ಜಗಳೂರು, ಜ.4- ಗ್ರಾಮ ಪಂಚಾಯಿತಿ ಚುನಾವಣೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ, ಮಾರಾಮಾರಿ ನಡೆದು ಓರ್ವ ಸಾವನ್ನಪ್ಪಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ದೇವಿಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಿನಿಗಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ರಾತ್ರಿ ನಡೆದ ಮಾರಾಮಾರಿಯಲ್ಲಿ ಗ್ರಾಮದ ನಿವೃತ್ತ ಶಿಕ್ಷಕ ಕೃಷ್ಣಪ್ಪ (70) ಮೃತಪಟ್ಟಿ ದ್ದಾರೆ. ವೀರೇಂದ್ರ ಎಂಬುವರು ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿನಿಗಾರನಹಳ್ಳಿ ಎಸ್ಟಿ ಮೀಸಲು ಕ್ಷೇತ್ರದಲ್ಲಿ ತಿಪ್ಪಮ್ಮ ಗೆಲುವು ಸಾಧಿಸಿದ್ದರು. ಇವರ ಎದುರಾಳಿ ಶಶಿಕಲಾ ಶೃಂಗೇಶ್ ಸೋತಿದ್ದರು. ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ಸೋತವರ ಹಾಗೂ ಗೆದ್ದವರ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ತಿರುಗಿ ಎರಡೂ ಗುಂಪಿನವರು ಕಲ್ಲು, ದೊಣ್ಣೆಗಳನ್ನು ಬಳಸಿ ಹೊಡೆದಾಡಿದ್ದಾರೆ.
ಜಗಳದಲ್ಲಿ ವಿಜೇತ ಅಭ್ಯರ್ಥಿ ತಿಪ್ಪಮ್ಮ ಸಂಬಂಧಿಕರಾದ ನಿವೃತ್ತ ಶಿಕ್ಷಕ ಕೃಷ್ಣಪ್ಪ ಮತ್ತು ವೀರೇಂದ್ರ ಅವರಿಗೆ ಬಲವಾದ ಪೆಟ್ಟು ಬಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಕೃಷ್ಣಪ್ಪ ಬದುಕುಳಿಯಲಿಲ್ಲ. ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಹೆಚ್ಚುವರಿ ಪೊಲೀಸ್ ಇಲಾಖೆ ಅಧೀಕ್ಷಕ ಎಂ. ರಾಜೀವ್ ಭೇಟಿ ನೀಡಿ, ಯಾರೇ ತಪ್ಪಿತಸ್ಥರಿರಲಿ ಕಾನೂನು ಚೌಕಟ್ಟಿನಡಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಶಾಂತಿ ಕಾಪಾಡಿರಿ. ಜಾಗೃತರಾಗಿರಿ ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.
ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ್ , ಜಗಳೂರು ಪೊಲೀಸ್ ವೃತ್ತ ನಿರೀಕ್ಷಕ ಡಿ . ದುರುಗಪ್ಪ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಬಿಳಿಚೋಡು ಠಾಣೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು. ಪೋಲಿಸರು ತನಿಖೆ ಕೈಗೊಂಡಿದ್ದಾರೆ.