ದುಗ್ಗಮ್ಮನ ಜಾತ್ರೆಗೆ ಬಂದ ಜನ ಸಾಗರ

ದುಗ್ಗಮ್ಮನ ಜಾತ್ರೆಗೆ ಬಂದ ಜನ ಸಾಗರ - Janathavani ದುಗ್ಗಮ್ಮನ ಜಾತ್ರೆಗೆ ಬಂದ ಜನ ಸಾಗರ - Janathavani ದುಗ್ಗಮ್ಮನ ಜಾತ್ರೆಗೆ ಬಂದ ಜನ ಸಾಗರ - Janathavani

ದಾವಣಗೆರೆ,ಮಾ.15- ಎಡೆಜಾತ್ರೆಯ ದಿನವಾದ ಇಂದು ಮಂಗಳವಾರ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಕ್ತಿಯಿಂದ ಆಗಮಿಸಿ ಅಮ್ಮನ ದರ್ಶನ ಪಡೆದು ಧನ್ಯತಾಭಾವ ಹೊಂದಿದರು. 

ನಿನ್ನೆ ಮಧ್ಯರಾತ್ರಿಯಿಂದಲೇ ಮೈಲುದ್ದದ ಸರತಿ ಸಾಲಿನಲ್ಲಿ ನಿಂತು  ಅಮ್ಮನಿಗೆ  ಹೂವು, ಹಣ್ಣು- ಕಾಯಿ, ಉಡಕ್ಕಿ, ಕಣ, ಅಕ್ಕಿ-ಬೆಲ್ಲ, ಬಳೆ ಮತ್ತು ಹರಕೆಯ ಕಾಣಿಕೆಯನ್ನು ಒಪ್ಪಿಸಿದರು.  ಹೋಳಿಗೆ, ಅನ್ನ ಮೊಸರಿನ ಎಡೆಯನ್ನು ತಂದು ನೈವೇದ್ಯ ಮಾಡಿದರು.

ಕಳಸ ಮತ್ತು ವಾದ್ಯಗಳೊಂದಿಗೆ ಅಮ್ಮನಿಗೆ ಜೈಕಾರ ಹಾಕುತ್ತಾ ಎಲ್ಲೆಡೆಯಿಂದ  ದಂಡು-ದಂಡಾಗಿ ಆಗಮಿಸಿದ ಭಕ್ತರು  ಗುಡಿಯ ಸುತ್ತ ಬೇವಿನ ಉಡುಗೆ, ಉರುಳು ಸೇವೆ ಮತ್ತು ದೀಡು ನಮಸ್ಕಾರ  ಮೂಲಕ ಪ್ರದಕ್ಷಿಣೆ  ಹಾಕಿ ಕಟ್ಟಿಕೊಂಡ ಹರಕೆಗಳನ್ನು ತೀರಿಸಿದರು. ದೇವಸ್ಥಾನದ ಸುತ್ತ ಮರಳನ್ನು ಹಾಕಿ ಉರುಳು ಸೇವೆ ಮತ್ತು  ದೀಡು ನಮಸ್ಕಾರ ಹಾಕುವವರಿಗೆ ಅನುಕೂಲ ಕಲ್ಪಿಸಲಾಗಿತ್ತು.  

ಅಮ್ಮನ ಗರ್ಭಗುಡಿ ಎದುರಿಗಿರುವ ಪಾದಗಟ್ಟೆ  ಆವರಣದಲ್ಲಿ   ಹೆಚ್ಚಿನ ಸಂಖ್ಯೆಯಲ್ಲಿ ಶವರ್‌ಗಳನ್ನು ಹಾಕಿ, ಸ್ನಾನಕ್ಕೆ ವ್ಯವಸ್ಥೆ ಮಾಡ ಲಾಗಿತ್ತು.   ಅಲ್ಲಿ ಸಂಗ್ರಹವಾಗುವ ಬೇವಿನ ಸೊಪ್ಪು ಮತ್ತು ಬಟ್ಟೆಗಳನ್ನು   ತೆಗೆದು ಸ್ವಚ್ಚ ಮಾಡುವಲ್ಲಿ ಪಾಲಿಕೆಯ ಪಡೆಯೊಂದು ನಿರತವಾಗಿತ್ತು.   ದೇವಸ್ಥಾನದ ಸುತ್ತ-ಮುತ್ತ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. 

ಯಾವುದೇ ತರಹದ ನೂಕಾಟ, ತಳ್ಳಾಟ ಗಳಿಲ್ಲದೇ ದೇವತಾ ಸೇವೆಗೆ ಅವಕಾಶವಾಗಿರು ವುದು ನೆಮ್ಮದಿ ತರುವ ವಿಚಾರವಾಗಿದೆ ಎಂದು ಭಕ್ತರಲ್ಲೊಬ್ಬರಾದ ಗಂಗಾಧರಪ್ಪ  ಹೇಳಿ, ರಕ್ಷಣಾ ವಿಚಾರ ದಲ್ಲಿ  ತೃಪ್ತಿ ವ್ಯಕ್ತಪಡಿಸಿದರು.

ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂರು ವಿಧದ ದರ್ಶನಕ್ಕೆ ಅವಕಾಶವಿತ್ತು. ಧರ್ಮ ದರ್ಶನ, 50 ರೂ.ಗಳ ಟಿಕೆಟ್ ದರ್ಶನ ಮತ್ತು  ಬಹಳ ಮುಖ್ಯವಾದ ವ್ಯಕ್ತಿಗಳಿಗೆ ನೀಡಲಾದ ಗೌರವ  ಪಾಸ್ ದರ್ಶನ. ಈ ಮೂರೂ ಕಡೆಯೂ ದೊಡ್ಡ ಸಂಖ್ಯೆಯಲ್ಲಿಯೇ ಜನ ಸೇರಿತ್ತು.  ಭಯ-ಭಕ್ತಿಯಿಂದ ಶಾಂತಿ ಯುತವಾಗಿ ಗಂಟೆಗಟ್ಟಲೇ ನಿಂತು ಅಮ್ಮನ ದರ್ಶನ ಪಡೆದರು. 

ಪರಸ್ಥಳಗಳಿಂದ  ಬಂದು ನೆಂಟರಿಷ್ಟರ ಮನೆಯಲ್ಲಿ ತಂಗಿರುವ ಭಕ್ತಾದಿಗಳೂ  ಸಹ ಅಧಿಕ ಸಂಖ್ಯೆಯಲ್ಲಿ ಆಗಮಿಸಿ  ದರ್ಶನ ಪಡೆದರು. 

ಅಮ್ಮನಿಗೆ ಜೈಕಾರ ಹಾಕುತ್ತ,  ಉಧೋ ಉಧೋ ಎನ್ನುತ್ತ , ಕಾಪಾಡು ತಾಯಿ ದುಗ್ಗಮ್ಮ  ಎಂದು ಮೊರೆಹೋಗುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದ್ದವು. ಮಧ್ಯರಾತ್ರಿಯವರೆಗೂ ಅಮ್ಮನ  ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸಂಜೆ ಮಹಿಷಾಸುರ ಮರ್ಧಿನಿ ವೇಷಭೂಷಣದ ಉತ್ಸವ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ  ತಡರಾತ್ರಿವರೆಗೂ ನಡೆಯಿತು.  ನಾಳೆ ಬುಧವಾರ ಬೆಳಿಗ್ಗೆ `ಮಹಾಪೂಜೆ’ ನಂತರ ಚರುಗ ಚೆಲ್ಲುವ ಕಾರ್ಯಕ್ರಮವಿದ್ದು,  ನಂತರ  ಹರಕೆ ಹೊತ್ತ ಭಕ್ತರಿಂದ  ಬೇವಿನ ಉಡಿಗೆ, ದೀಡು ನಮಸ್ಕಾರ ಮತ್ತು ಉರುಳು ಸೇವೆಗಳು ಜರುಗುವುದರ ಜೊತೆಗೆ ಕುರಿ, ಕೋಳಿಗಳನ್ನು ಅರ್ಪಿಸಿ ದುರ್ಗಾದೇವತೆಯನ್ನು ಸಂತೃಪ್ತಿಗೊಳಿಸುವ  `ಬಲಿ’   ಸೇವೆಗಳೂ ನಡೆಯಲಿವೆ.   ಜಾತ್ರೆಯಲ್ಲಿ  ಹೆಚ್ಚಿನ  ಸಂಖ್ಯೆಯಲ್ಲಿ ಪೊಲೀಸರನ್ನು  ನಿಯೋಜಿಸಲಾಗಿದ್ದು, ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಶಾಂತಿ-ಸುವ್ಯವಸ್ಥೆಯ ಬಗ್ಗೆ ಖುದ್ದು ನಿಗಾವಹಿಸಿರುವುದಾಗಿ ಹಿರಿಯ  ಪೊಲೀಸ್ ಅಧಿಕಾರಿ ತಿಳಿಸಿದರು.


ಉತ್ತಂಗಿ ಕೊಟ್ರೇಶ್

error: Content is protected !!