ನ್ಯಾಯ, ನೀತಿ, ಧರ್ಮದಿಂದ ಶಾಂತಿ – ನೆಮ್ಮದಿ ಸಾಧ್ಯ

ಭರಮಸಾಗರದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶ್ರೀ ಸತ್ ಉಪಾಶಿ ದಿವ್ಯಾಶ್ರಮದ ಬ್ರಹ್ಮಾನಂದ ತೀರ್ಥ ಭಿಕ್ಷು

ಭರಮಸಾಗರ, ಮಾ.13-  ಸಮಾಜದಲ್ಲಿ ಎಲ್ಲರು ಒಂದೇ ಎಂಬ ಭಾವನೆಯನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕು. ನ್ಯಾಯ, ನೀತಿ, ಧರ್ಮದಿಂದ ಜೀವನ ಸಾಗಿಸಬೇಕು. ಇದರಿಂದ ತಮ್ಮ ಜೀವನದಲ್ಲಿ ಶಾಂತಿ ನೆಮ್ಮದಿ ಕಾಪಾಡಿಕೊಳ್ಳಬಹುದೆಂದು ಶಿವಮೊಗ್ಗದ ಶ್ರೀಸತ್ ಉಪಾಶಿ ದಿವ್ಯಾಶ್ರಮದ ಬ್ರಹ್ಮಾನಂದ ತೀರ್ಥ ಭಿಕ್ಷು ಹೇಳಿದರು.

ಅವರು ಸ್ಥಳಿಯ ಶ್ರೀ ಗುರುದತ್ತ ಮಂದಿರದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. 

ನಮಗೆ ಸಹಾಯ ಮಾಡಿದವರಿಗೆ ನಮ್ಮ ಕೈಯ್ಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಬೇಕು. ತರಳಬಾಳು ಮಠದ ಸಿರಿಗೆರೆ ಶ್ರೀಗಳವರು ಪರಿಶ್ರಮದಿಂದ ಭರಮಸಾಗರದ ಭವ್ಯವಾದ ಕೆರೆಗೆ ನೀರು ತುಂಬಿಸಿದ್ದಾರೆ. 

ಈ ನೀರಿನ ಸದ್ಬಳಕೆ  ಮಾಡಿಕೊಂಡು ರೈತರು ಪ್ರಗತಿ ಸಾಧಿಸಬೇಕೆಂದು ಹೇಳಿದರು.  ನಾನು ಈ ಹಿಂದೆ ಭರಮಸಾಗರದಲ್ಲಿ ನನ್ನ ಆಶ್ರಮದಿಂದ ಕೆರೆ ಕೋಡಿಯ ಹತ್ತಿರ ಜಪ ಮಾಡಲು ಹೋಗುತ್ತಿದ್ದೆ. ಆಗ ಕೆರೆಯನ್ನು ನೋಡಲು ತುಂಬಾ ಬೇಜಾರು ಆಗುತ್ತಿತ್ತು. ಅದೇ ಕೆರೆಯು ಇಂದು ನೀರು ತುಂಬಿರುವುದರಿಂದ ಜನರ ಮನಸ್ಸಿಗೆ ಆನಂದ ಕೊಡುತ್ತದೆಂದು ಹೇಳಿದರು.

ಹೊಸದುರ್ಗ ಸದ್ಗುರು ಸೇವಾಶ್ರಮದ ಶ್ರೀಕಾಂತಾನಂದ ಭಗವಾನ್ ಸರಸ್ವತಿ ಸ್ವಾಮೀಜಿ ಮಾತನಾಡಿ, ಗುರುಗಳ ಸೇವೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಬೇಕು. ಸಾತ್ವಿಕರಾಗಿ ಜೀವನ ಸಾಗಿಸಬೇಕು ಎಂದು ಹಿತ ನುಡಿದರು.

ಪ್ರತಿದಿನ ದತ್ತಮಂದಿರದಲ್ಲಿ ಕಾಕಡ ಆರತಿ ಭಜನೆ, ಶ್ರೀ ಗುರುದತ್ತ, ರುದ್ರಾಭಿಷೇಕ, ದತ್ತಾತ್ರೇಯ ಮೂಲ ಮಂತ್ರ ಹೋಮ, ಗುರು ಭಿಕ್ಷೆ, ವಿಶೇಷ ಪೂಜಾ ಕಾರ್ಯಕ್ರಮವನ್ನು ಬೆಂಗಳೂರಿನ ಸುಬ್ರಮಣ್ಯ ಸ್ವಾಮೀಜಿ ನೆರವೇರಿಸಿದರು.  

ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಜೀವಿ ಡಿ.ವಿ. ಶರಣಪ್ಪ, ಬಣಜಿಗ ಸಂಘದ ಅಧ್ಯಕ್ಷ ಬಿ. ಬಸವರಾಜಪ್ಪ, ದಿ|| ಶ್ರೀಮತಿ ಅನಸೂಯಮ್ಮ ಚೌಲಿಹಳ್ಳಿ ಭೀಮಣ್ಣನವರ ಕುಟುಂಬ ವರ್ಗದವರು, ಬಿ. ವಿಶ್ವನಾಥ, ವಿ.ಎಸ್.ಎಸ್ ಮಾಜಿ ಅಧ್ಯಕ್ಷ ತುರುವನೂರು ಚೆನ್ನೇಶ್, ಪತ್ರಕರ್ತ ಬಿ.ಜೆ. ಅನಂತಪದ್ಮನಾಭರಾವ್, ಶ್ರೀಪಾದರಾವ್, ಆರ್ಯವೈಶ್ಯ ಮಂಡಳಿಯವರು ಬಿ. ರಾಜೇಶ್ವರಿ, ಶ್ರೀಮತಿ ಕುಸುಮ, ವಿಜಯಲಕ್ಷ್ಮಿ, ಲತಾ ಶೇಷಗಿರಿ ರಾವ್ ಉಪಸ್ಥಿತರಿದ್ದರು.

ಗಾಯತ್ರಿ ಪ್ರಾರ್ಥಿಸಿದರು. ದೇವಸ್ಥಾನದ ಮುಖ್ಯಸ್ಥ
ಬಿ. ಮಲ್ಲಾರಿರಾವ್ ಸ್ವಾಗತಿಸಿದರು. ಸಂಚಾಲಕ ವಿನಯ್ ನಿರೂಪಿಸಿದರು. ದತ್ತಮಂದಿರದ ಭಕ್ತ ಹುಣಸೆಕಟ್ಟೆ ಸುರೇಶ್ ವಂದಿಸಿದರು.

error: Content is protected !!