ಮೋದಿ ಸರ್ಕಾರದಿಂದ 93 ಲಕ್ಷ ಕೋಟಿ ಸಾಲದ ಹೊರೆ

ದಾವಣಗೆರೆ, ಮಾ.21- ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ 60 ವರ್ಷಗಳಲ್ಲಿ 53 ಲಕ್ಷ ಕೋಟಿ ಸಾಲ ಮಾಡಿತ್ತು. ಆದರೆ, ಕೇವಲ 7 ವರ್ಷ ಆಡಳಿತ ನಡೆಸಿದ ಮೋದಿ ಸರ್ಕಾರ 93 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷದಿಂದ ಪ್ರಧಾನಮಂತ್ರಿಯಾಗಿ ಜವಾಹಾರ್ ಲಾಲ್ ನೆಹರು ಅವರು ಅಧಿಕಾರ ವಹಿಸಿಕೊಂಡಾಗ ದೇಶದ ಕೋಟ್ಯಂತರ ಜನರ ಹಸಿವು, ಕುಡಿಯುವ ನೀರು, ವಿದ್ಯುತ್ ಉತ್ಪಾದನೆ, ಕೈಗಾರಿಕೆಗಳ ಸ್ಥಾಪನೆ, ಆರ್ಥಿಕ ಸ್ಥಿತಿಯ ಚೇತರಿಕೆ, ದೇಶದ ಗಡಿ ಭದ್ರತೆ ವಿಚಾರ, ಹೀಗೆ ಸಾಕಷ್ಟು ಸವಾಲುಗಳು ಅವರಿಗೆ ಎದುರಾಗಿದ್ದವು. ಅವೆಲ್ಲವನ್ನೂ ಅವರು ಸಮರ್ಥವಾಗಿ ನಿರ್ವಹಿಸಿ, ದೇಶವನ್ನು ಕಟ್ಟಿದರು ಎಂದು ಸ್ಮರಿಸಿದರು.

ನೆಹರು ಅವರು ಕೋಟ್ಯಾಂತರ ಜನರ ಹಸಿವು ನೀಗಿಸಲು ಹಸಿರು ಕ್ರಾಂತಿ ಆರಂಭಿಸಿ, ದೇಶದಲ್ಲೆಡೆ ರೈತರಿಗೆ ಪ್ರೋತ್ಸಾಹ ನೀಡಿ ಬೀಜ, ಗೊಬ್ಬರ ನೀಡಿದರು. ನೀರಾವರಿಗೆ ಒತ್ತು ನೀಡಿ, ದೇಶದೆಲ್ಲೆಡೆ ಅಣೆಕಟ್ಟುಗಳು, ಚಾನಲ್‌ಗಳು, ಕೆರೆಗಳನ್ನು ಕಟ್ಟಿಸುವ ಮೂಲಕ ರೈತರ ಬೆಳೆಗಳಿಗೆ ನೀರು ಒದಗಿಸಿದರು. ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ದೇಶದಲ್ಲಿರುವ ಕತ್ತಲೆ ಓಡಿಸಲು ಕೈಗಾರಿಕೆಗಳಿಗೆ ಬೇಕಾಗುವ ವಿದ್ಯುತ್ ಪಡೆಯಲು ದೇಶದುದ್ದಕ್ಕೂ ಅನೇಕ ನದಿ, ಜಲಪಾತಗಳು ಇರುವ ಕಡೆ ದೊಡ್ಡ ದೊಡ್ಡ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಿ, ಜನತೆಗೆ ಬೆಳಕಿನ ಕೊರತೆಯಾಗದಂತೆ ನೋಡಿಕೊಂಡರು ಎಂದು ಶ್ಲಾಘಿಸಿದ್ದಾರೆ.

ಎಲ್ಲಾ ಕ್ಷೇತ್ರಗಳು ಸರ್ಕಾರದ ಸ್ವಾಮ್ಯಕ್ಕೆ ಸೇರಿರುವುದರಿಂದ ಅಲ್ಲಿ ಜನತೆಗೆ ಹೆಚ್ಚು ಹೆಚ್ಚು ಉದ್ಯೋಗ ಸಿಕ್ಕಿತು. ಹೀಗೆ ದೇಶದ ಆಡಳಿತವನ್ನು ಸುಭಿಕ್ಷವಾಗಿ ನಡೆಸಿದರು. ಈ ಯೋಜನೆಗಳಿಗಾಗಿ 60 ವರ್ಷಗಳ ಆಡಳಿತದಲ್ಲಿ ಕೇವಲ 53 ಲಕ್ಷ ಕೋಟಿ ಹಣ ಸಾಲ ಮಾಡಿದ್ದರು. ಆದರೆ, ಮೋದಿ ಸರ್ಕಾರ ಈಗ 7 ವರ್ಷಗಳ ಆಡಳಿತದಲ್ಲಿ 93 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಕಿಡಿಕಾರಿದ್ದಾರೆ.

ರೈತರಿಗೆ ನೀಡುವ ಬೀಜ, ರಸಗೊಬ್ಬರ ಒಳಗೊಂಡು, ಬಿಎಸ್‌ಎನ್‌ಎಲ್, ವಿದ್ಯುತ್ ಘಟಕ, ಬ್ಯಾಂಕುಗಳು, ಎಲ್‌ಐಸಿ, ವಿಮಾನ ಸಂಚಾರ, ಕಲ್ಲಿದ್ದಲು ಘಟಕ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿ, ರಿಲಾಯನ್ಸ್, ಟಾಟಾ, ಬಿರ್ಲಾದಂತಹ ಶ್ರೀಮಂತರಿಗೆ ಮಾರಿ, ಸರ್ಕಾರಕ್ಕೆ ಆ ಕ್ಷೇತ್ರಗಳಿಂದ ಬರುತ್ತಿದ್ದ ಆದಾಯವನ್ನು ಕುಂಠಿತಗೊಳಿಸಿಕೊಂಡು ಅವರು ಕಟ್ಟುವ ಟ್ಯಾಕ್ಸ್‌ಗಾಗಿ ಕಾಯುತ್ತಾ ಕುಳಿತಿದೆ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.

ಅನೇಕ ಸರ್ಕಾರಿ ನೌಕರರು ಕೆಲಸ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಕೆಲವರು ಬೀದಿ ಪಾಲಾದರು. ಇದಕ್ಕೆಲ್ಲಾ ಕಾರಣ ಯಾರು?, ನೋಟ್ ಬ್ಯಾನ್ ಮಾಡಿದ ಮೋದಿ ಸರ್ಕಾರ 200 ಲಕ್ಷ ಕೋಟಿ ನಷ್ಟ ಅನುಭವಿಸಿತು, ಹಣದ ಅಭಾವ ಉಂಟಾಯಿತು. ಈ ನಷ್ಟ ಸರಿದೂಗಿಸಲು 93 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ.

error: Content is protected !!