ಜಗಳೂರು, ಮಾ.15- ಪಟ್ಟಣ ಪಂಚಾಯಿತಿಯ 2022-23ನೇ ಸಾಲಿನ 18,11,760 ರೂ. ಉಳಿತಾಯ ಬಜೆಟ್ಟನ್ನು ಅಧ್ಯಕ್ಷ ಎಸ್.ಸಿದ್ದಪ್ಪ ಮಂಡಿಸಿದರು.
ಪ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಅವರು, ಆಸ್ತಿ ತೆರಿಗೆಯಿಂದ ಬರುವ ಒಟ್ಟು ಆದಾಯದ ಸೆಸ್ ಹೊರತು ಪಡಿಸಿ ಬಾಕಿ ಮೊತ್ತ 47.36 ಲಕ್ಷ ಹಾಗೂ ಇತರೆ ಆದಾಯ 11 ಲಕ್ಷ ರೂ. ಸೇರಿದಂತೆ ಒಟ್ಟು 58.36 ಲಕ್ಷ ರೂ.ಗಳಲ್ಲಿ ಶೇ.24.10 ಯೋಜನೆಯ ಪ.ಜಾತಿ ಮತ್ತು ಪ.ಪಂಗಡದವರ ಕಲ್ಯಾಣ ನಿಧಿ, 14.6 ಲಕ್ಷದಲ್ಲಿ ಶೇ.7.25 ಯೋಜನೆಯಡಿ ಅಲ್ಪಸಂಖ್ಯಾತರ ನಿಧಿ, 4.23 ಲಕ್ಷ, ಶೇ.5 ವಿಕಲಚೇತನ ಅಭಿವೃದ್ದಿಗೆ 2.91 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಬಜೆಟ್ ನಲ್ಲಿ ಪಟ್ಟಣದ ರಸ್ತೆ, ಚರಂಡಿ ಅಭಿವೃದ್ಧಿ ವಿದ್ಯುತ್ ದೀಪ ಸೇರಿದಂತೆ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ ಎಂದರು.
ಸ್ವಚ್ಚತಗೆ ಹೆಚ್ಚಿನ ಆದ್ಯತೆ, ತರಕಾರಿ ಮಾರುಕಟ್ಟೆ ಅಭಿವೃದ್ಧಿ, ಎಲ್ಇಡಿ ದೀಪ ಅಳವಡಿಕೆ, ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಘನತ್ಯಾಜ್ಯ ಘಟಕದ ಆವರಣದಲ್ಲಿ ಎರೆಹುಳು ಗೊಬ್ಬರ ಘಟಕ ಸ್ಥಾಪನೆಗೆ ಕ್ರಮ ಹಾಗೂ ಪಟ್ಟಣದ ಅಭಿವೃದ್ಧಿಗಾಗಿ ವಿಶೇಷ ಅನುದಾನ ತರಲು ಶಾಸಕರೊಂದಿಗೆ ಮುಖ್ಯ ಮಂತ್ರಿಗಳ ಬಳಿ ಸರ್ವ ಸದಸ್ಯರ ನಿಯೋಗ ತೆರಳುವುದು ಸೇರಿದಂತೆ ಹಲವಾರು ಪ್ರಮುಖ ವಿಷಯ ಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ.
ಪ.ಪಂ ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರಾದ ಆರ್.ತಿಪ್ಪೇಸ್ವಾಮಿ, ಲಲಿತ ಶಿವಣ್ಣ, ದೇವರಾಜ್, ಪಾಪಲಿಂಗಪ್ಪ, ಶಕೀಲ್ ಅಹಮ್ಮದ್, ರವಿಕುಮಾರ್, ಲುಕ್ಮಾನ್, ರಮೇಶ್ ರೆಡ್ಡಿ, ನವೀನ್ ಕುಮಾರ್, ನಿರ್ಮಲ ಕುಮಾರಿ, ಸರೋಜಮ್ಮ, ಲೋಕಮ್ಮ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ನಾಮನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು.