ವಿಭಜನೆಗಿಂತ ಒಗ್ಗೂಡಿಸುವ ಬಸವ ತತ್ವ ಅಗತ್ಯ

ಮಲೇಬೆನ್ನೂರು, ಮಾ.21-  ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳು ಅಡಕವಾಗಿದ್ದು, ವಚನ ಸಂವಿಧಾನ ನಮ್ಮೆಲ್ಲರ ಜೀವನದ ವಿಧಾನವಾಗಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಸೋಮವಾರ ಪಟ್ಟಣದ ಡಾ.ರಾಜ್‌ ಕುಮಾರ್ ಬಡಾವಣೆಯಲ್ಲಿ ಬಸವ ಬಳಗ ಮತ್ತು ಅಕ್ಕನ ಬಳಗ ಸೇವಾ ಸಂಸ್ಥೆ ವತಿಯಿಂದ ದಾನಿಗಳ ನೆರವಿನಿಂದ `ಬಸವ ಮಂಟಪ’ ಕಟ್ಟಡ ನಿರ್ಮಾ ಣದ ಭೂಮಿ ಪೂಜೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ನಮ್ಮ ರಾಷ್ಟ್ರದ ಸಂವಿಧಾನ ಎಲ್ಲಾ ಜನರ ಆಶಯಗಳನ್ನು ಹೊಂದಿರುವಂತೆ, ಬಸವಣ್ಣ ಸೇರಿದಂತೆ 12ನೇ ಶತಮಾನದ ಎಲ್ಲಾ ಶರಣ-ಶರಣೆಯರು ತಮ್ಮ ವಚನಗಳ ಮೂಲಕ ಎಲ್ಲರ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡಿದ್ದರು. ವಚನಗಳ ಮುಖಾಂತರ ನಮ್ಮ ಜೀವನವನ್ನು ಅನಾವರಣ ಮಾಡಿಕೊಳ್ಳುವ ಸಂದರ್ಭವನ್ನು ಮತ್ತೆ ಮತ್ತೆ ತಂದು ಕೊಳ್ಳಬೇಕು. ಇನ್ನೂ ಬಹಳಷ್ಟು ಜನ ಬಸವ ತತ್ವಗಳನ್ನು ಅರ್ಥ ಮಾಡಿಕೊಂಡಿಲ್ಲ, ಬಸವ ತತ್ವ ಎಂದರೆ ಎಲ್ಲರನ್ನು ಒಳಗೊಳ್ಳುವ, ಒಗ್ಗೂಡಿಸುವ ಸಮಗ್ರ ತತ್ವವಾಗಿದೆ ಎಂದು ಮುರುಘಾ ಶರಣರು ಹೇಳಿದರು.

ವಿಭಜಿಸುವ, ಹೊಡೆದಾಡುವ ಇಂದಿನ ತತ್ವ ನಮಗೆ ಬೇಕಾಗಿಲ್ಲ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಸಮಾನತೆಯ, ಸಾಮರಸ್ಯದ, ವಿಶಾಲ ಹೃದಯದ, ಅಂತಃಕರಣದ ಬಸವಣ್ಣನ ತತ್ವ ಇಂದಿನ ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ಮಲೇಬೆನ್ನೂರಿನಲ್ಲಿ ಬಸವ ತತ್ವ ಪ್ರಚಾರಕ್ಕಾಗಿ ಬಸವ ಮಂಟಪ ನಿರ್ಮಿಸುವಂತೆ ಒಳ್ಳೆಯ ಪರಿಸರ ಅನಾವರಣಗೊಂಡಿರುವುದನ್ನು ನೋಡಿದರೆ ನಿಮ್ಮೊಳಗೆ ಬಸವ ಹೃದಯ ಇದೆ ಎಂಬುದು ಸಾಬೀತಾಗಿದೆ. ಬಸವ ಮಂಟಪದ ಮುಖಾಂತರ ಇಲ್ಲಿ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿ ಎಂದು ಮುರುಘಾ ಶರಣರು ಶುಭ ಹಾರೈಸಿದರು.

ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಇನ್ನೂ ಅನೇಕ ದಾರ್ಶನಿಕರು ಈ ನಾಡಿಗೆ ಜ್ಞಾನದ ಬೆಳಕು ನೀಡಿದ್ದಾರೆ. ಎಲ್ಲಾ ದಾನಗಳಿಗಿಂತ ಶ್ರೇಷ್ಠ ದಾನ ಸಮಾಧಾನವಾಗಿದ್ದು, ಸಮಾಧಾನ ಇದ್ದಾಗ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಬಸವಣ್ಣನವರು ಸಾಕ್ಷಿಯಾಗಿದ್ದಾರೆ. ಅವರಿಗೆ ಎಷ್ಟೇ ತೊಂದರೆ ನೀಡಿದರೂ, ಸಮಾನತೆಯ ಕಲ್ಯಾಣ ನಾಡು ಕಟ್ಟಬೇಕೆಂಬ ಉದ್ಧೇಶವನ್ನು ಮಾತ್ರ ಅವರು ಕೊನೆಯವರೆಗೂ ಬಿಡಲಿಲ್ಲ. ಹಾಗಾಗಿಯೇ ಅವರನ್ನು ಎಲ್ಲಾ ಜಾತಿ, ಧರ್ಮಗಳ ಜನರು ಇಂದಿಗೂ ಪ್ರೀತಿಸುತ್ತಾರೆ. ಮುಖದಲ್ಲಿ ಸಿಟ್ಟು, ಹೊಟ್ಟೆಯಲ್ಲಿ ಕಿಚ್ಚು, ಮನಸ್ಸಿನಲ್ಲಿ ಕ್ರೋಧ ಇದ್ದರೆ ಬದುಕು ನರಕವಾಗುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡು ಸಂಕುಚಿತ ಭಾವನೆ ಬಿಟ್ಟು, ನಿಸ್ವಾರ್ಥ ಕಾಯಕ, ಶ್ರದ್ಧೆ ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು.

ನಮ್ಮ ಬುದ್ಧಿ ಬೆಳೆದಿದೆ, ಆದರೆ ಹೃದಯ ಶೂನ್ಯವಾಗಿದೆ. ಬುದ್ಧಿ-ಹೃದಯದ ನಡುವೆ ಅವಿನಾಭಾವ ಸಂಬಂಧ ಬೆಳೆಸಿಕೊಂಡರೆ ಬದುಕು ಹಸಿರಾಗಿರುತ್ತದೆ.

ಬಸವ ಭಕ್ತರಾದರೆ ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟುತ್ತಾರೆ. ಮನೆಗಳಲ್ಲಿ ಹೋಮ,ಹವನ ಮಾಡಿಸುತ್ತಿರುವುದು ಬೇಸರದ ಸಂಗತಿ ಎಂದ ಸಾಣೇಹಳ್ಳಿ ಶ್ರೀಗಳು, ದೇವಸ್ಥಾನಗಳಿಗೆ ಕೊಡುವ ಹಣವನ್ನು ಜ್ಞಾನ, ಅರಿವು ಮೂಡಿಸುವ ಇಂತಹ ಕೇಂದ್ರಗಳಿಗೆ ನೀಡಿ ಎಂದರು.

ಮುಸ್ಲಿಮರು ಕೂಡಾ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿದ್ದರು. ಬಸವಣ್ಣ ಅವರನ್ನು ಗೌರವಿಸುತ್ತಿದ್ದರು, ಮಲೇಬೆನ್ನೂರಿನಲ್ಲಿ ಹೆಚ್ಚಾಗಿರುವ ಮುಸ್ಲಿಂ ಬಾಂಧವರನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ, ಸಂಕಲ್ಪದಂತೆ ವರ್ಷದೊಳಗೆ ಬಸವ ಮಂಟಪ ನಿರ್ಮಾಣವಾಗಲಿ ಎಂದು ಸಾಣೇಹಳ್ಳಿ ಶ್ರೀಗಳು ಆಶಿಸಿದರು.

ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷರಾದ ಡಾ. ಗಂಗಾ ಮಾತಾಜಿ ಮಾತನಾಡಿ, ವಚನ ಸಾಹಿತ್ಯ ಎಲ್ಲರ ಬದುಕಿನ ಭಾಗವಾಗಿದ್ದು, ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬೇಕೆಂದರು.

ನರಸೀಪುರದ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಈ ನಾಡಿನಲ್ಲಿ ಹುಟ್ಟದಿದ್ದರೆ ನಾವಿನ್ನೂ ಮೂಢನಂಭಿಕೆ, ಶೋಷಣೆಯಲ್ಲೇ ಇರಬೇಕಾಗಿತ್ತು. ಅವರಿಂದಾಗಿ ಇಂದು ಸಣ್ಣ ಸಣ್ಣ ಸಮಾಜಗಳು ಬೆಳಕಿನಲ್ಲಿವೆ. ರಾಮ್‌ದೇವ್‌ ಬಾಬಾ ಅವರ ಯೋಗಕ್ಕಿಂತ ಇಷ್ಟಲಿಂಗ ಪೂಜೆಯಲ್ಲಿ ಅಗಾಧ ಶಕ್ತಿ ಇದೆ ಎಂದು ಸ್ವಾಮೀಜಿ ಹೇಳಿದರು.

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಸವ ಜಯಂತಿ ಆರಂಭಿಸಿದ ಮಹಾನ್ ಗಾಂಧಿವಾದಿ ಹರ್ಡೇಕರ್ ಮಂಜಪ್ಪ ಅವರು ಬಸವ ತತ್ವ ಪ್ರಚಾರ ಪಡಿಸಿದರು. ಅವರು ಸ್ವಲ್ಪ ಕಾಲ ಹರಿಹರದಲ್ಲಿದ್ದರೆಂಬುದು ಬಹಳ ಸಂತೋಷದ ವಿಷಯವಾಗಿದ್ದು, ಅನೇಕ ವಿಶೇಷತೆಗಳಿಂದ ನಾಡಿನ ಗಮನ ಸೆಳೆದಿರುವ ಹರಿಹರ ತಾಲ್ಲೂಕಿನಲ್ಲಿ ಬಸವ ಮಂಟಪ ನಿರ್ಮಾಣವಾಗುತ್ತಿರುವುದು ಇನ್ನೂ ವಿಶೇಷ ಎಂದರು.

ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ತಮ್ಮ ಆಚಾರ-ವಿಚಾರಗಳಿಂದಾಗಿ ವಿಶ್ವ ಗುರುವಾದರು. ಅವರ ಅನುಯಾಯಿಗಳಾದ ಅನೇಕರು ಸಂಕುಚಿತ ಮನಸ್ಸುಗಳಿಂದಾಗಿ ಗೋಡೆ ಕಟ್ಟಿಕೊಂಡಿದ್ದಾರೆಂದು ಬೇಸರ ವ್ಯಕ್ತ ಪಡಿಸಿದರು.

ಚಿತ್ರದುರ್ಗದ ಕುಂಬಾರ ಗುರು ಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಕೇತೇಶ್ವರ ಮಹಾಮಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಣ್ಣ ನಮ್ಮೆಲ್ಲರ ಬದುಕಿನ ದಾರಿದೀಪವಾಗಿದ್ದಾರೆ ಎಂದರು.

ಶಾಸಕ ಎಸ್.ರಾಮಪ್ಪ ಮಾತನಾಡಿ, ಬಸವ ಮಂಟಪ ನಿರ್ಮಾಣ ಒಳ್ಳೆಯ ಕೆಲಸವಾಗಿದ್ದು, ಕಟ್ಟಡಕ್ಕೆ 10 ಲಕ್ಷ ರೂ ಅನುದಾನ ನೀಡುವುದಾಗಿ ಭರವಸೆ ನೀಡಿಸರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಬಸವ ಮಂಟಪದ ಮೂಲಕ ಈ ಭಾಗದ ಜನರಿಗೆ ಅನುಭವ ಮಂಟಪದ ಪರಿಚಯವಾಗಲಿ ಎಂದರು.

ಇನ್ನೋರ್ವ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಇವತ್ತಿನ ಈ ವೇದಿಕೆ ಬಸವಣ್ಣನವರ ಅನುಭವ ಮಂಟಪ ಆಗಿದೆ. ದ್ವೇಷ ಹುಟ್ಟಿಸಿ, ಲಾಭ ಪಡೆಯುವ  ಕೆಟ್ಟ ವಾತಾವರಣವನ್ನು ತೊಡೆದು ಹಾಕಲು ಬಸವಣ್ಣನವರ ತತ್ವ ಅಗತ್ಯವಾಗಿದೆ. 

ದಾವಣಗೆರೆ ವಿರಕ್ತಮಠದ ಶ್ರೀ ಬಸವ ಪ್ರಭು, ದಾರವಾಡದ ನಾಗಲಾಂಬಿಕಾದೇವಿ ವೇದಿಕೆಯಲ್ಲಿದ್ದರು.

ಮಲೇಬೆನ್ನೂರಿನ ಶ್ರೀಮತಿ ಜ್ಯೋತಿ ಈರಮ್ಮ ಮಾತನಾಡಿದರು. ನಾಗರಾಜ್ ಸಾಣೇಹಳ್ಳಿ ಹಾಡಿದ ವಚನ ಗಾಯನ ಎಲ್ಲರ ಗಮನ ಸೆಳೆಯಿತು. 

ಅಧ್ಯಕ್ಷತೆ ವಹಿಸಿದ್ದ ಬಸವ ಬಳಗ ಮತ್ತು ಅಕ್ಕನ ಬಳಗದ ಅಧ್ಯಕ್ಷ ವೈ.ನಾಗೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಗತಿಪರ ಚಿಂತಕ ಆವರಗೆರೆ ರುದ್ರಮುನಿ, ಹಿರಿಯ ವೈದ್ಯ ಡಾ. ಎಂ.ಜಿ. ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಹರಿಹರ ತಾ.ಗ್ರಾ.ಜೆಡಿಎಸ್ ಅಧ್ಯಕ್ಷ ಹಳ್ಳಿಹಾಳ್ ಪರಮೇಶ್ವರಪ್ಪ, ತಾ.ಗ್ರಾ.ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿಗಳಿ ಇಂದೂಧರ್, ಕೆ.ಪಿ. ಗಂಗಾಧರ್, ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಸಾಬೀರ್ ಆಲಿ, ಬಿ. ಮಂಜುನಾಥ್, ಗೌಡ್ರ ಮಂಜಣ್ಣ, ಎ.ಕೆ. ಲೋಕೇಶ್, ಗ್ರಾ.ಪಂ.ಮಾಜಿ ಸದಸ್ಯ ಕೆ. ಜಿ. ಮಂಜುನಾಥ್, ಓ.ಜಿ. ರುದ್ರಗೌಡ್ರು, ಕುಂಬಳೂರು ವಾಸು, ಆದಾಪುರ ವಿಜಯಕುಮಾರ್, ಪ್ರಭುಸ್ವಾಮಿ, ಅಡಿಕೆ ಬಸಣ್ಣ, ಬೆಣ್ಣೆಹಳ್ಳಿ ಬಸವರಾಜ್, ವಕೀಲ ಕೊಂಡಜ್ಜಿ ಶಿವಕುಮಾರ್, ಯಕ್ಕನಹಳ್ಳಿ ಬಸವರಾಜಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು. ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ.ಚಂದ್ರಶೇಖರ್ ಸ್ವಾಗತಿಸಿದರು. ಹರಿಹರದ ನಳಿನಿ ನಿರೂಪಿಸಿದರೆ, ಕೊನೆಯಲ್ಲಿ ಚಿಟ್ಟಕ್ಕಿ ನಾಗರಾಜ್ ವಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಬಸವಣ್ಣ ಮತ್ತು ಅಕ್ಕಮಹಾದೇವಿಯಾಗಿ ಅಂಗನವಾಡಿ ಎಲ್ ಕೇಂದ್ರದ ಪುಟಾಣಿಗಳಾದ ಅರ್ಮಾನ್ ಹಾಗೂ ತೇಜಸ್ವಿನಿ ವಚನ ಹೇಳಿ ಗಮನ ಸೆಳೆದರು.

error: Content is protected !!