ಹರಿಹರ, ಜ.8- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ಹೋರಾಟಕ್ಕೆ ಬೆಂಬಲಿಸಿ, ಇಂದು ನಗರದ ವಿವಿಧ ಸಂಘಟನೆಯ ಮುಖಂ ಡರು ಹಾಗೂ ತಾಲ್ಲೂಕಿನ ರೈತ ಮುಖಂಡರು ಗಾಂಧಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡಿ, ದೇಶದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ರೈತರ ಪರವಾಗಿ ಯೋಜನೆಗಳನ್ನು ರೂಪಿಸಿ ಅವರ ಬೆಳವಣಿಗೆಗೆ ಪೂರಕವಾದ ಯೋಜನೆಯನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡದೆ ತನ್ನ ಹಠಮಾರಿ ಧೋರಣೆಯೊಂದಿಗೆ ರೈತರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ. ಗೋ ಹತ್ಯೆ ನಿಷೇಧ, ಲವ್ ಜಿಹಾದ್, ಖಾಸಗೀಕರಣ ಮುಂತಾದಾವುದಗಳಿಂದ ರೈತರಿಗೆ ಯಾವುದೇ ತರಹದ ಉಪಯೋಗ ಆಗುವುದಿಲ್ಲ. ಅದನ್ನು ಬಿಟ್ಟು ರೈತರ ಬೆಳವಣಿಗೆಯ ಬಗ್ಗೆ ಚಿಂತನೆ ಮಾಡುವಂತೆ ಹೇಳಿದರು.
ಮಾಜಿ ದೂಡ ಸದಸ್ಯ ಹೆಚ್. ನಿಜಗುಣ ಮಾತನಾಡಿ, ದೇಶದ ಬೆನ್ನೆಲುಬು ರೈತರ ಜೀವನದ ಜೊತೆಗೆ ಚೆಲ್ಲಾಟವನ್ನು ಕೇಂದ್ರ ಸರ್ಕಾರ ಕಳೆದ 43 ದಿನಗಳಿಂದ ಆಡುತ್ತಾ ಬಂದಿರುತ್ತದೆ.
ರೈತರ ಸಂಕಷ್ಟದಿಂದ ಬಳಲಿದರೆ ಅದರಿಂದ ದೇಶಕ್ಕೆ ಹಾನಿ ಎಂಬ ಅಂಶವನ್ನು ಮರೆತು ಈ ರೀತಿಯ ಹಠಮಾರಿ ಧೋರಣೆಯನ್ನು ಮಾಡುತ್ತಿದೆ. ಕೂಡಲೇ ಹಠಮಾರಿ ಧೋರಣೆನ ಕೈ ಬಿಟ್ಟು ರೈತರಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡರಾದ ಪ್ರಭುಗೌಡ, ಮಹೇಶಪ್ಪ ದೊಗ್ಗಳ್ಳಿ, ಹಾಳೂರು ನಾಗರಾಜ್, ಚಂದ್ರಪ್ಪ ಅಮರಾವತಿ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಸಂಘಟನೆ ಮುಖಂಡರಾದ ಕಲೀಂ ಬಾಷಾ, ರುದ್ರಗೌಡ ಯಕ್ಕೆಗೊಂದಿ, ಹೆಚ್. ಮಲ್ಲೇಶ್, ಹನುಮಂತಪ್ಪ, ಬಿ. ಮುಗ್ದುಂ, ರಮೇಶ್, ಹರಿ ಜಾದೂಗಾರ್, ಶಂಕರ್ ಮೂರ್ತಿ, ಚೆನ್ನಬಸಪ್ಪ ಹುಲಿಕಟ್ಟಿ, ನಾಗರಾಜ್, ಎಂ.ಎಸ್. ರಾಮು ಇನ್ನಿತರರು ಹಾಜರಿದ್ದರು.