ಸ.ಪ್ರ.ದ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನ್ಯಾ. ಪ್ರವೀಣ್ ನಾಯಕ್
ದಾವಣಗೆರೆ, ಮಾ. 27- ಓದುವ ಜೊತೆಗೆ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಳ್ಳಿ. ನಿತ್ಯದ ಆಗು-ಹೋಗುಗಳ ಬಗ್ಗೆ ಗಮನ ಹರಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಪ್ರವೀಣ್ ನಾಯಕ್ ಸಲಹೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ `ನಿವೇದಿತ’ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸುತ್ತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ರಾಂಕ್‌ಗಳು ಮಹಿಳೆಯರ ಪಾಲಾಗುತ್ತಿವೆ. ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಇದರೊಟ್ಟಿಗೆ ಮಹಿಳೆಯರು ಕಾನೂನುಗಳ ಬಗ್ಗೆಯೂ ತಿಳಿದಿರಬೇಕು ಎಂದು ಹೇಳಿದರು.
ಬಾಲ್ಯ ವಿವಾಹಗಳು ಕಡಿಮೆಯಾಗಿವೆಯಾದರೂ, ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆದಿವೆ. ಬಾಲ್ಯವಿವಾಹ ನಡೆಸುವುದಷ್ಟೇ ಅಪರಾಧವಲ್ಲ. ನಡೆಯುವುದು ಗೊತ್ತಿದ್ದರೂ ಅದನ್ನು ತಡೆಯಲು ಮುದಾಗದೇ ಇರುವುದೂ ಅಪರಾಧವಾಗುತ್ತದೆ. ಆದ್ದರಿಂದ ಎಲ್ಲಿಯೇ ಬಾಲ್ಯವಿವಾಹ ನಡೆಯಲಿ, ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಪುರುಷರಿಗೂ ಮಹತ್ವದ ದಿನ : ಮಹಿಳಾ ದಿನಾಚರಣೆ ಕೇವಲ ಮಹಿಳೆಯರಿಗಷ್ಟೇ ಅಲ್ಲ. ಪುರುಷರಿಗೂ ಮಹತ್ವದ ದಿನವಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನು ಪುರುಷರು ಮಾಡುತ್ತಿಲ್ಲ. ಇದರ ಬಗ್ಗೆ ಆತ್ಮ ವಿಮರ್ಶೆ ಅಗತ್ಯ ಎಂದರು.
ಅವರು ಪುರುಷರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೂ ಒಂದು ದಿನ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
`ಆಧುನಿಕ ಸಮಾಜದಲ್ಲಿ ಮಹಿಳೆಗಿರುವ ಸವಾಲುಗಳು’ ಕುರಿತು, ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ. ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶೈಲಜ ಎ.ಎಸ್. ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಮೈತ್ರಿ ಉಜ್ವಲ ಕೇಂದ್ರದ ಯೋಜನಾ ನಿರ್ದೇಶಕಿ ರೂಪಾ ಜಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ದಾವಣಗೆರೆ ಸಿಂಡಿಕೇಟ್ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಪಿ. ಬಸವರಾಜ್ ಉಪಸ್ಥಿತರಿದ್ದರು.
ಉಪನ್ಯಾಸಕ ತೊಪ್ಪಲ ಕೆ. ಮಲ್ಲಿಕಾರ್ಜುನಗೌಡ ಸ್ವಾಗತಿಸಿದರು. ಪೂಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸುನಿತಾ ಕೆ.ಬಿ. ನಿರೂಪಿಸಿದರು. ಶೃತಿ ರೆಡ್ಡಿ ವಂದಿಸಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಶ್ರೀ ಮೈತ್ರಿ ಉಜ್ವಲ ಪುನರ್ವಸತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.