ಕುಂದುವಾಡ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಜೀವಿಗಳ ಆಹಾರ ಸರಪಳಿ ತುಂಡರಿಸುವುದು ಎಷ್ಟು ಸರಿ…?

ಒಂದು ಕೆರೆ ಎಂದೊಡನೆ ಕಣ್ಣು ಮುಂದೆ ಬರುವ ಚಿತ್ರಣವೆಂದರೆ ಮನ ಸೂರೆಗೊಳ್ಳುವ ಆಹ್ಲಾದಕರ ವಾತಾವರಣ. ಹಕ್ಕಿಗಳ ಚಿಲಿಪಿಲಿ ನಾದ. ಕೆರೆಯ ಮೇಲಿನಿಂದ ಬರುವ ತಣ್ಣನೆಯ ಶುದ್ಧ ಗಾಳಿ. ಸುತ್ತಲೂ ಮರಗಿಡಗಳ ಸೌಂದರ್ಯ. ನೀರಿನಲ್ಲಿ ಈಜುತ್ತಿರುವ ಬಾತುಗಳು, ಅಕ್ಕಪಕ್ಕದ ಗಿಡಗಂಟೆಗಳ ಹೂಗಳಿಗೆ ಭೇಟಿ ನೀಡುತ್ತಿರುವ ಚಿಟ್ಟೆಗಳು. ನಗರದ ಜನ ಮಾನಸಿಕ ನೆಮ್ಮದಿ ಕಂಡುಕೊಳ್ಳುವ ತಾಣ. ಸಾವಿರಾರು ಜಲಜನ್ಯ ಸಸ್ಯ ಮತ್ತು ಪ್ರಾಣಿಗಳ ಆವಾಸ ತಾಣ. ಇದಲ್ಲದೆ ಅಲ್ಲಿನ ಜನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿನ ಮೂಲ.

ಕೆರೆ ಮತ್ತು ಸರೋವರಗಳು ಭೂಮಿಯ ಶೇ.3% ರಷ್ಟು ಮಾತ್ರವಿದ್ದು ತನ್ನದೇ ಆದ ವಿಶಿಷ್ಟ ಪರಿಸರವನ್ನು ಹೊಂದಿವೆ.  ಇವುಗಳು ಹಲವಾರು ಜೀವಿಗಳಿಗೆ ಆಶ್ರಯ ತಾಣವಾಗಿದ್ದು, ಜಗತ್ತಿನ ಜೀವವೈವಿಧ್ಯತೆಗೆ ತಮ್ಮದೇ ಕೊಡುಗೆ ನೀಡುತ್ತಿವೆ. ಅಮೋಘ ಜೀವ ವೈವಿಧ್ಯತೆ ತಾಣವಾಗಿರುವ ಕೆರೆ ಮತ್ತು ಸರೋವರಗಳು ನೆಲ ಮತ್ತು ಜಲದಲ್ಲಿ ವಾಸಿಸುವ ಜೀವಿಗಳ ಸಂತಾನಾಭಿವೃದ್ಧಿ ಮತ್ತು ಆಹಾರ ಒದಗಿಸುವ ತಾಣಗಳೂ ಹೌದು.

ಆದರೆ, ಈ ನೀರಿನ ಆಕರಗಳು ಮನುಷ್ಯನಿಗೆ ಅಗತ್ಯವಾದ ಶುದ್ಧ ಮತ್ತು ಕ್ಷಾರ-ರಹಿತ ನೀರನ್ನು ಒದಗಿಸುತ್ತಾ, ತನ್ನ ಮೂಲಭೂತ ರೂಪವನ್ನು ಕಳೆದುಕೊಳ್ಳುತ್ತಿವೆ.  ಹೆಚ್ಚುತ್ತಿರುವ ಮನುಷ್ಯನ ನೀರಿನ ಬೇಡಿಕೆ ಇಂತಹ ನೀರಿನ ಮೂಲ ಸೆಲೆಗಳಿಗೆ ದಕ್ಕೆ ಉಂಟುಮಾಡುತ್ತಿದೆ.  ನಗರೀಕರಣ ಮತ್ತು ಕೈಗಾರಿಕೀಕರಣಗಳಿಂದ ಇಂತಹ ಶ್ರೀಮಂತ ನೀರಿನ ಸೆಲೆಗಳು ತೊಂದರೆ ಅನುಭವಿಸುವಂತಾಗಿದೆ. ಕೆರೆ, ಸರೋವರಗಳ ಅಧ್ಯಯನವನ್ನು ಲಿಮ್ನಾಲೋಜಿ (Limnology) ಎಂದು ಕರೆಯುವರು. ಹೆಚ್ಚುತ್ತಿರುವ ಮನುಷ್ಯನ ಅಗತ್ಯಗಳಿಗೋಸ್ಕರ ಇಂತಹ ನೀರಿನ ಮೂಲವನ್ನು ಅತೀ ಜಾಗೂರಕತೆಯಿಂದ ನಿರ್ವಹಿಸುವುದು ಇಂದಿನ ಅಗತ್ಯ. ಕೆರೆಯ ಭೌತಿಕ, ರಾಸಾಯನಿಕ ಮತ್ತು ಜೈವಿಕ ಅಂಶಗಳು ಪರಸ್ಪರ ಅವಲಂಬನೆಯಿಂದ ಕೂಡಿದ್ದು ಯಾವುದೇ ಒಂದು ಅಂಶದಲ್ಲಿ ಏರುಪೇರಾದರೂ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ನಗರದ ಮಧ್ಯಭಾಗದಲ್ಲಿರುವ ಕುಂದುವಾಡ ಕೆರೆ ಸುಮಾರು 250 ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದು ಮೇಲಿನ ಎಲ್ಲಾ ಗುಣಗಳಿರುವ ಒಂದು ಪರಿಸರ. ನೈಸರ್ಗಿಕವಾಗಿದ್ದ ಕೆರೆಯಾಗಿದ್ದದ್ದು ಸ್ವಲ್ಪ ಮಾನವನ ಹಸ್ತಕ್ಷೇಪದಿಂದ ಬದಲಾವಣೆ ಹೊಂದಿದ್ದರೂ ಮೂಲಭೂತ ರಚನೆ ಬದಲಾಗಿರಲಿಲ್ಲ. ನಗರದ ಶೇ.60ಕ್ಕೂ ಹೆಚ್ಚು ಪ್ರದೇಶಕ್ಕೆ ಕುಡಿಯುವ ನೀರಿನ ಆಸರೆ. ಇದರ ಇರುವಿಕೆಯಿಂದ ದಾವಣಗೆರೆಯ ಅಂತರ್ಜಲದ ಮಟ್ಟ ಹೆಚ್ಚಾಗಿ ಶೇ.40 ಪ್ರದೇಶದಲ್ಲಿರುವ ಕೊಳವೆ ಬಾವಿಗಳು ಜನರ ದಾಹ ತಣಿಸುತ್ತಿವೆ. ಹದಿನೈದು ವರ್ಷಗಳ ಹಿಂದೆ ಕೆಲವರ ಭಗೀರಥ ಪ್ರಯತ್ನದಿಂದ ಭದ್ರಾ ಜಲಾಶಯದಿಂದ ನೀರು ಹರಿಯಲು ಪ್ರಾರಂಭವಾದಾಗಿನಿಂದ ವರ್ಷ ಪೂರ್ತಿ ನೀರಿದ್ದು, ಎಲ್ಲಾ ಜಲಚರಗಳಿಗೆ ಮತ್ತು ದಾವಣಗೆರೆಯ ನಾಗರಿಕರಿಗೆ ಪ್ರಮುಖ ನೀರಿನ ಆಸರೆಯಾಗಿದೆ.

ಇಲ್ಲಿ ಸುಮಾರು 150 ಕ್ಕೂ ಹೆಚ್ಚು ಹಕ್ಕಿ ಪ್ರಭೇದಗಳನ್ನು ಪಕ್ಷಿ ತಜ್ಞರು ಗುರುತಿಸಿದ್ದಾರೆ. ಸ್ಥಳೀಯ ಹಕ್ಕಿಗಳೆಂದರೆ ಗುಳುಮುಳುಕ, ನೀರುಕಾಗೆಗಳು, ಹಾವಕ್ಕಿ, ಬೆಳ್ಳಕ್ಕಿಗಳು, ಕೊಳದ ಬಕ, ಇರುಳು ಬಕ, ನಾಮದ ಕೋಳಿ, ಸಿಳ್ಳೆಬಾತು, ವರಟೆ, ನವಿಲು, ಹುಂಡು ಕೋಳಿ, ಜಂಬು ಕೋಳಿ, ಬೆಳವ, ಗೂಬೆಗಳು, ಗೀಜಗಗಳು, ಕಳ್ಳಿಪೀರ, ಮರಗಾಲು ಹಕ್ಕಿ, ನೆಲಗುಬ್ಬಿಗಳು, ಮುನಿಯಗಳು, ಮಿಂಚುಳ್ಳಿ ಮುಂತಾದವುಗಳು.

ವಲಸೆ ಹಕ್ಕಿಗಳೆಂದರೆ ಪಟ್ಟೆ ಹೆಬ್ಬಾತು, ಬಣ್ಣದ ಕೊಕ್ಕರೆ, ಕೆಂಬರಲುಗಳು, ಬಾಯ್ಕಳಕ ಕೊಕ್ಕರೆ, ಚಮಚದ ಕೊಕ್ಕು, ಬ್ರಾಹ್ಮೀ ಬಾತು,  ನಾಮದ ಬಾತು, ಕೆಂಪು ರೆಕ್ಕೆಯ ಬಾತು, ಬಿಳಿಹುಬ್ಬಿನ ಬಾತು, ಗುಬುಟು ಕೊಕ್ಕಿನ ಬಾತು, ಚಲುಕ ಬಾತು, ಸೋಲಾರಿ ಹಕ್ಕಿ, ವಿವಿಧ ಗೊರವಗಳು, ಉಲ್ಲಂಕಿಗಳು ಮುಂತಾದವುಗಳು.

ಈಗ ಕುಂದುವಾಡ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಹಲವಾರು ಮಾರ್ಪಾಟುಗಳನ್ನು ಕೋಟಿಗಳ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪುಗೊಂಡಿದೆ. ಲಭ್ಯ ಮಾಹಿತಿ ಪ್ರಕಾರ ಕೆರೆ ಏರಿಯನ್ನು ವಿಸ್ತರಿಸುವುದು, ಎತ್ತರಿಸುವುದು, ಪಾದಚಾರಿ ರಸ್ತೆಯನ್ನು ಅಗಲೀಕರಿಸುವುದು, ಹೂವಿನ ಹಾಸು ಮಾಡುವುದು, ಕುಳಿತುಕೊಳ್ಳುವ ಬೆಂಚುಗಳನ್ನು ಮಾಡುವುದು, ವಿದ್ಯುತ್ ಬೆಳಕನ್ನು ಮತ್ತು ಇತರೆ ಅಲಂಕಾರಿಕ ಅಭಿವೃದ್ಧಿಯನ್ನು ಮಾಡುವುದು. ಯೋಜನಾ ವೆಚ್ಚ 15 ಕೋಟಿ ರೂಪಾಯಿಗಳು ಮತ್ತು ಕಾಮಗಾರಿ ಪೂರ್ಣಗೊಳ್ಳುವ ಕಾಲಾವಧಿ 12 ತಿಂಗಳುಗಳು. ಈ ಎಲ್ಲಾ ಕಾಮಗಾರಿಗಳು ಮಾನವ-ಕೇಂದ್ರಿತ ಅಭಿವೃದ್ಧಿಯೆಂಬ ಮರಿಚಿಕೆಯೇ ವಿನಃ ಪರಿಸರ-ಸ್ನೇಹಿ ಅಭಿವೃದ್ಧಿಯಲ್ಲ. ಈಗಾಗಲೇ ಇಲ್ಲಿ ಪಾದಚಾರಿ ಮಾರ್ಗ ಸಾಕಷ್ಟು ದೊಡ್ಡದ್ದಿದ್ದು ಅದರ ಅಗಲೀಕರಣ ಅಗತ್ಯವಿಲ್ಲ. ಆಸಕ್ತರು ಮೈಸೂರಿನ ಕುಕ್ಕರಹಳ್ಳಿ ಕೆರೆ ಮತ್ತು ಕಾರಂಜಿಕೆರೆಗಳಲ್ಲಿರುವ ಪಾದಚಾರಿ ಮಾರ್ಗದ ಅಳತೆಗಿಂತ ದಾವಣಗೆರೆಯಲ್ಲಿರುವುದು ಎರಡರಷ್ಟು ಹೆಚ್ಚಿದೆ ಎಂಬುದನ್ನು ಪರಾಮರ್ಶಿಸಬಹುದು. ಅಗಲೀಕರಣ ಮಾಡುವಾಗ ಈಗಾಗಲೇ ಚೆನ್ನಾಗಿ ಬೆಳೆದಿರುವ ಮರಗಳ ಪಾಡೇನು? ಅವುಗಳಿಗೆ ತೊಂದರೆಯಾಗದ ಹಾಗೆ ಈ ಕೆಲಸ ಮಾಡಲು ಸಾಧ್ಯವಿಲ್ಲ. 

ಎಲ್ಲಿ ನೀರು ಸೋರಿಕೆಯಾಗುತ್ತಿದೆಯೋ ಅಲ್ಲಿ ಮಾತ್ರ ಸೂಕ್ತ ಕಾಮಗಾರಿಯನ್ನು ಮಾಡಿದರೆ ಸಾಕು. ಇಡೀ ಕೆರೆಯ 4.9 ಕಿ.ಮೀ ವ್ಯಾಪ್ತಿಯಲ್ಲಿ ಕಾಂಕ್ರೀಟಿಕರಣ ಅಗತ್ಯವೇ? ನೀರು ಸಣ್ಣ ಪ್ರಮಾಣದಲ್ಲಿ ನೆಲದಲ್ಲಿ ಇಂಗಿದಾಗ ಮಾತ್ರ ಅಂತರ್ಜಲ ವೃದ್ಧಿಯಾಗುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗ ನಗರದ ರಸ್ತೆಗಳೆಲ್ಲಾ ಕಾಂಕ್ರೀಟ್ ಕರಣವಾಗಿರುವುದರಿಂದ ಬಿದ್ದ ಮಳೆ ನೀರು ಇಂಗದೆ ಮೋರಿಗಳಲ್ಲಿ ಹರಿದು ಒಂದು ತಾರ್ಕಿಕ ಅಂತ್ಯ ಕಾಣದೇ ಎಲ್ಲೋ ಕೊಚ್ಚೆಯಾಗುತ್ತಿದೆ.  ಹಾಗಾಗಿ ಸಣ್ಣಪ್ರಮಾಣದ ನೀರಿನ ಇಂಗುವಿಕೆ ಸುತ್ತಮುತ್ತಲಿನ ಮರಗಿಡಗಳಿಗೆ ನೀರನ್ನು ಒದಗಿಸುವುದಲ್ಲದೆ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗುವುದು. 

ಸುತ್ತಮುತ್ತಲಿನ ಪೊದೆಗಳು/ಸಣ್ಣ ಗಿಡಗಳು ಹಲವಾರು ಹಕ್ಕಿಗಳಿಗೆ ಗೂಡು ಮಾಡಲು ಪ್ರಶಸ್ತ ಸ್ಥಳಗಳು. ಅಲ್ಲದೆ ಇವು ನೂರಾರು ಕೀಟಗಳಿಗೆ ಮತ್ತು ಚಿಟ್ಟೆಗಳಿಗೆ ಆಹಾರ ಸಸ್ಯಗಳು. ಕೀಟಗಳನ್ನು ತಿನ್ನುವ ಕಪ್ಪೆ, ಓತಿಕ್ಯಾತ ಮತ್ತು ಇತರೆ ಹಲ್ಲಿಗಳಿಗೆ ಆಹಾರದ ತಾಣ. ಇವನ್ನೆಲ್ಲಾ ಅಭಿವೃದ್ಧಿಯ ಹೆಸರಿನಲ್ಲಿ ಜೀವಿಗಳ ಆಹಾರ ಸರಪಳಿಯನ್ನು ತುಂಡರಿಸುವುದು ಎಷ್ಟು ಸರಿ? ಪರಿಸರ ಅಭಿಯಂತರರು ಇದನ್ನೆಲ್ಲಾ ಅಧ್ಯಯನ ನಡೆಸಿ, ಕಾಮಗಾರಿಗೆ ಅನುಮತಿ ನೀಡಿದ್ದಾರೆಯೇ? ಎಂಬ ಪ್ರಶ್ನೆ ಏಳುವುದು ಸಹಜ. ಇಲ್ಲಿನ ಪರಿಸರಕ್ಕೆ ಪೂರಕ ಅಭಿವೃದ್ಧಿ ಹಿತವಲ್ಲವೇ?

ಈಗಾಗಲೇ ನಗರದ ದಾನಿಗಳು ನೀಡಿರುವ ಕಲ್ಲು ಬೆಂಚುಗಳು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಹೆಚ್ಚಿನ ಕಲ್ಲು ಬೆಂಚುಗಳ ಅಗತ್ಯವಿದೆಯೇ?. ಒಂದು ಪ್ರಕೃತಿ ನಿರ್ಮಿತ ಜಾಗದಲ್ಲಿ ಆದಷ್ಟು ಗಿಡ-ಮರಗಳಿರಬೇಕೇ ವಿನಃ ಕಾಂಕ್ರೀಟ್, ಕಬ್ಬಿಣ ಮುಂತಾದ ವಸ್ತುಗಳಿರಬಾರದು. ಈಗ ಇರುವ ಮಾನವ ನಿರ್ಮಿತ ಪ್ರಾಣಿಗಳಿಗಾದ ಗತಿ ನೋಡಿದರೆ ಅವುಗಳಿಗಾದ ಪರಿಸ್ಥಿತಿ ನಮಗೂ ಆದೀತು.

ಇನ್ನು ವಿದ್ಯುತ್ ಬೆಳಕು, ಬಣ್ಣದ ಬೆಳಕಿಗೆ ಬಂದರೆ ಅಲ್ಲಿನ ಪ್ರಾಕೃತಿಕ ಸೊಬಗು ನಾಶವಾಗಿ ಬಹಳಷ್ಟು ಜೀವಿಗಳಿಗೆ ತೊಂದರೆಯಾಗುವುದು. ವಿದ್ಯುತ್ ಬೆಳಕನ್ನು ಅಲ್ಲಿಗೆ ತಂದರೆ ರಾತ್ರಿಯೂ ಜನ ಅಲ್ಲಿ ಹೋಗಬೇಕೆನ್ನುವುದು ಮತ್ತು ಅನೈತಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಂತಾಗುವುದಿಲ್ಲವೇ?

 

ಈ ಕಾಮಗಾರಿ ನಡೆಯುವ ಕಾಲಾವಧಿ 12 ತಿಂಗಳು ಎಂದು ನಿಗದಿಯಾಗಿದೆ. ಈಗಾಗಲೇ ಕೆರೆ ಒಣಗಲು ಆರಂಭವಾಗಿದೆ. ಈ ಸಮಯದಲ್ಲಿ ಇಲ್ಲಿನ ಜಲಚರಗಳೆಲ್ಲಾ ಸತ್ತು ಹೋಗುತ್ತವೆ. ದಶಕಗಳಿಂದ ಇಲ್ಲಿಯೇ ನೆಮ್ಮದಿಯಿಂದ ಜೀವಿಸಿ, ಸಂತಾನಾಭಿವೃದ್ಧಿ ಮಾಡುತ್ತಿದ್ದ ಜೀವಿಗಳ ಮಾರಣ ಹೋಮ ಸರಿಯೇ? ಹಕ್ಕಿಗಳೇನೋ ಇಲ್ಲಿ ನೀರಿಲ್ಲದಿದ್ದರೆ ಬೇರೆ ಕಡೆ ಹಾರಿ ಹೋಗುತ್ತವೆ. ಮತ್ತೆ ಸದ್ಯಕ್ಕೆ ಹಿಂದಿರುಗಿ ಬರುವ ಸೂಚನೆಯಿಲ್ಲ. ವರ್ಷ ಪೂರ್ತಿ ಕೆರೆಯಲ್ಲಿ ನೀರಿಲ್ಲದಿದ್ದರೆ ದಾವಣಗೆರೆಯ ಅಂತರ್ಜಲ ಬತ್ತುವುದಿಲ್ಲವೇ?

ಬೆಂಗಳೂರಿನ ಕೆರೆಗಳೆಲ್ಲಾ ಈ ರೀತಿಯ ಮಾನವ-ಕೇಂದ್ರಿತ ಅಭಿವೃದ್ಧಿ ಮಾಡಿ ಕೆರೆಗಳನ್ನು ಹಾಳು ಮಾಡಿರುವ ಉದಾಹರಣೆಯಿದ್ದು, ಅದರ ಪರಿಣಾಮ ಕಣ್ಣೆದುರು ಇರುವಾಗ ಮತ್ತೇ ಅಂತಹುದ್ದೇ ಅನಾಹುತದ ಅಗತ್ಯವಿದೆಯೇ?

ಸುತ್ತ ಇರುವ ಗಲೀಜು ಮೋರಿಯನ್ನು ಮುಚ್ಚಲು ವರ್ಷಗಳಾದರೂ ಸಾಧ್ಯವಾಗಿಲ್ಲ. ಇಡೀ ಕೆರೆಯ ಐದು ಎಕರೆ ಜಾಗದಲ್ಲಿ ಶೌಚಾಲಯಗಳಿಲ್ಲ. ಇಲ್ಲಿಗೆ ಹವಾ ಸೇವನೆಗೆ ಬರುವ ಜನರಿಗೆ ದುರ್ನಾತದ ಕೊಡುಗೆ. ಮಹಿಳೆಯರಿಗೆ ಶೌಚದ ಸಮಸ್ಯೆ ದಶಕಗಳಿಂದ ಪರಿಹಾರವಾಗಿಲ್ಲ. ಕೆರೆಯ ಸುತ್ತ ಕಾನೂನಾತ್ಮಕವಾಗಿ ಇರಬೇಕಾದ ಬಫರ್ ವಲಯವೆಲ್ಲಿದೆ?

ದಾವಣಗೆರೆ ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಪರಿಸರ ಅಧ್ಯಯನ ಕೇಂದ್ರವಾಗಬೇಕಾದ ಜಾಗವಿದು. ಅಸಂಖ್ಯಾತ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಅಧ್ಯಯನಕ್ಕೆ ಪ್ರಶಸ್ತ ಸ್ಥಳ. ಈಗ ಇರುವ ಜಾಗವನ್ನೇ ಬಳಸಿಕೊಂಡು ಚಿಟ್ಟೆ ಪಾರ್ಕ್ ನಿರ್ಮಾಣ ಮಾಡಬಹುದು. ಒಣಗಿ ಹೋಗಿರುವ ಮರಗಳನ್ನು ತೆಗೆದು ಹೊಸದಾಗಿ ಸ್ಥಳೀಯವಾಗಿ ಬೆಳೆಯುವ ಮರಗಳನ್ನು ನೆಡಬಹುದು. ರಾಜ್ಯದಲ್ಲಿ ಇಂತಹ ಕೆಲಸಗಳಿಗೆ ಸದಾ ಸಹಯೋಗ ನೀಡುವ ತಜ್ಞರನ್ನು ಸಂಪರ್ಕಿಸಿ ಒಂದು ಸುಸ್ಥಿರ ಯೋಜನೆ ರೂಪಿಸಬಹುದು. ಕೆರೆಯಲ್ಲಿ ಈಗಿರುವ ನಡುಗಡ್ಡೆಯನ್ನು ಉಳಿಸಿಕೊಂಡು ಅದೇ ರೀತಿಯ ನಡುಗಡ್ಡೆಗಳನ್ನು ನಿರ್ಮಿಸಿ ಮರಗಳನ್ನು ನೆಟ್ಟರೆ ಯಾವುದೇ ನಿರ್ವಹಣಾ ವೆಚ್ಚವಿಲ್ಲದೇ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಬಹುದು.  

ಜಿಲ್ಲೆಯ ರಸ್ತೆ ಅಭಿವೃದ್ಧಿಗೋಸ್ಕರ ಕಡಿದ ದೊಡ್ಡ ಮರಗಳ ಬಡ್ಡೆಗಳನ್ನು ಬೇರು ಸಮೇತ ತೆಗೆದು ಅಲ್ಲಲ್ಲಿ ತಿರುಗಿಸಿ ಇಟ್ಟರೆ ಹಕ್ಕಿಗಳ ವಿಶ್ರಾಂತಿಗೆ ಸ್ಥಳವಾಗುವುದು. ಈ ಕೆಲಸಗಳಿಗೆ ಹೆಚ್ಚೇನು ಖರ್ಚಾಗುವುದಿಲ್ಲ. ಶಾಲೆ ಮತ್ತು ಕಾಲೇಜುಗಳಲ್ಲಿ ಪರಿಸರದ ಬಗ್ಗೆ ಪಾಠ ಮಾಡಿ, ನಂತರ ಇಲ್ಲಿ ಮಕ್ಕಳಿಗೆ ಪ್ರಾಯೋಗಿಕ ಕಲಿಕೆಗೆ ಅವಕಾಶ ಕಲ್ಪಿಸಿ ಕೊಡಬಹುದು. ಇದರಿಂದ ಪರಿಸರದ ಮಹತ್ವವನ್ನು ಮಕ್ಕಳು ಬಹಳ ಚೆನ್ನಾಗಿ ಅರಿತುಕೊಳ್ಳುತ್ತಾರೆ. ಈ ಜಾಗವನ್ನು ಪ್ಲಾಸ್ಟಿಕ್-ಮುಕ್ತ ತಾಣವೆಂದು ಘೋಷಿಸಿ, ಇಲ್ಲಿರುವ ಮೂರು ಗೇಟುಗಳಲ್ಲಿ ಸೂಕ್ತ ಪಹರೆದಾರರನ್ನು ನೇಮಿಸಿ, ಬರುವ ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳನ್ನು ಕೆರೆಯ ಪ್ರದೇಶಕ್ಕೆ ತರದಂತೆ ತಡೆಯುವುದು ಅಗತ್ಯ.  ಈ ಕೆರೆಯನ್ನು ಒಂದು ಅಧ್ಯಯನ ಕೇಂದ್ರವಾಗಿ ಮಾರ್ಪಡಿಸಿ ಮತ್ತು ಪ್ರಕೃತಿಯನ್ನು ಹಾಗೇಯೇ ಉಳಿಸಿಕೊಳ್ಳುವುದರಿಂದ ದಾವಣಗೆರೆ ಮುಂದಿನ ಪೀಳಿಗೆಗೆ ಒಂದು ಮಾದರಿ ಕೆರೆಯನ್ನು ಸಮರ್ಪಿಸಬಹುದು. 

ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ ಜನರು ಪ್ರಕೃತಿಯ ಮಡಿಲಲ್ಲಿರಲು ರೆಸಾರ್ಟ್‍ಗಳಿಗೆ ಹೋಗುವ ಬದಲು ಮಗ್ಗುಲಲ್ಲೇ ಇರುವ ಕುಂದುವಾಡ ಕೆರೆಗೆ ಬರಬಹುದು.  ಇಲ್ಲದಿದ್ದರೆ ತಳಕು ಬಳುಕಿಗೆ ಮನ್ನಣೆ ಕೊಟ್ಟು, ಕೆರೆಯ ಸ್ನಿಗ್ಧ ಸೌಂದರ್ಯ ಮತ್ತು ಪರಿಸರದ ಜೈವಿಕ ಚಕ್ರ ನಶಿಸಿ ಹೋಗುವಂತೆ ಆಗುವುದರಲ್ಲಿ ಸಂಶಯವಿಲ್ಲ. ಜನಸಾಮಾನ್ಯರ ತೆರಿಗೆ ಹಣದಿಂದ ಪರಿಸರ ನಾಶ ಎಷ್ಟು ಸರಿ? ಪ್ರಜ್ಞಾವಂತ ಅಧಿಕಾರಿ ವರ್ಗ ಮತ್ತು ನಾಗರಿಕರು ಈ ಬಗ್ಗೆ ಗಮನ ಹರಿಸುವರೇ?


ಡಾ. ಎಸ್. ಶಿಶುಪಾಲ, 
ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ.
[email protected]

error: Content is protected !!