ಹಳ್ಳಿಗಳಲ್ಲಿ ಸಂಭ್ರಮದ ಮಹೇಶ್ವರ ಜಾತ್ರೆ

ದಾವಣಗೆರೆ, ಜ.6- ಮಹೇಶ್ವರನ ಜಾತ್ರೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲೊಂದು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮಹೇಶ್ವರ ಜಾತ್ರೆ ಕಳೆಗುಂದಿತ್ತು. ನಗರಕ್ಕೆ ಸಮೀಪದ ಬಸಾಪುರ ಸೇರಿದಂತೆ ಹಲವೆಡೆ ಹಬ್ಬದ ಆಚರಣೆ ನಡೆಯಲಿಲ್ಲ. ಆದರೆ ಕೆಲವು ಹಳ್ಳಿಗಳಲ್ಲಿ ಪ್ರತಿ ವರ್ಷದಂತೆಯೇ ಈ ವರ್ಷವೂ ಹಬ್ಬ ಆಚರಣೆ ನಡೆಯಿತು. ಮಹೇಶ್ವರ ಜಾತ್ರೆ ಎಂದರೆ ಅನ್ನ, ಹಾಲು, ಬೆಲ್ಲ, ಬಾಳೆಹಣ್ಣಿನ ಊಟ ವಿಶೇಷ. 

ಕೆಲವೆಡೆ ಒಂದು ದಿನ ಆಚರಣೆಯಾದರೆ ಮತ್ತೆ ಕೆಲವೆಡೆ ಎರಡು ದಿನಗಳ ಹಬ್ಬ ನಡೆಯುತ್ತದೆ. ಅದರಲ್ಲಿ ಒಂದು ದಿನ ಸಿಹಿ ಊಟ ಬಡಿಸಲಾಗುತ್ತದೆ. 

ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಮಹೇಶ್ವರನ ಹಬ್ಬ ಆಚರಿಸಲಾಯಿತು. ಗ್ರಾಮದ ಸಮೀಪದ ತೋಟಕ್ಕೆ  ಪಲ್ಲಕ್ಕಿಯೊಂದಿಗೆ ದೇವರ ಮೂರ್ತಿ ತಂದು ಪೂಜಿಸಿ, ಪ್ರಸಾದಕ್ಕೆ ಚಾಲನೆ ನೀಡಲಾಯಿತು.

error: Content is protected !!