ಉಕ್ಕಡಗಾತ್ರಿ : 4 ಕೋಟಿ ರೂ. ಅನುದಾನದ ಕಾಮಗಾರಿಗೆ ಚಾಲನೆ

ಮಲೇಬೆನ್ನೂರು, ಜ.6- ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ರಾಮಪ್ಪ ಅವರು ನಿನ್ನೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ನೀರಾವರಿ ನಿಗಮದಿಂದ ಸುಮಾರು 4 ಕೋಟಿ ರೂ. ಅನುದಾನದಲ್ಲಿ ಈ ಕಾಮಗಾರಿ ಕೈಗೊಂಡಿದ್ದು, ನದಿ ಪಾತ್ರದ ಹಳ್ಳಿಗಳಿಗೆ ಅಗತ್ಯ ಕಾಮಗಾರಿಗಳನ್ನು ಮಂಜೂರು ಮಾಡಿಸಲು ಶ್ರಮಿಸುತ್ತೇನೆಂದು ರಾಮಪ್ಪ ಹೇಳಿದರು.

ಅಲ್ಲದೇ ಹರಿಹರ ತಾಲ್ಲೂಕಿನಲ್ಲಿ ಪ್ರಮುಖವಾಗಿ ಆಗಬೇಕಿರುವ ಯೋಜನೆಗಳ ಮಂಜೂರಾತಿಗಾಗಿ ಸರ್ಕಾರಕ್ಕೆ ಸಾಕಷ್ಟು ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದರೆ, ಈ ಸರ್ಕಾರ ಈ ಹಿಂದಿನ ಸಮ್ಮಿಶ್ರ ಸರ್ಕಾರ ಮಂಜೂರು ಮಾಡಿದ್ದ ಅನುದಾನಗಳನ್ನು ತಡೆ ಹಿಡಿದಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. ಪರಿಸ್ಥಿತಿ ಹೀಗೆ ಮುಂದುವರೆದರೆ, ಬೀದಿಗಿಳಿದು ಹೋರಾಟ ಮಾಡುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ, ಅಭಿನಂದಿಸಿದರು. ಶ್ರೀ ಗುರು ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್, ಗ್ರಾ.ಪಂ. ಸದಸ್ಯರಾದ ಹೇಮಪ್ಪ ಶಿವಣ್ಣರ, ಬಿ. ಶಿವಣ್ಣ, ಕರಿಸಿದ್ದಪ್ಪ, ಸಂಜೀವರೆಡ್ಡಿ ಬಣಕಾರ, ದೇವೇಂದ್ರಪ್ಪ ಹೊಟ್ಟೇರ, ಗ್ರಾಮದ ಬಿದ್ದಾಡಪ್ಪ, ರಾಜಶೇಖರಸ್ವಾಮಿ, ಮಂಜು ದೊಡ್ಮನಿ, ಗದಿಗೆಪ್ಪ, ಗುತ್ತ್ಯಪ್ಪ, ನೀರಾವರಿ ನಿಗಮದ ಎಇಇ ಸಂತೋಷ್ ಮತ್ತಿತರರು ಹಾಜರಿದ್ದರು.

error: Content is protected !!