ದಾವಣಗೆರೆ, ಜ.8- ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಅನಿರೀಕ್ಷಿತ ಮಳೆಗೆ ಜನ ಜೀವನ ಅಸ್ತವ್ಯಸ್ತವಾಯಿತು.
ಸಂಜೆ 5 ಗಂಟೆಗೆ ಧೋ ಎಂದು ಮಿಂಚು-ಗುಡುಗಿನ ಜೊತೆ ಸುಮಾರು ನಾಲ್ಕೈದು ತಾಸುಗಳಿಗೂ ಹೆಚ್ಚುಕಾಲ ಸುರಿದ ಮಳೆ, ಇದೇನು ಚಳಿಗಾಲವೋ? ಮಳೆಗಾಲವೋ? ಎಂದು ಜನತೆ ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವಂತೆ ಮಾಡಿತು.
ಸಂಜೆ ಕಚೇರಿ ಕೆಲಸಗಳನ್ನು ಮುಗಿಸಿ ಮನೆಗೆ ಹಿಂದಿರುಗಬೇಕಾದವರು ಮಳೆಯ ರಭಸಕ್ಕೆ ಅಂಜಿ ನಿಂತಲ್ಲೇ ನಿಲ್ಲಬೇಕಾಯಿತು. ಬಿಡದೇ ಸುರಿಯುತ್ತಿದ್ದ ಮಳೆಯಲ್ಲಿಯೇ ನೆನೆಯುತ್ತಾ ಮನೆಯತ್ತ ಸಾಗಿದರು.
ಸಂಜೆ 7ರ ನಂತರ ಮಳೆ ಪ್ರಮಾಣ ತುಸು ಕಡಿಮೆಯಾದಾಗ ಒಂದೇ ಸಮನೆ ವಾಹನಗಳ ಸಂಚಾರ ಹೆಚ್ಚಾದ ಪರಿಣಾಮ ಹಲವೆಡೆ ಟ್ರಾಫಿಕ್ ಜಾಮ್ ಸಮಸ್ಯೆಗಳು ಉಂಟಾದವು.
ರೈಲ್ವೇ ಅಂಡರ್ ಬ್ರಿಡ್ಜ್ಗಳ ಕೆಳಗೆ ನೀರು ನಿಂತ ಪರಿಣಾಮ ಹಳೆ ನಗರಕ್ಕೆ ಹೋಗಬೇಕಾದ ಪ್ರಯಾಣಿಕರು, ಅಲ್ಲಿಂದ ಹೊಸ ನಗರಕ್ಕೆ ಬರಬೇಕಾದವರು ಅನ್ಯ ಮಾರ್ಗಗಳನ್ನು ಬಳಸುತ್ತಿದ್ದುದು ಕಂಡು ಬಂತು. ನಗರದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ.
ಜಲ ಸಿರಿ ಯೋಜನೆಯಡಿ ಪೈಪ್ ಲೈನ್ ಅಳವಡಿಕೆಗೆ ಗುಂಡಿ ತೆಗೆದು ಮುಚ್ಚಲಾಗಿದ್ದ ಜಾಗದ ಮೇಲೆ ಚಲಿಸಿದ ವಾಹನಗಳು ನೆಲದಲ್ಲಿ ಸಿಕ್ಕಿಹಾಕಿಕೊಂಡ ಘಟನೆಗಳು ಹದಡಿ ರಸ್ತೆಯಲ್ಲಿ ನಡೆದವು.
ಚಾಮರಾಜ ಪೇಟೆ ಬಳಿ ಇರುವ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಆಹಾರ ಪದಾರ್ಥಗಳು ನೀರುಪಾಲಾದ ಬಗ್ಗೆ ವರದಿಯಾಗಿದೆ.
ಬಂಗಾಳ ಕೊಲ್ಲಿಯಿಂದ ಉಂಟಾದ ವಾಯುಭಾರ ಕುಸಿತದಿಂದ, ಚಳಿಗಾಲದಲ್ಲಿ ಪೂರ್ವ ದಿಕ್ಕಿನಿಂದ ಬರುವ ಕುಳಿರ್ಗಾಳಿ ಹೊತ್ತು ತಂದ ಮಳೆ ಸಿಟಿ ಜನಕ್ಕಂತೂ ಸಂತಸ ತಂತು.
ವ್ಯವಹಾರ ಕುಸಿತ : ಸಂಜೆ ಪುಟ್ಪಾತ್ ಮೇಲೆ ತಿಂಡಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಮಳೆಯಿಂದಾಗಿ ನಷ್ಟ ಅನುಭವಿಸಬೇಕಾಯಿತು.