ಅಸಮಾನತೆ ನಿಂತ ನೀರು, ಸಮಾನತೆ ಹರಿಯುವ ನೀರು

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ಲೇಷಣೆ

ದಾವಣಗೆರೆ, ಜ. 5 – ಅಸಮಾನತೆ ನಿಂತ ನೀರು. ಆದರೆ, ಸಮಾನತೆ ಹರಿಯುವ ನೀರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ಲೇಷಿಸಿದರು.

ನಗರದ ಶ್ರೀ ಶಿವಯೋಗ ಮಂದಿರ ದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಮೊನ್ನೆ ಏರ್ಪಡಿಸಿದ್ದ ಶರಣ ಸಂಗಮ ಕಾರ್ಯಕ್ರಮದ ಸಮ್ಮುಖ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ನಿಂತ ನೀರು ಕೊಳಚೆಯಾಗಿರುತ್ತದೆ, ಹರಿಯುವ ನೀರು ಶುಭ್ರವಾಗಿರುತ್ತದೆ ಎಂದು ತಿಳಿಸಿದರು.

ಶರಣ ಸಂಗಮ ಒಂದು ಅಧ್ಯಾತ್ಮಿಕ ತರಬೇತಿ ಕೇಂದ್ರವಿದ್ದಂತೆ ಎಂದು ಹೋಲಿಕೆ ನೀಡಿದರು. ಕೊಳೆಯಾದ ಬಟ್ಟೆಗಳನ್ನು ಸೋಪಿನಿಂದ ಶುಭ್ರಗೊಳಿಸಬಹುದು. ಆದರೆ, ಮನಸ್ಸಿನ ಕೊಳೆಯನ್ನು ಇಂತಹ ಶರಣ ಸಂಗಮಗಳಿಂದ ತೊಳೆಯಬಹುದು ಎಂದು ಹೇಳಿದರು. 

 ಮಡಿವಂತಿಕೆ ಮತ್ತು ಅದರಿಂದಾಗುವ ಅಸಮಾನತೆ ಕುರಿತು ದಾವಣಗೆರೆ ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಹೆಚ್. ವಿಶ್ವನಾಥ್ ಅವರು ಮಾತನಾಡಿದರು. 

ಮಡಿವಂತಿಕೆ, ಮೌಢ್ಯದ ವಿರುದ್ಧ ಬಸವಾದಿ ಶರಣರು ಸಮರ ಸಾರಿದರು. ಶರಣರ ವಚನಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಮೌಢ್ಯ, ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಪ್ರತಿಪಾದಿಸಿದರು . 

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾಂತಕುಮಾರಿ ಅವರು, ಅಸಮಾನತೆ ಇರುವ ತನಕ ನವ ಸಮಾಜ ಕಟ್ಟಲು ಸಾಧ್ಯವಿಲ್ಲ. 

ಬಸವಣ್ಣ, ಅಂಬೇಡ್ಕರ್ ಮುಂತಾದವರು ಅಸಮಾನತೆ ವಿರುದ್ಧ ಹೋರಾಡಿದಂತೆ ನಾವೂ ಹೋರಾಟ ನಡೆಸಬೇಕೆಂದು ಆಶಿಸಿದರು.

ಬಸವ ಕಲಾ ಲೋಕದವರು ಪ್ರಾರ್ಥಿಸಿದರು. ಎಂ. ಕೆ. ಬಕ್ಕಪ್ಪ  ಸ್ವಾಗತಿಸಿದರು. ಕಾರ್ಯಕ್ರಮವನ್ನು ಎನ್. ಜೆ. ಶಿವಕುಮಾರ್ ನಿರೂಪಿಸಿದರು.  ಕುಂಟೋಜಿ ವಂದಿಸಿದರು.

error: Content is protected !!