ಅರಿವಿನ ಕೊರತೆಯಾದಂತೆಲ್ಲಾ ಬದುಕು ದುರ್ಬಲ

`ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮತ್ತು ಸಂವಿಧಾನ’ ಕುರಿತ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಹೆಚ್. ಅರುಣ್‌ಕುಮಾರ್ ವಿಶ್ಲೇಷಣೆ

ದಾವಣಗೆರೆ, ಮಾ. 16- ಸಂವಿಧಾನ ಅರ್ಥಮಾಡಿಕೊಳ್ಳದಿ ರುವುದೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ. ಅರಿವಿನ ಕೊರತೆಯಾದಂತೆಲ್ಲಾ ಬದುಕು ದುರ್ಬಲಗೊಳ್ಳುತ್ತದೆ. ಹಲವಾರು ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಸಲ್ಲದ ಅನ್ಯಾಯಕ್ಕೆ ಒಳಗಾಗುತ್ತೇವೆ ಎಂದು ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಹೆಚ್. ಅರುಣ್‌ಕುಮಾರ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಸ್ಲಂ ಜನಾಂದೋಲನ -ಕರ್ನಾಟಕ ಹಾಗೂ ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ, ಸಂವಿಧಾನ ಸ್ನೇಹ ಬಳಗ, ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ `ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮತ್ತು ಸಂವಿಧಾನ’ ಕುರಿತು  ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ `ಸಂವಿಧಾನ ಪೀಠಿಕೆ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂವಿಧಾನವೆಂಬ ದೊಡ್ಡ ಆಲದ ಮರದ ಕೆಳಗೆ ನಾವೆಲ್ಲರೂ ಬದುಕುತ್ತಿದ್ದರೂ ಸಹ ಈ ವಿಶಾಲ ಮರದ ರೆಂಬೆ, ಕೊಂಬೆಗಳ ಪರಿಚಯ ಸ್ಪಷ್ಟವಾಗಿ ಇಲ್ಲ. ಅದರ ಫಲ-ಪುಷ್ಪಗಳನ್ನು ತಮ್ಮದಾಗಿಸಿಕೊಳ್ಳುವ ಅರಿವಿಲ್ಲ. ಬಹುತೇಕ ವಿದ್ಯಾವಂತರು, ಅವಿದ್ಯಾವಂತರು ಇಂತಹ ಅಜ್ಞಾನದಿಂದ ಬಳಲುತ್ತಿದ್ದಾರೆ ಎಂದರು.

ಸಂವಿಧಾನ ಕೇವಲ ಕಾನೂನಿನ ಕಡತವಲ್ಲ. ಅದು ಕಾರ್ಯಕ್ರಮಗಳ ಅನುಷ್ಠಾನ. ಇಡೀ ಭಾರತ ದೇಶದ ಸರ್ವ ಜನಾಂಗದ, ಸರ್ವ ಧರ್ಮೀಯರ ದೊಡ್ಡ ಗ್ರಂಥವಾಗಿದೆ ಎಂದು ಹೇಳಿದರು.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಬಹುತ್ವದ ದೇಶವಾಗಿದ್ದು, ಇದು ಅಮೂಲ್ಯ ಸಂವಿಧಾನವನ್ನು ಪಡೆದಿದೆ. ಸಂವಿಧಾನ ಕಗ್ಗಂಟಾಗಬಾರದು. ನಿತ್ಯ ಬದುಕಿನ ಅಂಗವಾಗಬೇಕು. ಈ ನಿಟ್ಟಿನಲ್ಲಿ ಭಾರತೀಯರೆಲ್ಲರೂ ಸಂವಿಧಾನದ ಆಶಯಗಳನ್ನು ಅರಿತು ಬದುಕು ಸಾಗಿಸುವ ಅಗತ್ಯವಿದೆ ಎಂದರು.

ವಕೀಲರಾದ ಅನಿಸ್‌ಪಾಷ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾರತ ಸಂವಿಧಾನವು ದಿನ ನಿತ್ಯದ ಚರ್ಚೆಯ, ಬಳಕೆಯ ವಿಷಯ ವಾಗಿದೆ. ಪ್ರಸ್ತುತ ಸಂವಿಧಾನ ಆಪತ್ತಿನಲ್ಲಿ ಸಿಲುಕಿದೆ. ಆಳುವ ರಾಜಕಾರಣಿಗಳು ಸಂವಿಧಾನದ ಆಶಯಗಳನ್ನು ತಿಳಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಪ್ರಜೆಗಳು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನಾಂ ದೋಲನ-ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಅವರು, ಜನ ಸಾಮಾನ್ಯರಿಗೆ ಸಂವಿಧಾನದ ಮೂಲ ಆಶಯಗಳನ್ನು ತಿಳಿಸಿಕೊಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಜರೂರು ಎದುರಾಗಿದೆ ಎಂದು ಹೇಳಿದರು.

ಸಂವಿಧಾನವನ್ನು ಕೇವಲ ಕಾನೂನು ಓದಿದವರು ಅಷ್ಟೇ ಅಲ್ಲದೆ ದೇಶದ ಪ್ರತಿಯೊಬ್ಬರೂ ಸಹ ಅರ್ಥಮಾಡಿಕೊಳ್ಳಬೇಕಾಗಿದೆ. ಸಂವಿಧಾನ ಕೇವಲ ಕಾನೂನಿನ ದಾಖಲೆಯಲ್ಲ ಎಂದರು.

ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲ- ಕರ್ನಾಟಕದ ಜಿಲ್ಲಾ ಸಂಚಾಲಕರಾದ ರೇಣುಕ ಯಲ್ಲಮ್ಮ, ವಿವಿಧ ಸಂಘಟನೆಗಳ ಮುಖಂಡ ರಾದ ಸಿ. ಬಸವರಾಜ್, ಮೊಹಮ್ಮದ್ ಹಯಾತ್, ಆದಿಲ್, ಚಮನ್‌ಸಾಬ್, ರಹಮತ್‌ವುಲ್ಲಾ, ಖಾಸಿಂಸಾಬ್, ಶಬ್ಬೀರ್ ಸಾಬ್, ಮಂಜುಳ ಮತ್ತಿತರರಿದ್ದರು.

error: Content is protected !!