ದಾವಣಗೆರೆ,ಜ.6- ನಗರದ ಡಿ. ದೇವ ರಾಜ ಅರಸು ಬಡಾವಣೆ `ಸಿ’ ಬ್ಲಾಕ್ ನಲ್ಲಿ ರುವ ಆರ್.ಟಿ.ಓ. ಕಚೇರಿ ಮುಂಭಾಗದ ವೃತ್ತಕ್ಕೆ `ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ವೃತ್ತ’ ಎಂದು ನಾಮಕರಣ ಮಾಡುವಂತೆ ವೀರಶೈವ ಸಮಾಜದ ಮುಖಂಡ ಕೆ.ಬಿ.ನಾಗರಾಜ್ ಅವರು ಪಾಲಿಕೆಯನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಲಿಖಿತ ಮನವಿ ಪತ್ರ ಸಲ್ಲಿಸಿದ ಅವರು, ಸ್ವಾಮೀಜಿ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡುವುದರ ಜೊತೆಗೆ, ಅಲ್ಲಿ ಶ್ರೀಗಳ ಪುತ್ಥಳಿಯನ್ನು ಸ್ಥಾಪಿಸುವಂತೆಯೂ ಆಗ್ರಹಿಸಿದ್ದಾರೆ. ಸದರಿ ವೃತ್ತದಲ್ಲಿ ಈಗಾಗಲೇ ಶ್ರೀಗಳ ಹೆಸರಿನ ನಾಮಫಲಕವನ್ನು ಅಲ್ಲಿನ ನಾಗರಿಕರು ಹಾಕಿದ್ದು, ಅದನ್ನು ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಾಜ್ ಅವರು ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಹಾಗೂ ಬಸವಾದಿ ಪರಂಪರೆಯಲ್ಲಿ ಬದುಕಿ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿ, `ನಡೆದಾಡುವ ದೇವರು’ ಎಂದಾಗಿದ್ದರು. ಶ್ರೀಗಳ ಸೇವೆ ಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು ಈಗಾಗಲೇ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಈ ಹಿನ್ನೆಲೆಯಲ್ಲಿ ಸದರಿ ವೃತ್ತಕ್ಕೆ ಶ್ರೀಗಳ ಹೆಸರನ್ನು ಮುಂದುವರೆಸುವುದು ಸೂಕ್ತ ಎಂದು ನಾಗರಾಜ್ ಅವರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.