ದಾವಣಗೆರೆ, ಮಾ. 15 – ಶತಮಾನದ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆ, ಈಗ ಸಾಧನೆಯ ಶಿಖರ ಏರುತ್ತಿದ್ದಾಳೆ. ಕುಟುಂಬದವರ ಬೆಂಬಲ ಇದ್ದಾಗ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ ಎಂದು ಸಿದ್ದಗಂಗಾ ಶಾಲೆಯ ಮುಖ್ಯೋಪಾಧ್ಯಾಯಿನಿ ಜಸ್ಟಿನ್ ಡಿಸೌಜ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಎಂ.ಸಿ.ಸಿ. ಬಿ ಬ್ಲಾಕ್‌ನ ಸ್ನೇಹ ಮಹಿಳಾ ಬಳಗದ ವತಿಯಿಂದ ಹಿರೇಮಠದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ನೇಹ ಮಹಿಳಾ ಬಳಗದ 9ನೇ ವರ್ಷಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಂಚೆ ಮಹಿಳೆಯನ್ನು ಭೋಗದ ವಸ್ತುವಾಗಿ, 4 ಗೋಡೆಗಳ ಮಧ್ಯೆ ಸೀಮಿತವಾಗಿ ನೋಡಲಾಗುತ್ತಿತ್ತು. ರಷ್ಯಾ ಕ್ರಾಂತಿಯ ನಂತರ ಮಹಿಳೆ ಸ್ಥಾನಮಾನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸಿದ್ದಾಳೆ. ನಂತರ ಮಹಿಳೆಗೆ ಸ್ಥಾನಮಾನಗಳು ಸಿಗಲು ಆರಂಭವಾದವು ಎಂದವರು ಹೇಳಿದರು.
ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಆದರೂ, ಸಾಧನೆ ಮಾಡಲು ಬಯಸಿದಾಗ ಕೆಲವೊಮ್ಮೆ ಸ್ಫೂರ್ತಿ ಸಿಗುವುದಿಲ್ಲ. ಕುಟುಂಬದವರ ಬೆಂಬಲ ಸಿಕ್ಕಾಗ ಹೆಚ್ಚಿನ ಸಾಧನೆ ಸಾಧ್ಯ. ಮಹಿಳೆಯರು ಆತ್ಮಬಲ ಹಾಗೂ ಸ್ಥೈರ್ಯ ಹೊಂದಿದಾಗ ಏನು ಬೇಕಾದರೂ ಸಾಧಿಸಬಹುದು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಪ್ರತಿಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಮಹಿಳೆ ನಾಲ್ಕು ಗೋಡೆಗಳಿಗೆ ಸೀಮಿತವಾಗದೇ ಎಲ್ಲ ವಲಯಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ. ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿ ಮಹಿಳೆ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದರು.
ಸ್ನೇಹ ಮಹಿಳಾ ಬಳಗದ ಗೌರವಾಧ್ಯಕ್ಷರಾದ ಶ್ರೀಮತಿ ಮಂಜುಳ ಬಸವಲಿಂಗಪ್ಪ ಮಾತನಾಡಿ, ಮಹಿಳೆ ಸ್ವಾವಲಂಬಿಯಾಗಲು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಮಾನತೆ ಸಾಧಿಸುವುದು ಮುಖ್ಯ. ಆದರೆ, ಕುಟುಂಬವನ್ನು ನಿರ್ವಹಿಸುತ್ತಲೇ ಸಾಧನೆ ಮಾಡುವ ಹೊಣೆ ಮಹಿಳೆಯ ಮೇಲಿರುವುದರಿಂದ ಸಮಾಜಕ್ಕೆ ಕೊಡುಗೆ ನೀಡುವುದು ಸುಲಭವಲ್ಲ. ಈ ಸವಾಲುಗಳನ್ನು ಮಹಿಳೆ ಎದುರಿಸಿ ನಿಲ್ಲಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಸ್ಟಿನ್ ಡಿಸೌಜ ಹಾಗೂ ಕೃಷಿಕ ಮಹಿಳೆ ಮತ್ತು ಉದ್ಯಮಿ ಸರೋಜ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಬಳಗದ ಆಜೀವ ಗೌರವಾಧ್ಯಕ್ಷೆ ಮಂಜುಳ ನಿಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಮೇಲೆ ಬಳಗದ ಅಧ್ಯಕ್ಷೆ ಶೋಭ ರವಿ, ಕಾರ್ಯದರ್ಶಿ ಭಾನುಮತಿ ಶಶಿಧರ್, ಖಜಾಂಚಿ ಸುವರ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.