ಹೊನ್ನಾಳಿ,ಮಾ.27-ವ್ಯಾಸ ಮಹರ್ಷಿ ಪ್ರತಿಷ್ಠಾಪಿತ ತಾಲ್ಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಆಂಜನೇಯ ಸ್ವಾಮಿಯ ಕೋರೂಟದ ಬಳಿಕ ನಿನ್ನೆ ಮಧ್ಯರಾತ್ರಿಯಿಂದ ಇಂದು ಮುಂಜಾನೆಯವರೆಗೆ ಗಜೋತ್ಸವ ವಿಜೃಂಭಣೆಯಿಂದ ಜರುಗಿತು. ಬಳಿಕ ಮಧ್ಯಾಹ್ನ 12.32ಕ್ಕೆ ಮಿಥುನ ಲಗ್ನದಲ್ಲಿ ವೈಭವದ ರಥೋತ್ಸವ ಡೊಳ್ಳು, ಭಜನೆ, ತಮಟೆ, ಕಹಳೆ, ಜಾಗಟೆ, ಚಕ್ರವಾದ್ಯ, ಸಮಾಳ ಮೇಳಗಳ ಅದ್ಧೂರಿ ಮಂಗಳಕರ ನಿನಾದದ ಮಧ್ಯೆ ಸನಾತನ ಪದ್ಧತಿಯಂತೆ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥಾರೋಹಣ ಹಾಗೂ ಉತ್ಸವಗಳು ವೈಭವದಿಂದ ನಡೆದವು. ಭಕ್ತರು ತೇರಿಗೆ ಬಾಳೆಹಣ್ಣು, ಮೆಣಸಿನಕಾಳು, ಮಂಡಕ್ಕಿ ಮತ್ತಿತರೆ ವಸ್ತುಗಳನ್ನು ಎರಚುತ್ತಿದ್ದ ದೃಶ್ಯ ಕಂಡುಬಂತು. ರಥ ಮುಂದಕ್ಕೆ ಚಲಿಸಿದ ನಂತರ ಭಕ್ತರು ತೇರಿಗೆ ಎರಚಿದ ಮೆಣಸಿನಕಾಳುಗಳನ್ನು ಆಯ್ದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ರಥೋತ್ಸವದಲ್ಲಿ ಪಾಲ್ಗೊಂಡರು. ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ಎಚ್.ಜೆ. ರಶ್ಮಿ ಹಾಲೇಶ್, ಉಪ ತಹಸೀಲ್ದಾರ್ ಎಂ.ಕೆ. ಇಂಗಳಗುಂದಿ, ರಾಜಸ್ವ ನಿರೀಕ್ಷಕ ಬಿ.ಎಂ. ರಮೇಶ್, ಕುಂದೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಕೆ. ಶೇಖರಪ್ಪ, ದೇವಸ್ಥಾನದ ಆಡಳಿತಾಧಿಕಾರಿ ಎಂ. ಶ್ರೀಕಾಂತ್ ಹಾಗು ಇತರರು ಇದ್ದರು.
ಇಂದು ಮುಳ್ಳೋತ್ಸವ, ಕಾರಣಿಕ : ನಾಳೆ ಸೋಮವಾರ ಮಧ್ಯಾಹ್ನ 3ರಿಂದ ಸಂಜೆ 6.30ರವರೆಗೆ ಶ್ರೀ ಆಂಜನೇಯ ಸ್ವಾಮಿಯ ವಿಶಿಷ್ಟವಾದ ಮುಳ್ಳೋತ್ಸವ ಹಾಗೂ ಕಾರಣಿಕ ಮಹೋತ್ಸವ ನಡೆಯಲಿದೆ.
ನಾಳೆ ಓಕುಳಿ : ನಾಡಿದ್ದು ದಿನಾಂಕ 29ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಓಕುಳಿ ಮಹೋತ್ಸವ, ರಾತ್ರಿ 8ಕ್ಕೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ದಿನಾಂಕ 29 ಮತ್ತು 30ರಂದು ಬಯಲು ಜಂಗೀ ಕುಸ್ತಿ ಪಂದ್ಯಗಳು ಜರುಗಲಿವೆ.