ಡಿಸಿ ಜನಸ್ಪಂದನೆಗೆ ಮತ್ತೆ ಚಾಲನೆ

ವಂಶವೃಕ್ಷ ಅಕ್ರಮದಿಂದ ಚೆಕ್ ಡ್ಯಾಂ ದುರಸ್ತಿಯವರೆಗೆ ಅಹವಾಲುಗಳ ಸಲ್ಲಿಕೆ

ದಾವಣಗೆರೆ, ಮಾ.17 – ಕೊರೊನಾ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ಜಿಲ್ಲಾಧಿಕಾರಿ ಗಳ ಜನಸ್ಪಂದನ ಕಾರ್ಯಕ್ರಮವನ್ನು ಗುರುವಾರ ದಿಂದ ಪುನರಾರಂಭಿಸಲಾಗಿದ್ದು, ಜಿಲ್ಲೆಯ ಹತ್ತು, ಹಲವು ಸಮಸ್ಯೆಗಳ ಬಗ್ಗೆ ಜನರು ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎರಡು ವಾರಕ್ಕೊಮ್ಮೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ.

ಜಗಳೂರು ತಾಲ್ಲೂಕಿನ ಗಡಿ ಭಾಗದ ಚಿಕ್ಕಮಂಗನಹೊಳೆ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ, ಇಲ್ಲಿನ ಚೆಕ್ ಡ್ಯಾಂ ದುರಸ್ತಿ ಮಾಡಬೇಕು, ಕರೆಕಟ್ಟೆ ಗ್ರಾಮದಲ್ಲಿ ಭತ್ತದ ಅಂಗಡಿ ಮಾಲೀಕನಿಂದ ವಂಚಿತ ವ್ಯಕ್ತಿಗೆ ಹಣ ಕೊಡಿಸಬೇಕು, ಚನ್ನಗಿರಿ ತಾಲ್ಲೂಕಿನ ಸೋಮಲಾಪುರ ಗ್ರಾಮಕ್ಕೆ ಬಸ್ ಸೌಲಭ್ಯ, ನಗರ ಸಮೀಪದ ಶಿರಮಗೊಂಡನಹಳ್ಳಿಯ ರಸ್ತೆ – ಪಾರ್ಕ್ ದುರಸ್ತಿ, ಹೂವಿನಮಡುವಿನ ಚೌಡೇಶ್ವರಿ ದೇವಸ್ಥಾನದ ಜಾಗ ಒತ್ತುವರಿ ತೆರವು ಸೇರಿದಂತೆ, ಹಲವಾರು ಮನವಿಗಳು ಸಲ್ಲಿಕೆಯಾದವು.

ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ಅವರು ಅರ್ಜಿ ಸಲ್ಲಿಸಿ, ಆನಗೋಡಿನ ಉಪ ತಹಶೀಲ್ದಾರ್, ಹೊನ್ನೂರು ಹಾಗೂ ಕುರ್ಕಿ ಗ್ರಾಮ ಲೆಕ್ಕಾಧಿಕಾರಿಗಳು ಅಕ್ರಮವಾಗಿ ನಕಲಿ ವಂಶವೃಕ್ಷ ನೀಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೆ, ಮಾಹಿತಿಯನ್ನು ಕೊಡುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿಕೊಂಡರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿಜಯ್‍ ಕುಮಾರ್ ಅವರು ಜಿಲ್ಲಾಡಳಿತ ಭವನದಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲು ಕೊಠಡಿ ಒದಗಿಸುವಂತೆ ಮನವಿ ಮಾಡಿದರು. ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಶೀಘ್ರ ಕೊಠಡಿ ಒದಗಿಸಲಾಗುವುದು ಎಂದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ, ಕೊರೊನಾ ಸಾವಿನ ಪರಿಹಾರ, ಬಸ್ ವ್ಯವಸ್ಥೆ, ಪಹಣಿ, ಜಾತಿ ಪ್ರಮಾಣ ಪತ್ರ ಒದಗಿಸುವುದು ಸೇರಿದಂತೆ, ಸಾರ್ವಜ ನಿಕರಿಂದ ಅನೇಕ ಅಹವಾಲುಗಳನ್ನು ಸ್ವೀಕರಿಸಲಾಯಿತು.

ಮನವಿಗಳನ್ನು ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,  ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸುವ ಸಲುವಾಗಿ ಜನಸ್ಪಂದನಾ ಸಭೆ ನಡೆಸಲಾಗುತ್ತಿದೆ. ಅಧಿಕಾರಿಗಳು ವಿಳಂಬಕ್ಕೆ ಅವಕಾಶ ನೀಡದೆ ಸಾರ್ವಜನಿಕ ಮನವಿಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಜನಸ್ಪಂದನ ಸಭೆಯ ಮೂಲಕ ಅನೇಕ ಸಮಸ್ಯೆಗಳು ಸ್ಥಳದಲ್ಲಿಯೇ ಇತ್ಯರ್ಥವಾಗುತ್ತವೆ. ಅಲ್ಲದೆ ಅಧಿಕಾರಿಗಳ ಕಾರ್ಯವೈಖರಿಯೂ ತಿಳಿಯುತ್ತದೆ. ಅಧಿಕಾರಿಗಳ ನಡುವೆ ಸಮನ್ವಯವೂ ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚನ್ನಪ್ಪ ಅವರನ್ನು ಜಿಲ್ಲಾಧಿಕಾರಿ ಬೀಳಗಿ ಈ ಸಂದರ್ಭದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದರು.

ಸಭೆಯಲ್ಲಿ ಡಿಯುಡಿಸಿ ಯೋಜನಾಧಿಕಾರಿ ನಜ್ಮಾ,  ಪಾಲಿಕೆ ಆಯುಕ್ತ ವಿಶ್ವನಾಥ್ ಪಿ ಮುದಜ್ಜಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!