ಕಾಯಕದಲ್ಲಿ ಶ್ರದ್ಧೆಯಿದ್ದಲ್ಲಿ ತಕ್ಕ ಪ್ರತಿಫಲ

ಕಬ್ಬೂರು ಗ್ರಾಮದ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಪಾದನೆ

ದಾವಣಗೆರೆ,ಜ.10- `ಯಾವುದೇ ಕೆಲಸ – ಕಾಯಕವಾಗಲಿ ; ಅದನ್ನು ಶ್ರದ್ಧೆಯಿಂದ ಮಾಡಿದಾಗ ಮಾತ್ರ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಪಾದಿಸಿದ್ದಾರೆ.

ಇಲ್ಲಿಗೆ ಸಮೀಪದ ಕಬ್ಬೂರು ಗ್ರಾಮದಲ್ಲಿ ಮೊನ್ನೆ ನಡೆದ ಸರಳ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮ ಸ್ಥರ ಯೋಗಕ್ಷೇಮ ವಿಚಾರಿಸಿದರಲ್ಲದೇ, ಮಳೆ – ಬೆಳೆ ಕುರಿತಂತೆ ಸೌಹಾರ್ದ ಮಾತು ಕತೆಯಲ್ಲಿ ಕಾಯಕವನ್ನು ವಿಶ್ಲೇಷಿಸಿದರು.

`ನೀವು ಯಾವುದೇ ಕೆಲಸವನ್ನು ಮಾಡಿ ; ಅದರಿಂದ ಯಾವುದನ್ನೂ ಅಪೇಕ್ಷೆ  ಪಡ ಬೇಡಿ. ಅದರಲ್ಲಿ ತಲ್ಲೀನರಾಗಿ ಶ್ರದ್ಧೆಯಿಂದ ನಿರ್ವಹಿಸಿದಾಗ ಅದಕ್ಕೆ ಪ್ರತಿಫಲ ಕಟ್ಟಿಟ್ಟ ಬುತ್ತಿ’ ಎಂದು ಜಿಲ್ಲಾಧಿಕಾರಿಗಳು ಉದಾಹರಣೆಯೊಂದಿಗೆ ತಿಳಿಸಿದರು.

ಈ ಗ್ರಾಮಕ್ಕೆ ತಾವು ಭೇಟಿ ನೀಡಿದ ನೆನಪಿನಾರ್ಥವಾಗಿ ಗ್ರಾಮದ ಶ್ರೀಮತಿ ಕೆ.ಆರ್. ಜಯಮ್ಮ ಅವರ ಜಮೀನಿನಲ್ಲಿ ಅಡಿಕೆ ಸಸಿಯನ್ನು ನೆಟ್ಟು ನೀರೆರೆದ ಡಿಸಿ ಬೀಳಗಿ, ಇವತ್ತು ಹಾಕಿರುವ ಸಸಿ ಮುಂದೆ ಮರವಾಗಿ ಫಲ ನೀಡುತ್ತದೆ. ಅದರಂತೆಯೇ ನಮ್ಮ ಶ್ರದ್ಧಾ ಕಾಯಕದಲ್ಲೂ ಫಲ ದೊರೆಯುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ತಾವು ಮಾಡುವ ಯಾವುದೇ ಕಾಯಕದಲ್ಲಿ ಶ್ರದ್ಧೆಯನ್ನಿರಿಸಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಬೀಳಗಿ ಕರೆ ನೀಡಿದರು. ಕಬ್ಬೂರು ಗ್ರಾಮದ ಮುಖಂಡರುಗಳಾದ ಕೆ.ಪಿ. ದೇವೇಂದ್ರಪ್ಪ, ಬೊಮ್ಮನಹಳ್ಳಿ ಕೆ.ಜಿ. ಗಂಗಾಧರಪ್ಪ, ಚಂದ್ರಶೇಖರಪ್ಪ, ಹೊನ್ನನಾಯ್ಕನಹಳ್ಳಿ ಬಸವರಾಜಪ್ಪ, ಆರ್.ವಿ. ಚಂದ್ರಪ್ಪ ಮತ್ತಿತರರು ಜಿಲ್ಲಾಧಿಕಾರಿಯೊಂದಿಗೆ ಸೌಹಾರ್ದ ಮಾತುಕತೆ ನಡೆಸಿದರು.

error: Content is protected !!