ಸ್ವಗ್ರಾಮ ಚಳಗೇರಿಗೆ ನವೀನ್ ಪಾರ್ಥಿವ ಶರೀರ

ಅಂತಿಮ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ, ಎಸ್.ಎಸ್. ಆಸ್ಪತ್ರೆಗೆ ದೇಹದಾನ ಮಾಡಿದ ಪೋಷಕರು

ರಾಣೇಬೆನ್ನೂರು, ಮಾ.21- ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಕಳೆದ ಮಾ.1ರಂದು ಮಡಿದ ವೈದ್ಯಕೀಯ ವಿದ್ಯಾರ್ಥಿ ಚಳಗೇರಿಯ ನವೀನ್ ಪಾರ್ಥಿವ ಶರೀರವನ್ನು   ಸಹೋದರ ಬೆಂಗಳೂರಿನಿಂದ ಇಂದು ಬೆಳಗ್ಗೆ ಹುಟ್ಟೂರಿಗೆ ತಂದರು. ವೀರಶೈವ ಸಂಪ್ರದಾಯದಂತೆ ಅಂತಿಮ ಧಾರ್ಮಿಕ ವಿಧಿ-ವಿಧಾನಗಳನ್ನ ನೆರವೇರಿಸಿ, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು.

ಬೆಳಿಗ್ಗೆ 3 ಗಂಟೆಗೆ ಬಂದ ಮೃತದೇಹವನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 11 ಗಂಟೆಗೆ ಚಳಗೇರಿಗೆ ಬಂದು ಅಂತಿಮ ದರ್ಶನ ಪಡೆದರು. ಜೊತೆಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ,   ಸಂಸದರಾದ ಸಿದ್ದೇಶ್ವರ ಹಾಗೂ ಶಿವಕುಮಾರ ಉದಾಸಿ, ಶಾಸಕರಾದ ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ರೇಣುಕಾಚಾರ್ಯ ಮತ್ತಿತರರಿದ್ದರು.  

ಮುಖ್ಯಮಂತ್ರಿಗಳು,  ಅಂತಿಮ ದರ್ಶನಕ್ಕೆ ಆಗಮಿಸಿದ್ದ ತರಳಬಾಳು ಜಗದ್ಗುರು ಡಾ: ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಹಾಗೂ ಹರಿಹರ ಪಂಚಮಸಾಲಿ ಜಗದ್ಗುರು ವಚನಾನಂದ ಶ್ರೀಗಳು,  ನವೀನ್ ತಂದೆ, ತಾಯಿ, ಸಹೋದರ ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ನವೀನ್ ಸಹಪಾಠಿ ವಿದ್ಯಾರ್ಥಿಗಳ ಹಾಗೂ ನವೀನ್ ಕುಟುಂಬದ ಭವಿಷ್ಯದ ಬಗ್ಗೆ ಸುಮಾರು 40 ನಿಮಿಷಗಳ ಕಾಲ ಚರ್ಚಿಸಿ ಸಲಹೆ, ಸೂಚನೆಗಳನ್ನು ಪಡೆದುಕೊಂಡರು.

ಬೆಳಿಗ್ಗೆ 8-50 ಕ್ಕೆ ಚಳಗೇರಿಗೆ ಬಂದ ಕಳೇಬರಕ್ಕೆ ವೀರಶೈವ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನ ನೆರವೇರಿಸಿದ ಬಳಿಕ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು.   ಮದ್ಯಾಹ್ನ ಗ್ರಾಮದಾದ್ಯಂತ ಮೆರವಣಿಗೆ ಮಾಡಿ ಮೊದಲೇ ನಿರ್ಧರಿಸಿದಂತೆ  ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ದೇಹದಾನ ಮಾಡಲಾಯಿತು. ಆಸ್ಪತ್ರೆ ಪ್ರಾಚಾರ್ಯ ಡಾ.ಪ್ರಸಾದ, ಡಾ. ಜತ್ತಿ ಅವರು ದೇಹವನ್ನು ಪಡೆದರು.

ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ, ರುದ್ರಪ್ಪ ಲಮಾಣಿ, ಡಿ.ಆರ್. ಪಾಟೀಲ, ಕೊಟ್ರೇಶ ಬಸೇಗಣ್ಣಿ, ಎಂ.ಎಂ. ಹಿರೇಮಠ,  ಎಸ್.ಎಫ್.ಎನ್. ಗಾಜಿಗೌಡ್ರ,  ಬಿಜೆಪಿ ಯ ಎಸ್.ಎಸ್. ರಾಮಲಿಂಗಣ್ಣನವರ, ಭಾರತಿ ಜಂಬಗಿ, ಡಾ. ಬಸವರಾಜ ಕೇಲಗಾರ, ಸಂತೋಷ ಪಾಟೀಲ, ಯು.ಬಿ.ಬಣಕಾರ, ಪರಮೇಶ ಮೇಗಳಮನಿ ಮತ್ತಿತರರು ಅಂತಿಮ ದ್ರಶನ ಪಡೆದರು.

ಶೇಖರಗೌಡ ಮನವಿ:   ತಮ್ಮ ಮಗ ನವೀನ್ ಜೊತೆ ಕಲಿಯುತ್ತಿದ್ದವರು ಹಾಗೂ ರಾಜ್ಯದ ಇತರೆ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿನ ಭಯಂಕರ ಪರಿಸ್ಥಿತಿಯನ್ನು ಕಣ್ಣಿಂದ ನೋಡಿದ್ದಾರೆ. ಮತ್ತೆ ಅಲ್ಲಿಗೆ ಓದಲು ಹೋಗಲು ಹೆದರುತ್ತಿದ್ದಾರೆ. ಕಾರಣ ಸರ್ಕಾರ ಅವರ ವಿದ್ಯಾಭ್ಯಾಸಕ್ಕೆ ಇಲ್ಲಿಯೇ ಸೂಕ್ತ ಕ್ರಮ ಜರುಗಿಸಬೇಕು ಎಂದು ನವೀನ್ ತಂದೆ ಮುಖ್ಯಮಂತ್ರಿ ಗಳಿಗೆ ಒತ್ತಾಯಿಸಿದರು.

error: Content is protected !!