ಶಾಸಕ ಪೂಜಾರ ಆಗ್ರಹ
ರಾಣೇಬೆನ್ನೂರು, ಮಾ.20- ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ತಾಲೂಕಿನ ಚಳಗೇರಿ ನವೀನ್ ಮೃತ ದೇಹವನ್ನು ಭಾರತಕ್ಕೆ ತರುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್, ಸಂಸದೀಯ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ ಸಹಕಾರ ನೀಡಿದ್ದಾರೆ. ಅವರಿಗೆ ನವೀನ್ ಕುಟುಂಬ ವರ್ಗ ಹಾಗೂ ತಾಲ್ಲೂಕಿನ ಜನರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ದೇಹ ತರಿಸಲು ಆತನ ತಂದೆ ಶೇಖರಪ್ಪ ಮಾಡಿದ್ದ ಮನವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿವೆ. ನವೀನ್ ಕುಟುಂಬಕ್ಕೆ ಈಗಾಗಲೇ ರಾಜ್ಯ ಸರ್ಕಾರ 25 ಲಕ್ಷ ರೂ. ನೀಡಿದ್ದು ಕೇಂದ್ರ ಸರ್ಕಾರ ಕೂಡ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿದರು. ನಾನು ವೈಯಕ್ತಿಕ ವಾಗಿ 5 ಲಕ್ಷ ನೀಡುತ್ತೇನೆ. ನವೀನ ಸಹೋದರನಿಗೆ ಉದ್ಯೋಗ ಕೊಡಿಸಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದು ಈ ನಿಟ್ಟಿನಲ್ಲಿ ನಾನು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ನಾಳೆ ದಿನಾಂಕ 21ರ ಸೋಮವಾರ ಬೆಳಗ್ಗೆ 3ಕ್ಕೆ ನವೀನ ಮೃತದೇಹ ಬೆಂಗಳೂ ರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತದೆ. ಅಲ್ಲಿ ನವೀನ್ ಸಹೋದರ ಹರ್ಷನಿಗೆ ಮೃತದೇಹವನ್ನು ಹಸ್ತಾಂತರಿಸ ಲಾಗುತ್ತದೆ. ಅಲ್ಲಿಂದ ಮೃತದೇಹವನ್ನು ನವೀನ್ ಸ್ವಗ್ರಾಮ ಚಳಗೇರಿ ಕರೆತರಲು ರಾಜ್ಯ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಗ್ರಾಮದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಸಾರ್ವಜನಿಕರಿಗೆ ಮೃತದೇಹ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಗ್ರಾಮಕ್ಕೆ ಸಿಎಂ, ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ, ಸಿರಿಗೇರೆ ಶ್ರೀಗಳು, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರುಗಳು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ತಹಶೀಲ್ದಾರ್ ಶಂಕರ್ ಜಿ.ಎಸ್, ಡಿವೈಎಸ್‍ಪಿ ಟಿ.ವಿ.ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.