ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿದ ತೃಪ್ತಿ ಇದೆ

ಬೀಳ್ಕೊಡುಗೆ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ

ದಾವಣಗೆರೆ, ಮಾ.27- ವೃತ್ತಿ, ಪ್ರವೃತ್ತಿಯಿಂದ ಸಂಪೂರ್ಣವಾಗಿ ಶೈಕ್ಷಣಿಕ ಅಭಿವೃದ್ಧಿಗೆ ತೊಡಗಿಸಿಕೊಂಡು, ದಾವಣಗೆರೆ ವಿಶ್ವವಿದ್ಯಾನಿಲಯದ ಬೆಳವಣಿಗೆಗೆ ಶ್ರಮಿಸಿದ ತೃಪ್ತಿ ಇದೆ. ಇಲ್ಲಿ ಕೆಲಸ ಮಾಡಿದ್ದು ಅದ್ಭುತ ಅನುಭವ ನೀಡಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಲಸಚಿವನಾಗಿ ಮತ್ತು ಕುಲಪತಿಯಾಗಿ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಡತನದಿಂದ ಬೆಳೆದು, ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ, ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದು ದೈವೀ ಕೃಪೆ. ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಸಮಾಧಾನವಿದೆ ಎಂದು ತಿಳಿಸಿದರು.

ಬೋಧಕ ಸಿಬ್ಬಂದಿಯ ನೇಮಕದ ಮೂಲಕ ವಿಶ್ವವಿದ್ಯಾನಿಲಯವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಲಾಗಿದೆ. ಸಂಶೋಧನೆ, ಬೋಧನೆ ಮತ್ತು ಶೈಕ್ಷಣಿಕೇತರ ಕಾರ್ಯಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡಲಾಗಿದೆ ಎಂದರು.

ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ಪಿ.ಲಕ್ಷ್ಮಣ್, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬ ಪ್ರಾಧ್ಯಾಪಕನ ಕೆಲಸ. ಬಯಸದೇ ಸಿಕ್ಕಿರುವ ಹಂಗಾಮಿ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಅಗತ್ಯ ಎಂದು ನುಡಿದರು.

ಕುಲಸಚಿವೆ ಪ್ರೊ.ಗಾಯತ್ರಿ, ವಿವಿಧ ನಿಕಾಯಗಳ ಡೀನ್‌ಗಳಾದ ಪ್ರೊ.ರಾಮಲಿಂಗಪ್ಪ, ಪ್ರೊ.ಪಲಾಟಿ, ಡಾ. ವೆಂಕಟೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಮತ್ತು ವಿವಿಧ ವಿಭಾಗಗಳ ವತಿಯಿಂದ ಪ್ರೊ. ಹಲಸೆ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಅಭಿನಂದನಾ ಗ್ರಂಥ ‘ಶರಣ ಸ್ಫೂರ್ತಿ’ಯನ್ನು ಪ್ರೊ. ಲಕ್ಷ್ಮಣ್ ಬಿಡುಗಡೆ ಮಾಡಿದರು. ಡಾ. ಎಚ್.ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!