ಹರಿಹರದಲ್ಲಿ ಸಡಗರ ಸಂಭ್ರಮದ ಹೋಳಿ

ಹರಿಹರ, ಮಾ.18 – ನಗರದಲ್ಲಿ ಸಡಗರ ಸಂಭ್ರಮದಿಂದ ಹೋಳಿ ಆಚರಣೆ ಮಾಡಲಾಯಿತು.

ನಿನ್ನೆ ರಾತ್ರಿ ರತಿ ಕಾಮಣ್ಣನಿಗೆ ವಿಶೇಷ ಪೂಜೆ, ಅಲಂಕಾರ ಮಹಾ ಮಂಗಳಾರತಿ ಮಾಡಿ  ಕಾಮದಹನ ಮಾಡಲಾಯಿತು. ಯುವಕರು ಕಾಮಣ್ಣನ ದಹನ ಮಾಡುವ ಸಮಯದಲ್ಲಿ ಕುಳ್ಳು, ಕಟ್ಟಿಗೆ ತಂದು ಬೆಂಕಿ ಹಚ್ಚಿ ಕೇಕೆ ಹಾಕಿ ಸಂಭ್ರಮಿಸಿದರು. ನಂತರ ಬೆಳಗ್ಗೆ ಯುವಕರು ಪರಸ್ಪರ ಬಣ್ಣವನ್ನು ಎರಚಿ ತಲೆಗೆ ಮೊಟ್ಟೆ ಒಡೆದುಕೊಂಡು, ಹಲಗೆ ಬಾರಿಸುತ್ತಾ ಕುಣಿದು ಕುಪ್ಪಳಿಸಿದರು.

ಹೊರ ಪ್ರದೇಶದಲ್ಲಿ ಇರುವ ಸ್ನೇಹಿತರಿಗೆ ಬಣ್ಣವನ್ನು ಹಚ್ಚಲು ತಂಡೋಪ ತಂಡವಾಗಿ ಯುವಕರು ಬೈಕ್ ರೈಡ್ ಮಾಡಿಕೊಂಡು ಮನೆಗಳಿಗೆ ಹೋಗಿ ಬಣ್ಣ ಹಚ್ಚಿದರು.

ಕೋಟೆ ಬಡಾವಣೆ, ಹೊಸಭರಂಪುರ, ಹವಳದ ಬೀದಿ, ನಡವಲಪೇಟೆ, ವಿಜಯ ನಗರ, ಎ.ಕೆ. ಕಾಲೋನಿ, ಹರ್ಲಾಪುರ, ಹೈಸ್ಕೂಲ್ ಬಡಾವಣೆ, ರಾಜಾರಾಮ್ ಕಾಲೋನಿ, ವಿದ್ಯಾನಗರ, ಕೈಲಾಸ ನಗರ, ಕಾಳಿದಾಸ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನೀರಿನ ಕಾರಂಜಿ ಮಾಡಿ ಡಿ.ಜೆ. ಸೌಂಡ್ ಸಿಸ್ಟಂ ತಾಳಕ್ಕೆ ಹೆಜ್ಜೆಗಳನ್ನು ಹಾಕುತ್ತಾ ಮಡಿಕೆ ಒಡೆದು ಸಂಭ್ರಮದಿಂದ ಹೋಳಿ ಆಚರಣೆ ಮಾಡಲಾಯಿತು.

 ಗಾಂಧಿ ವೃತ್ತದಲ್ಲಿ ನಗರದ ಹಲವಾರು ಸಂಘಟನೆಗಳ ಮುಖಂಡರಿಂದ ಸಾರ್ವಜನಿಕರಿಗೆ ತಂಪಾದ ಪಾನಿಯ, ಮಜ್ಜಿಗೆ ವಿತರಣೆ ಮಾಡಲಾಯಿತು. 

ಸಿಪಿಐ ಸತೀಶ್ ಕುಮಾರ್, ಪಿಎಸ್ಐ ಸುನಿಲ್ ಬಸವರಾಜ್ ಗುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ವೀರಬಸಪ್ಪ ಕುಸಲಾಪುರ, ಸಿಬ್ಬಂದಿಗಳಾದ ನಿಂಗರಾಜ್, ಸತೀಶ್, ದ್ವಾರಕೀಶ್, ನಾಗರಾಜ್, ದೇವರಾಜ್ ಹಾಗೂ ಇತರರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

error: Content is protected !!