ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ
ರಾಣೇಬೆನ್ನೂರು, ಮಾ13-ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಲ್ಲಿ 40 ಕೋಟಿ ಅನುದಾನದಲ್ಲಿ ನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಕುರುಬಗೇರಿ ಸೊಪ್ಪಿನಪೇಟೆ ಬಳಿ 28 ವಿಭಾಗಗಳಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಬಸವರಾಜ ಬೊಮ್ಮಾಯಿ ಅವರು ರಾಣೇಬೆನ್ನೂರಿಗೆ ಜವಳಿ ಪಾರ್ಕ್ ಕೊಟ್ಟಿದ್ದು, 25 ಸಾವಿರ ಮಹಿಳೆಯರಿಗೆ ಉದ್ಯೋಗ ದೊರಕಲಿದೆ. ಒಟ್ಟಾರೆ ಬಿಜೆಪಿ ಸರ್ಕಾರ ಕೋವಿಡ್ ಸಂಕಷ್ಟದಲ್ಲೂ ಸಹ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದೆ ಎಂದು ರಾಘವೇಂದ್ರ ಹೇಳಿದರು.
ಜಲಸಂಪನ್ಮೂಲ ಇಲಾಖೆಯಿಂದ ಸಿ.ಸಿ. ಚರಂಡಿ ನಿರ್ಮಾಣ, ರಸ್ತೆ ಡಾಂಬರೀಕರಣ, ಕಾಂಕ್ರೀಟ್ ನಿರ್ಮಾಣ, ಫೇವರ್ಸ್ ಅಳವಡಿಸುವುದು, ಸಿ.ಡಿ. ನಿರ್ಮಾಣ, ಸಮುದಾಯ ಭವನ ಎಲ್ಲ ವಿಭಾಗಗಳಲ್ಲಿ 28 ಕೋಟಿ 20 ಲಕ್ಷ ವೆಚ್ಚದ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ನಗರಾಧ್ಯಕ್ಷರಾದ ರೂಪಾ ಚಿನ್ನಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ ಹಾಗೂ ಸದಸ್ಯರು, ಶಾಸಕ ಆರ್. ಶಂಕರ್, ಭರಮಪ್ಪ ಪೂಜಾರ್, ಬಸಪ್ಪ ಗೂಳಣ್ಣನವರ ಮತ್ತಿತರರಿದ್ದರು.