ಶಿಕ್ಷಣ, ಸಬ್ಸಿಡಿ, ಸೌಲಭ್ಯಗಳಿಗಾಗಿ ಎಸ್‌ಟಿ ಸ್ಥಾನಮಾನ

ನಗರದಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ ಮೀಸಲಾತಿಗಾಗಿ ಕುರುಬರ ಕೂಗು

ದಾವಣಗೆರೆ, ಜ. 6 – ಕುರುಬ ಸಮಾಜದ ಮಕ್ಕಳ ಶಿಕ್ಷಣ, ಆರ್ಥಿಕತೆ ಹಾಗೂ ಸಾಮಾಜಿಕ ಸಮಾನತೆಗಾಗಿ ಎಸ್.ಟಿ. ಮೀಸಲಾತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಲ್ಪಿಸಬೇಕು. ಇಲ್ಲದಿದ್ದರೆ ದೆಹಲಿಯವರೆಗೆ ಹೋರಾಟ ನಡೆಸಲಾ ಗುವುದು ಎಂದು ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸಂದೇಶ ನೀಡಲಾಗಿದೆ.

ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಎಸ್.ಟಿ. ಮೀಸಲಾತಿಗಾಗಿ ಬೆಂಗಳೂರಿಗೆ ಕೈಗೊಳ್ಳುತ್ತಿರುವ ಪಾದಯಾತ್ರೆಯ ಅಂಗವಾಗಿ ನಗರದ ಶ್ರೀ ಬೀರೇಶ್ವರ ದೇವಸ್ಥಾನದ ಮೈದಾನದಲ್ಲಿ ಆಯೋಜಿ ಸಲಾಗಿದ್ದ ಜಾಗೃತಿ ಸಮಾವೇಶದಲ್ಲಿ ಸಹಸ್ರಾರು ಜನರು ಮೀಸಲಾತಿ ಬೇಡಿಕೆಯ ಘೋಷಣೆಗೆ ಸಾಕ್ಷಿಯಾದರು.

ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಉಚಿತ ಶಿಕ್ಷಣದಿಂದ ಹಿಡಿದು, ಬ್ಯಾಂಕ್ ಸಾಲ ಸಬ್ಸಿಡಿ, ವಸತಿ ಸಬ್ಸಿಡಿ, ರಾಜಕೀಯ ಮೀಸಲಾತಿಯಿಂದ ಹಿಡಿದು ಉಚಿತ ಜಮೀನಿನವರೆಗೆ ಹತ್ತು ಹಲವು ಸೌಲಭ್ಯಗಳಿಗಾಗಿ ಕುರುಬ ಸಮುದಾಯ ಎಸ್.ಟಿ. ಮೀಸಲಾತಿಗೆ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.

ಎಸ್.ಟಿ. ಸ್ಥಾನಮಾನ ದೊರೆತರೆ ರಾಜ್ಯ ಸರ್ಕಾರ ಕುರುಬರ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ಸೌಲಭ್ಯ ಕಲ್ಪಿಸಲಿದೆ. ವೈದ್ಯಕೀಯ ಹಾಗೂ ಇಂಜಿನಿಯರಿಂಗ್‌ನಂತಹ ಸೀಟುಗಳೂ ಖರ್ಚಿಲ್ಲದೇ ಸಿಗುತ್ತವೆ. ಐದು ಎಕರೆವರೆಗಿನ ಜಮೀನು ಉಚಿತವಾಗಿ ಸಿಗುತ್ತದೆ. ವಸತಿ ಸೌಲಭ್ಯ, ಬ್ಯಾಂಕ್ ಸಾಲದಿಂದ ಹಿಡಿದು ಎಲ್ಲೆಡೆ ಸಬ್ಸಿಡಿ ಸಿಗುತ್ತದೆ ಎಂದವರು ಹೇಳಿದರು.

ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಮೀಸಲಾತಿಯಿಂದಾಗಿ ಕುರುಬರು ವಿಧಾನಸೌಧಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯ ಎಂದವರು ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಕುರುಬರು ಕೂಡಿ ಕೆಟ್ಟರು ಎಂಬ ಮಾತಿದೆ. ಆದರೆ, ಈಗ ಕುರುಬರು ಒಂದಾದ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಬಿಜೆಪಿಯಿಂದ ಕೆ.ಹೆಚ್. ಈಶ್ವರಪ್ಪ ಉಪ ಮುಖ್ಯಮಂತ್ರಿಯಾದರು ಎಂದು ಹೇಳಿದರು.

ಕುರುಬರು ಕೂಡಿಕೊಂಡ ಕಾರಣ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದೇವೆ. ಆದರೆ, ಉಳಿದ ವಲಯಗಳಲ್ಲಿ ಹಿಂದುಳಿದಿದ್ದೇವೆ. ರಾಜ್ಯದಲ್ಲಿ ಕುರುಬ ಸಮುದಾಯದ ವೈದ್ಯಕೀಯ ಕಾಲೇಜು ಇಲ್ಲ. ಕೇಂದ್ರದಲ್ಲಿ ಯಾರೂ ಸಚಿವರಾಗಿಲ್ಲ ಎಂದವರು ವಿಷಾದಿಸಿದರು.

ದಾವಣಗೆರೆಯಲ್ಲಿ ನಡೆದ ಬೃಹತ್ ಸಭೆಯಿಂದಾಗಿ ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಪಡೆದರು. ಇಲ್ಲಿನ ಸಮಾವೇಶದಿಂದಾಗಿ ಎಸ್.ಟಿ. ಮೀಸಲಾತಿ ಪಡೆಯಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಮೀಸಲಾತಿ ಹೋರಾಟ ಯಾವುದೇ ವ್ಯಕ್ತಿಯ ಪರ – ವಿರುದ್ಧ ಇಲ್ಲವೇ ಪಕ್ಷದ ಪರ – ವಿರುದ್ಧ ಅಲ್ಲ. ಕುರುಬ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮೇಲಿನ ದೌರ್ಜನ್ಯ ನಿವಾರಿಸಲು ಈ ಹೋರಾಟ ನಡೆಯುತ್ತಿದೆ ಎಂದರು.

ಕುರುಬ ಮಹಿಳೆಯ ಮೇಲೆ ದೌರ್ಜನ್ಯ ನಡೆದಾಗ ಆ ಬಗ್ಗೆ ದೂರು ಕೊಡಲು ಹೋದರೂ ಮತ್ತೊಂದು ದೌರ್ಜನ್ಯದ ಪ್ರಕರಣ ದಾಖಲಾಗಬಹುದು ಎಂಬ ಹೆದರಿಕೆಯ ವಾತಾವರಣ ಇದೆ. ಕುರಿಗಾಹಿಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹರಪನಹಳ್ಳಿಯ ಗ್ರಾಮವೊಂದರಲ್ಲಿ ಕುರಿಗಾರರ ಲೂಟಿ ನಡೆಯುತ್ತಿತ್ತು. ಮಾತನಾಡಲು ಹೋದರೆ ಹೆಂಡತಿ – ಮಕ್ಕಳ ಮೇಲೂ ಪ್ರಕರಣಗಳು ದಾಖಲಾಗುತ್ತಿದ್ದವು. ಕಳ್ಳರಿಗೆ ಪ್ರತಿ ವರ್ಷ ಕುರಿ ಕಪ್ಪ ಕೊಡುವ ಪರಿಸ್ಥಿತಿ ಇತ್ತು ಎಂದವರು ವಿಷಾದಿಸಿದರು.

ಮೀಸಲಾತಿ ಹೋರಾಟದಲ್ಲಿ ಹೆಚ್.ಎಂ. ರೇವಣ್ಣ ಹಾಗೂ ಈಶ್ವರಪ್ಪ ಹೀರೋ ಅಲ್ಲ. ಕುರುಬರೇ ಹೀರೋ ಆಗಬೇಕು. ದೆಹಲಿಗೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಮೀಸಲಾತಿಗೆ ಪೂರಕ ಸ್ಪಂದನೆ ಸಿಕ್ಕಿದೆ. ಹೋರಾಟದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಣ್ತೆರೆಸಬೇಕಿದೆ ಎಂದು ತಿಳಿಸಿದರು.

ಎಸ್.ಟಿ. ಹೋರಾಟ ಸಮಿತಿ ಅಧ್ಯಕ್ಷ ಕೆ. ವಿರುಪಾಕ್ಷಪ್ಪ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮೈಲಾರದ ಕಾರಣಿಕದ ರಾಮಪ್ಪ, ಶಾಸಕ ಎಸ್. ರಾಮಪ್ಪ, ಪರಿಷತ್ ಸದಸ್ಯ ಆರ್. ಶಂಕರ್, ಹೋರಾಟ ಸಮಿತಿ ಉಪಾಧ್ಯಕ್ಷ ರುದ್ರಣ್ಣ ಗುಳಗುಳಿ, ಜಿಲ್ಲಾ ಪಂಚಾಯ್ತಿ ಸದಸ್ಯ ಜೆ.ಸಿ. ಲಿಂಗಣ್ಣ, ಜಯಶೀಲ, ಸಮಾಜದ ಮುಖಂಡರಾದ ಬಿ.ಎಂ. ಸತೀಶ್, ಶಿವಪ್ಪ ಮಾಸ್ತರ್, ರಾಜು ಮೌರ್ಯ, ಎಫ್.ಎನ್. ಗಾಜೀಗೌಡ್ರು, ರಾಜೇಂದ್ರ ಹಾವೇರಣ್ಣ, ದೇವೇಂದ್ರಪ್ಪ, ಕೊಟ್ರಬಸಪ್ಪ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

error: Content is protected !!