ಭಗತ್ ಸಿಂಗ್ ಪುತ್ಥಳಿಗೆ ಸೂಕ್ತ ರಕ್ಷಣೆಗೆ ಯುವ ಕಾಂಗ್ರೆಸ್ ಆಗ್ರಹ

ದಾವಣಗೆರೆ, ಮಾ.23- ನಗರ ಪಾಲಿಕೆ   ಮುಂಭಾಗಕ್ಕೆ  ಸ್ಥಳಾಂತರಿಸಿರುವ ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪುತ್ಥಳಿಗೆ ಸೂಕ್ತ ರಕ್ಷಣೆ ಒದಗಿಸಿ, ಗೌರವ ಸೂಚಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಆಗ್ರಹಿಸಿದ್ದಾರೆ.

ಇಂದು ಹುತಾತ್ಮ ದಿನದ ಅಂಗವಾಗಿ ನಗರದ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿರುವ ಭಗತ್ ಸಿಂಗ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ನಗರ ಪಾಲಿಕೆ ಆಯುಕ್ತರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು. 

ದೇಶ ಕಂಡ ಅಪ್ರತಿಮ ಕ್ರಾಂತಿಕಾರಿ, ಅನೇಕ ಯುವಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ವೀರ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪುತ್ಥಳಿಗೆ ಯಾವುದೇ ಸೂಕ್ತ ರಕ್ಷಣೆಯಿಲ್ಲದೇ ಅನಾಥವನ್ನಾಗಿ ಮಾಡಲಾಗಿದೆ. ಎರಡು ಬಸ್ ನಿಲ್ದಾಣಗಳ ಮಧ್ಯೆ ಮೂರ್ತಿ ಸ್ಥಾಪಿಸಲಾಗಿದ್ದು, ಅಲ್ಲಿ ಬರುವ ಜನರು ಯಾವುದೇ ಸ್ವಚ್ಛತೆ ಕಾಪಾಡದೇ ಭಗತ್ ಸಿಂಗ್ ಅವರಿಗೆ ಅವಮಾನ ಮಾಡಲಾಗಿದೆ. ಭಗತ್ ಸಿಂಗ್ ರವರ ಮೂರ್ತಿಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ, ರಕ್ಷಣೆ ನೀಡಬೇಕು ಎಂದು ನಿಖಿಲ್ ಆಗ್ರಹಿಸಿದರು.

ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಮಂಜುನಾಥ್ ಗಡಿಗುಡಾಳ್ ಮಾತನಾಡಿ, ಸ್ಮಾರ್ಟ್ ಸಿಟಿಯ ಅಭಿವೃದ್ಧಿ ಹೆಸರಿನಲ್ಲಿ ಈ ಮುಂಚೆ ಇದ್ದ ಸ್ಥಳದಿಂದ ಬೇರೆ ಕಡೆ ಭಗತ್ ಸಿಂಗ್ ಅವರ ಪುತ್ಥಳಿ ಸ್ಥಳಾಂತರಿಸಿದ್ದು ಖಂಡನೀಯ. ಅಲ್ಲಿ ಯಾವುದೇ ಸೂಕ್ತ ರಕ್ಷಣೆಯಿಲ್ಲ, ಸ್ವಚ್ಚತೆಯಿಲ್ಲ. ಕೇವಲ ಹೆಸರಿಗಷ್ಟೇ ದೇಶಭಕ್ತರು ಎನ್ನುವ ಬಿಜೆಪಿಯವರಿಗೆ ಈ ಅವಮಾನ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. 

ಮಾಜಿ ವಿಪಕ್ಷ ನಾಯಕ ಎ. ನಾಗರಾಜ್, ಕೆಪಿವೈಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಉತ್ತರ ಬ್ಲಾಕ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಪಾಲಿಕೆ ಹಿರಿಯ ಸದಸ್ಯರಾದ ಚಮನ್ ಸಾಬ್, ವಿನಾಯಕ ಪೈಲ್ವಾನ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಶಿಲ್ಪಾ ಪರಶುರಾಮ್, ಜಿಲ್ಲಾ ಅಡ್ಮಿನ್ ಮೆಹಬೂಬ್ ಬಾಷಾ, ಕಾರ್ಯದರ್ಶಿ ಹಾಲೇಶ್, ನವೀನ್, ರಾಕೇಶ್, ನದೀಮ್, ಮಲ್ಲಿ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!