ಕೂಡ್ಲಿಗಿ, ಜ.4- ಸಂಪ್ರದಾಯವಾದಿ ಗಳನ್ನು ದಿಟ್ಟವಾಗಿ ಎದುರಿಸಿ ಹೆಣ್ಣಿಗೆ ಶಿಕ್ಷಣ ಕೊಡುವ ಮೂಲಕ ಅಕ್ಷರದ ಬೆಳಕು ಚೆಲ್ಲಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಫುಲೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಬಿ. ಶಿವಾನಂದ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಮೇನ್ ಬಾಯ್ಸ್ ಶಾಲೆಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲ್ಲೂಕು ಘಟಕ ಕೂಡ್ಲಿಗಿ ವತಿಯಿಂದ ಭಾರತದ ಪ್ರಥಮ ಶಿಕ್ಷಕಿ, ಅಕ್ಷರದ ಅವ್ವ, ಬಾಲಕಿಯರ ಶಿಕ್ಷಣದ ಮಹತ್ವ ಸಾರಿದ ಮಾತೆ ಸಾವಿತ್ರಿ ಬಾ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಾ,
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರಿಗೆ ಶಿಕ್ಷಣವನ್ನು ಕೊಡುವ ಮೂಲಕ ಅಂಧ ಶ್ರದ್ಧೆಯನ್ನು ತೊಡೆದು, ಸಂಪ್ರದಾಯವಾದಿಗಳನ್ನು ದಿಟ್ಟವಾಗಿ ಎದುರಿಸಿ ಅಕ್ಷರದ ಬೆಳಕನ್ನು ಮಹಿಳೆಯರಾದಿಯಾಗಿ ದೀನ-ದಲಿತರಿಗೂ ನೀಡಿದ ಮಹಾತಾಯಿ ಸಾವಿತ್ರಿ ಬಾ ಫುಲೆ ಅವರು ನಮಗೆಲ್ಲಾ ಪೂಜ್ಯನೀಯರು. ಅವರ ಆದರ್ಶಗಳು ನಮ್ಮ ಶಿಕ್ಷಕರಿಗೆ ಹಾಗೂ ಸಮಾಜಕ್ಕೆ ಸದಾ ದಾರಿದೀಪವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶ್ ಗೌಡ, ಜಿಲ್ಲಾ ಉಪಾಧ್ಯಕ್ಷರಾದ ಗೀತಾ ವಿ, ಉಪಾಧ್ಯಕ್ಷರಾದ ಹನುಮಂತಪ್ಪ ಹೆಚ್.ಜಿ, ಹೆಚ್. ಇಂದಿರ, ಸಹಕಾರ್ಯದರ್ಶಿಗಳಾದ ಗೀತಾ ಭಾಪ್ರಿ, ಪ್ರತಿನಿಧಿಗಳಾದ ಪಿ. ವಿ. ಕೊತ್ಲಪ್ಪ, ಕೆ. ಜಿನಾಬಿ ಪುಟ್ಟಪ್ಪ, ಎನ್.ಪಿ.ಎಸ್. ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.