ಹರಿಹರ: ಅಪರಿಚಿತನಿಗೆ ಹಣ ನಗದೀಕರಿಸಿದ ಎಸ್.ಬಿ.ಐ. ವಿರುದ್ಧ ಪ್ರತಿಭಟನೆ

ಹರಿಹರ, ಜ.5 – ನಗರದ  ಎಸ್‍ಬಿಐ ಬ್ಯಾಂಕ್‍ನವರು, ಎಸ್.ಎಂ. ರಾಜು ಅವರ ಉಳಿತಾಯ ಖಾತೆಯಿಂದ ಒಂದೂ ವರೆ ಲಕ್ಷ ರೂ.ಗಳನ್ನು ಅಪರಿಚಿತ ವ್ಯಕ್ತಿಗೆ ಹಣ ನಗದಿಕರಿಸಿದ್ದಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಆರೋಪ ಮಾಡಿದ್ದಾರೆ.

ರಾಜು ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹರಿಹರ ಶಾಖೆಯ ಗ್ರಾಹಕರಾಗಿದ್ದು, ದಿನಾಂಕ 9/10/2020 ರಂದು ಅವರ ಖಾತೆಯ ಚೆಕ್ ನಂಬರ್ 740076 ರಲ್ಲಿ ಒಂದೂವರೆ ಲಕ್ಷ ರೂ.ಗಳನ್ನು ಯಾರೋ ಅಪರಿಚಿತ ವ್ಯಕ್ತಿ ರಾಜು ಅವರ ಸಹಿಯನ್ನೇ ಫೋರ್ಜರಿ ಮಾಡಿ ಹಣ ಡ್ರಾ ಮಾಡಿದ್ದಾರೆ.

ಆದರೆ ಬೇರೆ ಯಾವುದೇ ವ್ಯಕ್ತಿ ಬೇರೆಯವರ ಖಾತೆಯಿಂದ ಹಣ ಡ್ರಾ ಮಾಡುವಾಗ ಈ ಮೊತ್ತಕ್ಕೆ ತನ್ನ ಗುರುತಿನ ದಾಖಲೆ ತೋರಿಸಬೇಕು ಹಾಗೂ ಚೆಕ್‍ನ ಹಿಂಬದಿಯಲ್ಲಿ ಸಹಿ ಮತ್ತು ಮೊಬೈಲ್ ಸಂಖ್ಯೆ ನಮೂದು ಮಾಡಬೇಕು. ಈ ಯಾವುದೇ ಪ್ರಕ್ರಿಯೆ ಮಾಡದೆ ಅಪರಿಚಿತ ವ್ಯಕ್ತಿಗೆ ಬ್ಯಾಂಕಿನವರ ಬೇಜವಾಬ್ದಾರಿಯಿಂದ ಹಣ ಡ್ರಾ ಮಾಡಲಾಗಿದೆ  ಎಂದು ಬ್ಯಾಂಕಿನ ವಿರುದ್ಧ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ ಹರಿಹಾಯ್ದರು.

ಇದರ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರ ಗಮನಕ್ಕೆ ತಂದಾಗ ಒಂದು ವಾರದೊಳಗೆ ಬಗೆಹರಿಸಿ ಕೊಡುತ್ತೇವೆ  ಎಂದು ಹೇಳಿದ್ದರು. ಆದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಬ್ಯಾಂಕಿನ ವಿರುದ್ಧ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಗೋವಿಂದ ಅವರು ತಹಶೀಲ್ದಾರ್ ಕೆ. ಬಿ.  ರಾಮಚಂದ್ರಪ್ಪ ಅವರಿಗೆ ಬ್ಯಾಂಕಿನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮತ್ತು ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರಾದ ಸುನಿಲ್ ಕುಮಾರ್, ಚಂದ್ರಪ್ಪ ಕುಣೆಬೆಳಕೆರೆ, ರಾಘು ನಾಗೇನಹಳ್ಳಿ, ರಾಜು ಎಸ್.ಎಂ. ಹೇಮಲತಾ, ಶಿವಕುಮಾರ್ ಮರಡಿ, ಮಾರುತಿ, ಜಯಂತಿ, ಅನನ್ಯರಾಜ್, ಬಶೆಟ್ಟಪ್ಪ ದೀಟೂರು ಇತರರು ಹಾಜರಿದ್ದರು.

error: Content is protected !!