ಕೃಷಿ ವಿರೋಧಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ವಿವಿಧ ಹಂತದ ಚಳವಳಿ

ರಾಜ್ಯದ ಹನ್ನೆರಡು ಜಿಲ್ಲೆಗಳ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯುತ್ತಿರುವ ಮೆಕ್ಕೆಜೋಳವನ್ನು ರಾಜ್ಯ ಸರ್ಕಾರ ಕೂಡಲೇ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು. ಬೆಲೆ ಯೋಜನೆಗೆ ಕಾನೂನು ಮಾನ್ಯತೆ ನೀಡಬೇಕು.

– ಟಿ. ನುಲೇನೂರು ಶೇಖರಪ್ಪ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

ಕೃಷಿ ಪಂಪ್‌ಸೆಟ್‌ಗಳಿಗೆ 8 ತಾಸು ವಿದ್ಯುತ್ ಪೂರೈಸಬೇಕು. ಚನ್ನಗಿರಿ ಸೇರಿದಂತೆ ಹಲವೆಡೆ ಮೂರು-ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡದ ಕಾರಣ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ತರಕಾರಿ ಬೆಳೆಯುವುದೇ ಕಷ್ಟವಾಗುತ್ತಿದೆ.

-ಬುಳ್ಳಾಪುರದ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ರೈತ ಸಂಘ

ದಾವಣಗೆರೆ, ಮಾ. 17- ರಾಜ್ಯದಲ್ಲೂ ಸಹ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ, ಇದೇ ದಿನಾಂಕ 21 ರಂದು ಬೆಂಗಳೂರು ಚಲೋ, 22 ಮತ್ತು 23 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ, ಪರ್ಯಾಯ ಅಧಿವೇಶನ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಶೇಖರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರವೇ ಎಂಎಸ್‌ಪಿ ಖಾತ್ರಿ ಮಾಡಲು ಒತ್ತಾಯಿಸಿ ರಾಗಿ, ಜೋಳ, ಭತ್ತವನ್ನು ಯಾವುದೇ ಮಿತಿ ಇಲ್ಲದೆ ಖರೀದಿ ಕೇಂದ್ರಗಳ ಮೂಲಕ ಖರೀದಿಸಲು ಆಗ್ರಹಿಸಿ, ವಿದ್ಯುತ್ ಖಾಸಗೀಕರಣ ಮಾಡದಂತೆ ಎಚ್ಚರಿಸಲು ಸಂಯುಕ್ತ ಹೋರಾಟ – ಕರ್ನಾಟಕ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.

ಕೇಂದ್ರ ಸರ್ಕಾರ ಈಗಾಗಲೇ ರೈತ ವಿರೋಧಿ ಕೃಷಿ ಕಾಯಿದೆಗಳನ್ನು ವಾಪಸ್ ಪಡೆದಿದೆ. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿರ್ದೇಶನದಂತೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ವಾಪಾಸ್ ಪಡೆದಿಲ್ಲ. ಇವೆರಡೂ ಕಾಯ್ದೆಗಳಲ್ಲದೇ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಕೂಡ ರೈತ ವಿರೋಧಿಯಾಗಿದ್ದು, ಈ ಮೂರೂ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಬೃಹತ್ ಸಮಾವೇಶದ ಮೂಲಕ ಒತ್ತಾಯಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿತ್ತು. ರೈತರ ವಿರೋಧದಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಸ್ಮಾರ್ಟ್ ಮೀಟರ್ ವಿಷಯ ಪ್ರಸ್ತಾಪ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಬಾರದು ಎಂದು ಆಗ್ರಹಿಸಿದರು.

ದಾವಣಗೆರೆ-ಚಿತ್ರದುರ್ಗ-ತುಮಕೂರು-ಬೆಂಗಳೂರು ನೇರ ರೈಲು ಮಾರ್ಗ ಯೋಜನೆಗೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಿಲ್ಲ. ಕೂಡಲೇ ಅನುದಾನ ನೀಡಬೇಕು. ಉತ್ತರ ಭಾರತದಲ್ಲಿ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರಗಳು 13,500 ಕೋಟಿ ರೂ. ಅನುದಾನ ನೀಡಿವೆ. ದಕ್ಷಿಣ ಭಾರತದಲ್ಲಿ ಅತಿ ಕಡಿಮೆ ಅನುದಾನ ನೀಡುತ್ತಿದೆ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಳ್ಳಾಪುರದ ಹನುಮಂತಪ್ಪ ಮಾತನಾಡಿ, ಸಮರ್ಪಕ ವಿದ್ಯುತ್ ಪೂರೈಸಬೇಕು. ಟ್ರಾನ್ಸ್‌ಫಾರ್ಮರ್ ಸುಟ್ಟರೆ   ಬದಲಾಯಿಸಿಕೊಡಬೇಕು. ಇಲ್ಲವಾದಲ್ಲಿ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಲ್.ಪ್ರಸಾದ್, ಈಚಘಟ್ಟ ಚನ್ನಬಸಪ್ಪ, ಕೊಗ್ಗ ನೂರು ಹನುಮಂತಪ್ಪ, ಚನ್ನಗಿರಿ ಕರಿಬಸಪ್ಪ, ಈಚಘಟ್ಟ ಕರಿಬಸಪ್ಪ ಮತ್ತಿತರರಿದ್ದರು.

error: Content is protected !!