ನನ್ನ ಅವಧಿಯಲ್ಲಿ ಹರಿಹರ ಕ್ಷೇತ್ರದ ಅಭಿವೃದ್ಧಿಗೆ 33 ಕೋ.ರೂ. ಅನುದಾನ: ಮೋಹನ್ ಕೊಂಡಜ್ಜಿ

ಹರಿಹರ, ಮಾ.13- ಹರಿಹರ ಕ್ಷೇತ್ರದ ಅಭಿವೃದ್ಧಿಗಾಗಿ ನಾಲ್ಕು ವರ್ಷಗಳ ನನ್ನ ಅವಧಿಯಲ್ಲಿ ಸುಮಾರು 33 ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ದ್ವೀಪ ಅಳವಡಿಕೆ ಹಾಗೂ ಸಮುದಾಯ ಭವನ ನಿರ್ಮಾಣ ಸೇರಿದಂತೆ, ಹಲವಾರು ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಸಿರುವುದಾಗಿ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳು, ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ ಯೋಜನೆಯಡಿ 1 ಕೋಟಿ 69 ಲಕ್ಷ  ರೂ.ಗಳ ವಿವಿಧ ಗ್ರಾಮಗಳಲ್ಲಿ ರಸ್ತೆ ಹಾಗೂ ಸಿ.ಸಿ. ಡ್ರೈನ್ ನಿರ್ಮಾಣಕ್ಕೆ 2 ಕೋಟಿ, ಜಗಳೂರು ತಾಲ್ಲೂಕು ರಸ್ತೆ ಅಭಿವೃದ್ಧಿಗೆ 2 ಕೋಟಿ, ಕೊಂಡಜ್ಜಿ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಮಂಜೂರು ಮಾಡಿಸಿರುವುದಾಗಿ ತಿಳಿಸಿದರು. 

ಲೋಕೋಪಯೋಗಿ ಇಲಾಖೆ ವತಿಯಿಂದ  ತಾಲ್ಲೂಕಿನ ಕಕ್ಕರಗೊಳ್ಳ ಮತ್ತು ಕೊಂಡಜ್ಜಿ ರಸ್ತೆ ಅಭಿವೃದ್ಧಿಗೆ 5 ಕೋಟಿ, ಕೊಂಡಜ್ಜಿ ಗ್ರಾಮದಲ್ಲಿ ವೃತ್ತಿ ರಂಗಭೂಮಿ ಕೇಂದ್ರದ ಸ್ಥಾಪನೆಗೆ 1 ಕೋಟಿ, ಕೊಂಡಜ್ಜಿ ಗ್ರಾಮದಲ್ಲಿ ಪ್ರವಾಸಿ ತಾಣ ಕಟ್ಟಡ 1 ಕೋಟಿ, ಪಶು ಆಸ್ಪತ್ರೆ ನಿರ್ಮಾಣ 38 ಲಕ್ಷ ರೂಪಾಯಿ, ಕಕ್ಕರಗೊಳ್ಳ, ಚಿಕ್ಕಬಿದರಿ ರಸ್ತೆ ನಿರ್ಮಾಣಕ್ಕೆ 10 ಕೋಟಿ ತಾಲ್ಲೂಕಿನ ಹೆಚ್.ಎಂ. ರಸ್ತೆಯಿಂದ ಅರಸೀಕೆರೆ ಸೇರುವ ಕೊಂಡಜ್ಜಿ ಮಾರ್ಗದ ಅಭಿವೃದ್ಧಿಗೆ 10 ಕೋಟಿ, ಪೊಲೀಸ್ ಸಮುದಾಯ ಭವನ  ನಿರ್ಮಾಣಕ್ಕೆ 4 ಲಕ್ಷ, ಹರಿಹರ ಸರ್ಕಾರಿ ನೌಕರರ ಕಟ್ಟಡ ನಿರ್ಮಾಣಕ್ಕೆ 4 ಲಕ್ಷ  ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪ ಸಮುದಾಯ ಭವನ ಅಭಿವೃದ್ಧಿಗೆ 5 ಲಕ್ಷ, ಕೊಂಡಜ್ಜಿ ದುರ್ಗಾಂಬಿಕಾ ದೇವಿ ದೇವಸ್ಥಾನ ಅಭಿವೃದ್ಧಿಗೆ 2.50 ಲಕ್ಷ ಮಾಡಿರುವುದಾಗಿ ತಿಳಿಸಿದರು.

ದಾವಣಗೆರೆ ವಿಶ್ವಭಾರತಿ  ವಿದ್ಯಾಪೀಠದ ಅಭಿವೃದ್ಧಿಗೆ 5 ಲಕ್ಷ, ಚಿಗಟೇರಿ ನಾರದಮುನಿ ದೇವಸ್ಥಾನ ಸಮುದಾಯ ಭವನ ಅಭಿವೃದ್ಧಿಗೆ 9.50 ಲಕ್ಷ, ಕಮಲಾಪುರ ಗ್ರಾಮದ ಬೀರೇಶ್ವರ ಸಮುದಾಯ ಭವನಕ್ಕೆ 5 ಲಕ್ಷ ದಾವಣಗೆರೆಯಲ್ಲಿ ವಿವಿಧ ಕಾಮಗಾರಿಗೆ 79.52 ಲಕ್ಷ, ಕೊಂಡಜ್ಜಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡಕ್ಕೆ 15 ಲಕ್ಷ ರೂಪಾಯಿ ಸೇರಿದಂತೆ, ಒಟ್ಟಾರೆಯಾಗಿ ನನ್ನ ಅನುದಾನ 40 ಕೋಟಿಯಲ್ಲಿ ಹರಿಹರ ತಾಲ್ಲೂಕಿನ ಅಭಿವೃದ್ಧಿಗೆ 33 ಕೋಟಿಗೂ ಅಧಿಕ ಮೊತ್ತದ ಹಣ ತಂದು ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದರು.

ಜಿಲ್ಲೆಯಲ್ಲಿ 110 ಶುದ್ಧ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡಿದ್ದು, ಅದರಲ್ಲಿ 29 ಹರಿಹರ ತಾಲ್ಲೂಕಿನಲ್ಲಿವೆ.  ಹೈಮಾಸ್ಟ್ ವಿದ್ಯುತ್ ದ್ವೀಪಗಳ ವ್ಯವಸ್ಥೆಯನ್ನು ಜಿಲ್ಲೆಯ 46 ಕಡೆಗಳಲ್ಲಿ ಮಾಡಿದ್ದು, ಅದರಲ್ಲಿ ಹರಿಹರ ತಾಲ್ಲೂಕಿನಲ್ಲಿ 28 ಕಡೆಗಳಲ್ಲಿ ಅಳವಡಿಕೆ ಮಾಡಲಾಗಿದೆ. ಅಲ್ಲದೆ ನಾನು ಮತ್ತು ನನ್ನ ಪುತ್ರ ನಿಖಿಲ್ ಕೊಂಡಜ್ಜಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು,  ಯಾವುದೇ ಮುಂದಿನ  ರಾಜಕೀಯ ಉದ್ದೇಶ ಹೊಂದಿಲ್ಲ ಎಂದರು. 

ಮಾಜಿ ಶಾಸಕ ಬಿ.ಪಿ. ಹರೀಶ್ ಕಾಲದಲ್ಲಿ ಕೆಲವು ಕೆಲಸಗಳನ್ನು ಮಾಡಿಸಲಾಯಿತು. ಅದರಂತೆ ಕೊಂಡಜ್ಜಿ – ಕಕ್ಕರಗೊಳ್ಳ ಮತ್ತು ಕೊಂಡಜ್ಜಿ – ಅರಸಿಕೇರಿ ರಸ್ತೆ ಅಭಿವೃದ್ಧಿಗೆ ಹಿಂದೆ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಶಾಸಕರಾಗಿದ್ದ ಸಮಯದಲ್ಲಿ ಅಂದಿನ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣನವರಿಗೆ ಇಬ್ಬರು ಸೇರಿ ರಸ್ತೆಯ ಅಭಿವೃದ್ಧಿಗೆ 33 ಕೋಟಿ ಬಿಡುಗಡೆ ಮಾಡಿ ಎಂದು ಮನವಿ ನೀಡಿದ್ದೆವು. ಆದರೆ ಬಿಡುಗಡೆ ಆಗುವುದಕ್ಕೆ ವಿಳಂಬ ಆಯಿತು. ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಹೇಳಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಗಮನಕ್ಕೆ ತರಲಾಗಿತ್ತು. ನಂತರ ಶಾಸಕ ಎಸ್. ರಾಮಪ್ಪ ಶಾಸಕರಾದರು. ಈಗ ಬಿಡುಗಡೆ ಆಗಿದೆ. ಇದರಲ್ಲಿ ನಾನು ಮಾಡಿಸಿದೆ ಎಂದು ಹೇಳಿಕೊಂಡು ಪ್ರಚಾರ ಪಡೆಯುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಹೇಳಿದರು.

ಕೊಂಡಜ್ಜಿ ಗ್ರಾಮದ ಗುಡ್ಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸರ್ಕಾರಿ ಜಾಗ ಇರೋದರಿಂದ ಇಲ್ಲಿನ ಸ್ಥಳದಲ್ಲಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಉತ್ತಮ ಕೆಲಸಕ್ಕೆ ಆದ್ಯತೆ ನೀಡಿದರೆ ಉತ್ತಮವಾಗಿರುತ್ತದೆ ಎಂದು ತಿಳಿಸಿದಾಗ, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್ ಮತ್ತು ಬಿ.ಪಿ. ಹರೀಶ್ ಆಡಳಿತದ ಸಮಯದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಮತ್ತು ಮೊರಾರ್ಜಿ ಶಾಲೆ ಮತ್ತು ಬಸಪ್ಪ ಸ್ಕೌಟ್ ಗೈಡ್ ಶಾಲೆ ಸೇರಿದಂತೆ ಇತರೆ ಕೆಲಸಕ್ಕೆ ಸ್ಥಳವನ್ನು ಬಳಕೆ ಮಾಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಮಾತನಾಡಿ, ನಾನು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿ ಪಕ್ಷದ ಆದೇಶದಂತೆ ಯುವಕರ ಸಂಘಟನೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಆಪ್ತ ಸಹಾಯಕ ಕೃಷ್ಣಮೂರ್ತಿ, ತಿಪ್ಪೇಶ್ ಇತರರು ಹಾಜರಿದ್ದರು.

error: Content is protected !!