`ಕಾಶ್ಮೀರಿ ಫೈಲ್’ ಹಿಂದೂಗಳಿಗೆ ಎಚ್ಚರಿಕೆ ಗಂಟೆ : ಆವರಗೊಳ್ಳ ಶ್ರೀ

ದಾವಣಗೆರೆ, ಮಾ. 21- ಭಾರತ ದೇಶದ ಭೂ ಸ್ವರ್ಗವೆಂದೇ ಹೇಳುವ, ಅಳಿವಿನಂಚಿನಲ್ಲಿರುವ ಕಾಶ್ಮೀರವನ್ನು ಉಳಿಸಿ, ಬೆಳೆಸುವ ಪ್ರಾಮಾಣಿಕ ಸಾರ `ಕಾಶ್ಮೀರಿ ಫೈಲ್’ ಚಿತ್ರದಲ್ಲಿದೆ. ಚಿತ್ರದ ಸಂದೇಶ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಲಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ತ್ರಿಶೂಲ್ ಚಿತ್ರಮಂದಿರದಲ್ಲಿ `ಕಾಶ್ಮೀರಿ ಫೈಲ್ಸ್’ ಚಿತ್ರದ ಮಧ್ಯಾಹ್ನದ ಪ್ರದರ್ಶನ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಶ್ರೀಗಳು ಮಾತನಾಡಿದರು.

32 ವರ್ಷಗಳ ಹಿಂದೆ ಭಾರತದ ಮುಕುಟ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತ ಘಟನೆಗಳನ್ನಾಧರಿಸಿ ತಯಾರಿಸಿದ ಚಿತ್ರ ಇದಾಗಿದ್ದು, 1990 ರಲ್ಲಿ ಕಾಶ್ಮೀರದ ಭಯೋತ್ಪಾದಕರ ಹಿಂಸೆಗೆ ನಲುಗಿ ಪ್ರಾಣ ಕಳೆದುಕೊಂಡ ಒಂದು ಕುಟುಂಬದ ಕಥೆಯನ್ನು ಜನರ ಮುಂದೆ ಇಡಲಾಗಿದೆ ಎಂದರು.

ಕಲ್ಲು ಹೃದಯವನ್ನು ನಡುಗಿಸುವಂತಹ ದೃಶ್ಯಗಳು ಈ ಚಿತ್ರದಲ್ಲಿವೆ. ಜಾತ್ಯತೀತ ಮನೋಭಾವನೆಯಿಂದ ಹಿಂದೂಗಳೆಲ್ಲಾ ಒಂದಾಗಿ ಕಾಶ್ಮೀರ ಉಳಿವಿಗಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದರು.

ಕಾಶ್ಮೀರದ ಗತವೈಭವವನ್ನು ಪುನರ್ ಪ್ರತಿಷ್ಠಾಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಭವಿಷತ್ತಿನ ಯುವ ಪೀಳಿಗೆಗೆ ಕಾಶ್ಮೀರದ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.

ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಭಾರತಕ್ಕೆ ಆದ ಅನ್ಯಾಯ, ಕಾಶ್ಮೀರಿ ಪಂಡಿತರು ಅನುಭವಿಸಿದ ಹಿಂಸೆ, ಯಾತನೆ ಬಗ್ಗೆ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಚಿತ್ರಿಸಲಾಗಿದೆ. ಬಲಿದಾನಕ್ಕೆ ಮತ್ತೆ ಕಾಶ್ಮೀರಿ ಪಂಡಿತರು ಹೋಗಿ ನೆಲೆಸುವ ಕಾಲ ಬಂದೊದಗಿದೆ ಎಂದರು.

ಉತ್ತಮ ಆದರ್ಶಗಳನ್ನು  ಪಾಲಿಸುವ ಮೂಲಕ ಕಾಶ್ಮೀರ ಉಳಿಸಿ, ಬೆಳೆಸುವಲ್ಲಿ ಹಿಂದೂಗಳು ಒಟ್ಟಾಗಬೇಕಾಗಿದೆ ಎಂದು ಹೇಳಿದರು.

ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರು ಬಸವ ಸ್ವಾಮೀಜಿ ಮಾತನಾಡಿ, ದೇಶದ ಇತಿಹಾಸದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನವಿದೆ. ಅದನ್ನು  ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.

ನಂಜನಗೂಡಿನ 400 ಜನ ಜಂಗಮರ ಹತ್ಯೆ ಪ್ರಕರಣವನ್ನು ನಾಡಿನ ಜನತೆಗೆ ಚಿತ್ರದ ಮೂಲಕ ತಿಳಿಯಪಡಿಸುವ ಅಗತ್ಯವಿದೆ. ಬೆಂಕಿ ಹಚ್ಚುವ ಕೆಲಸಕ್ಕಿಂತ ಜ್ಯೋತಿ ಬೆಳಗುವ ಕೆಲಸಗಳಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಇಸ್ಕಾನ್ ದಾವಣಗೆರೆ ಶಾಖೆಯ ಅವಧೂತ ಚಂದ್ರದಾಸ ಪ್ರಭುಜೀ, ಚನ್ನಗಿರಿಯ ಶ್ರೀ ಕೇದಾರೇಶ್ವರ ಸ್ವಾಮೀಜಿ, ರಾಂಪುರ ಹಾಲಸ್ವಾಮಿ ಮಠದ ಶ್ರೀ ಶಿವ ಕುಮಾರ ಸ್ವಾಮೀಜಿ, ನಂದಿಗಾವಿ ಹಾಲಸ್ವಾಮಿ ಮಠದ ಶ್ರೀಗಳು, ಕೂಡ್ಲಿಗಿ ಹಿರೇಮಠದ ಶ್ರೀ ನಿರಂಜನ ದೇವರು ಉಪಸ್ಥಿತರಿದ್ದರು.

ಹಿಂದೂ ಕಾರ್ಯಕರ್ತರಾದ ಶ್ರೀಕಾಂತ ಉದ್ಧಾರ್, ಉಚ್ಚಂಗಿದುರ್ಗದ ಬಸವರಾಜ್, ಯೋಗೀಶ್ ಹೊಸಕೆರೆ, ಹೆಚ್.ಪಿ. ವಿಶ್ವಾಸ್, ಗುರುಬಸವರಾಜ್, ರವಿಕಿರಣ, ವಿರೂಪಾಕ್ಷ ಬಣಕಾರ, ಸಾಯಿ ದೀಪ, ವಿನಾಯಕ ರಾನಡೆ, ಚಂದನ್ ಮತ್ತಿತರರಿದ್ದರು.

error: Content is protected !!