ಭಾವುಕರಾಗಿಯೇ ಜನ್ಮ ದಿನ ಆಚರಣೆ, ಸಿಹಿ ವಿತರಣೆ, ಜೇಮ್ಸ್ ವೀಕ್ಷಣೆ
ಅಪ್ಪು…ಅಪ್ಪು…ಅಪ್ಪು…
ದಾವಣಗೆರೆ, ಮಾ.17- ಕನ್ನಡಿಗರ ಕಣ್ಮಣಿ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನ ಹಾಗೂ ಪುನೀತ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಅಪ್ಪು ಅಭಿಮಾನ ಮತ್ತೊಮ್ಮೆ ಅನಾವರಣಗೊಂಡಿತು.
ಕೇವಲ ಸಾಮಾಜಿಕ ಜಾಲ ತಾಣ ಗಳಾದ ಫೇಸ್ ಬುಕ್, ವಾಟ್ಸಾಪ್‌ಗಳ ಲ್ಲಷ್ಟೇ ಅಲ್ಲ, ನಗರದ ವಿವಿಧೆಡೆ ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಲಾಯಿತು. ಬಹುದಿನಗಳಿಂದ ಕಾಯುತ್ತಿದ್ದ ಜೇಮ್ಸ್ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಚಿತ್ರಮಂದಿಗಳಿಗೆ ಲಗ್ಗೆ ಇಟ್ಟಿದ್ದರು.
ಚಿತ್ರ ಬಿಡುಗಡೆಯಾದ ಗೀತಾಂಜಲಿ, ವಸಂತ ಚಿತ್ರಮಂದಿರಗಳ ಆವರಣದಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಸಂತ ಚಿತ್ರಮಂದಿರದಲ್ಲಿ ಬೆಳಿಗ್ಗೆಯೇ ನಡೆದ ಅಭಿಮಾನಿಗಳ ಶೋಗೆ ಚಿತ್ರಮಂದಿರ ಭರ್ತಿಯಾಗಿತ್ತು. ಉಳಿದಂತೆ ಎಲ್ಲಾ ಶೋಗಳ ಟಿಕೆಟ್‌ಗಳು ಮುಂಚಿತ ವಾಗಿಯೇ ಬಿಕರಿಯಾಗಿದ್ದವು. ಚಿತ್ರ ಆರಂಭಕ್ಕೂ ಮುನ್ನ ಅಭಿಮಾನಿಗಳ ಅಪ್ಪು..ಅಪ್ಪು..ಅಪ್ಪು.. ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಜೇಮ್ಸ್ ವೀಕ್ಷಿಸಿ ಕುಣಿದು ಕುಪ್ಪಳಿಸಿ, ಅಪ್ಪು ನೆನೆಪ ಅಭಿಮಾನಿಗಳು ಮತ್ತೆ ಮತ್ತೆ ಭಾವುಕರಾಗಿ, ಕಣ್ಣೀರು ಹಾಕುತ್ತಿದ್ದುದು ಸಾಮಾನ್ಯವಾಗಿತ್ತು.
`ಅಪ್ಪು ಉತ್ಸವ’
ದಾವಣಗೆರೆ, ಮಾ.17- ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಪುನಿತ್ ಜನ್ಮದಿನ ಹಾಗೂ ಅವರ ನಟನೆಯ ಜೇಮ್ಸ್ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಪ್ಪು ಉತ್ಸವ ಆಚರಿಸಲಾಯಿತು.
ನಿಟುವಳ್ಳಿಯ ಶ್ರೀ ದುರ್ಗಾಂಬಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪುನೀತ್ ಅವರ 47ನೇ ಹುಟ್ಟುಹಬ್ಬದ ಅಂಗವಾಗಿ 47 ಆಟೋಗಳ ಮೇಲೆ ಪುನಿತ್ ಕಟೌಟ್ ಮೆರವಣಿಗೆ ನಡೆಯಿತು. ವಸಂತ ಚಿತ್ರಮಂದಿರದವರೆಗೆ ಮೆರವಣಿಗೆ ತೆರಳಿ, ನಂತರ ಕೇಕ್ ಕತ್ತರಿಸಿ, ಅಭಿಮಾನಿಗಳಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಯೋಗೇಶ್, ಪುನೀತ್ ಅಭಿನಯದ ಜೇಮ್ಸ್ ಚಿತ್ರದ ಪ್ರವೇಶ ದರ 50 ರೂ. ಕಡಿಮೆ ಮಾಡಬೇಕು. ಈ ಬಗ್ಗೆ ನಿರ್ಮಾಪಕರಿಗೆ ಮನವಿ ಸಲ್ಲಿಸಲಾಗುವುದು. ಜೊತೆಗೆ ಪುನೀತ್ ಅವರ ಚಿತ್ರಗಳನ್ನು ಟಿವಿಯಲ್ಲಿ ಪ್ರಸಾರ ಮಾಡುವುದನ್ನು ಸ್ಥಗಿತಗೊಳಿಸಿ ಪ್ರತಿ ವರ್ಷ ಅವರ ಜನ್ಮದಿನದಂದು ಚಿತ್ರೋತ್ಸವದ ರೀತಿ ಪ್ರದರ್ಶಿಸಲು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವೈ. ಭಾಗ್ಯದೇವಿ, ತಿಪ್ಪೇಸ್ವಾಮಿ, ಹರೀಶ್, ನಾಗರಾಜ್, ಮಾರುತಿ, ಆಟೋ ಮಂಜು ಇತರರು ಇದ್ದರು.