ರೇಣುಕಾಚಾರ್ಯರ ವಿಚಾರಧಾರೆಗಳು ಸರ್ವಕಾಲಕ್ಕೂ ಅನ್ವಯ

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳು

ರಾಣೇಬೆನ್ನೂರು,ಮಾ.23- ವಿಶ್ವಬಂಧುತ್ವದ ಆದರ್ಶ, ಮಾನವೀಯ ವಿಚಾರಗಳನ್ನು ಬೋಧಿಸಿದ ರೇಣುಕರ ವಿಚಾರ ಧಾರೆಗಳು  ಸರ್ವಕಾಲಕ್ಕೂ, ಸರ್ವಜನರಿಗೂ ಅನ್ವಯವಾಗುತ್ತವೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಮಹಾಸ್ವಾಮಿಗಳು ಹೇಳಿದರು.

ಜಗದ್ಗುರುಗಳು ಇಲ್ಲಿನ ಶಾಸಕರ ನಿವಾಸದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಇಷ್ಟಲಿಂಗ ಮಹಾಪೂಜೆ ನಂತರ ಗಿಡಕ್ಕೆ ನೀರೆರೆದು ಧರ್ಮ ಸಭೆ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಮಹಾಜ್ಞಾನಿ ಅಗಸ್ತ್ಯ ಮಹರ್ಷಿಗಳಿಗೆ ಶಿವಾಧ್ವೈತ ತತ್ವ ಸಿದ್ಧಾಂತಗಳನ್ನು ಬೋಧಿಸಿ ಹರಸಿದ ರೇಣುಕಾಚಾರ್ಯರು,  ಅಂತರಂಗ, ಬಹಿರಂಗ ಶುದ್ದತೆಗೆ ಆದ್ಯತೆ ಕೊಟ್ಟು, ಧರ್ಮದ ದಶಸೂತ್ರಗಳನ್ನು ಬೋಧಿಸಿ ಜನರನ್ನು ಉದ್ಧರಿಸಿದರು. ಮಹಿಳೆಯರಿಗೆ, ಅಸ್ಪೃಶ್ಯರಿಗೆ ಧಾರ್ಮಿಕ ಆಚರಣೆಯನ್ನಿತ್ತು ಹರಸಿ, ಧಾರ್ಮಿಕ ಕ್ರಾಂತಿಯ ಜೊತೆಗೆ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು ಎಂದು ಜಗದ್ಗುರುಗಳು ನುಡಿದರು.

ಯಾವೊಂದು ಸಮಾಜವನ್ನೂ ಉದ್ಧರಿಸುವ ಗುರಿಯನ್ನಿಟ್ಟುಕೊಳ್ಳದ  ಪಂಚಪೀಠಗಳು ಮಾನವ ಕುಲವನ್ನೇ ಉದ್ಧರಿಸುವ ಉದಾತ್ತ ಪರಂಪರೆಯನ್ನು ಹಾಕಿಕೊಂಡಿವೆ. ಪಂಚಪೀಠಗಳಲ್ಲಿ ಮೊದಲ ಸ್ಥಾನದಲ್ಲಿರುವ ರಂಭಾಪುರಿ ಪೀಠ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಗೂ ಸಹ ಒತ್ತು ನೀಡಿದೆ ಎಂದು  ನೆಗಳೂರ ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗಳು ಹೇಳಿದರು.

ಶಾಸಕ ಅರುಣ ಕುಮಾರ್‌ ಪೂಜಾರ ಮಾತನಾಡಿ, ರಂಭಾಪುರಿ ಶ್ರೀ ಗಳ ಹಾಗೂ ಗಂಗಾಜಲ ಚೌಡೇಶ್ವರಿ ಆಶೀರ್ವಾದದಿಂದ ನನ್ನ ಕ್ಷೇತ್ರ ಎಲ್ಲ ಸಂಕಷ್ಟಗಳಿಂದ ಪಾರಾಗಿದ್ದು, ಶ್ರೀಗಳ ಕೃಪೆ ನನ್ನ ಕ್ಷೇತ್ರದ ಮೇಲೆ ನಿರಂತರವಾಗಿರಲಿ ಎಂದು ಮನವಿ ಮಾಡಿದರು.

ಪುಣ್ಯಕೋಟಿ ಜಗದೀಶ್ವರ ಶ್ರೀ ಗಳು, ಆವರ ಗೊಳ್ಳದ ಓಂಕಾರ ಶ್ರೀಗಳು, ಲಿಂಗದಹಳ್ಳಿ ವೀರಭದ್ರ ಶ್ರೀಗಳು, ಕೂಡಲ ಗುರು ಮಹೇಶ್ವರ ಶ್ರೀಗಳು, ರುದ್ರ ಶಿವಾಚಾರ್ಯ ಶ್ರೀಗಳು, ಜಿಪಂ ಮಾಜಿ ಸದಸ್ಯರಾದ ಶ್ರೀಮತಿ ಮಂಗಳಗೌರಿ ಪೂಜಾರ ಮತ್ತಿತರರು ಉಪಸ್ಥಿತರಿದ್ದರು. ಶನೇಶ್ಚರ ಮಠದ ಶ್ರೀ ಶಿವಯೋಗಿ ಸ್ವಾಮಿಗಳು ಪ್ರಾಸ್ತಾವಿಕ ಮಾತುಗಳನ್ನಾಡಿದರು.

error: Content is protected !!