೆ, ಸಮಾಜಕ್ಕೆ, ದೇಶಕ್ಕೆ ಒಳ್ಳೆಯದಾಗುತ್ತದೆ. ಹಾಲುಮತಸ್ಥರು ಹಾಲಿನಂತ ಮನಸ್ಸಿನವರು, ಅವರ ಕೈಯಿಂದ ಏನೇ ಮಾಡಿಸಿದರೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಅದನ್ನು ಉಳಿಸಿಕೊಂಡು ಹೋಗಿ ಎಂದು ಸಿದ್ದೇಶ್ವರ ಹೇಳಿದರು.

ಶಾಸಕ ಎಸ್. ರಾಮಪ್ಪ ಮಾತನಾಡಿದರು. ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಬೆಳ್ಳೂಡಿ ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ಗಂಗಮ್ಮ ಬೀರಪ್ಪ, ಮುಖಂಡರಾದ ಕುಣೆಬೆಳಕೆರೆ ದೇವೇಂದ್ರಪ್ಪ, ಎಂ ನಾಗೇಂದ್ರಪ್ಪ, ಕುಂಬಳೂರು ವಿರೂಪಾಕ್ಷಪ್ಪ, ನಂದಿಗಾವಿ ಶ್ರೀನಿವಾಸ್, ತಾ.ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ಕಾರ್ಯದರ್ಶಿ ಕೆ. ಗಂಗಾಧರ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಐರಣಿ ಅಣ್ಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ ರೇವಣಸಿದ್ಧಪ್ಪ, ಸಿ.ಎನ್. ಹುಲಗೇಶ್, ಮಲೇಬೆನ್ನೂರಿನ ಪಿ.ಎಚ್. ಶಿವಕುಮಾರ್, ಬಿ. ಮಂಜುನಾಥ್, ಭೋವಿಕುಮಾರ್, ಎಳೆಹೊಳೆ ಕುಮಾರ್, ಬೆಳ್ಳೂಡಿ ಸಂತೋಷ್, ಭಾನುವಳ್ಳಿ ಕರಿಯಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. 

ಉಪ ವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹೊರಪೇಟೆ ಮಲ್ಲೇಶಪ್ಪ, ಸಿಪಿಐ ಸತೀಶ್, ಪಿಎಸ್‌ಐ ಗಳಾದ ವೀರಬಸಪ್ಪ, ರವಿಕುಮಾರ್ ಈ ವೇಳೆ ಹಾಜರಿದ್ದರು.

error: Content is protected !!