ನ್ಯಾಯದ ವ್ಯಾಪಾರ ಮಾಡಿ, ಮೋಸ ಬೇಡ

ಎಪಿಎಂಸಿಯಲ್ಲಿ ಹಣ್ಣಿನ ಮಾರುಕಟ್ಟೆ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಈಗಾಗಲೇ ಜಾಗ ಗುರುತಿಸಲಾಗಿದೆ. ಸರ್ಕಾರ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು, ಬಹುದಿನದ ಬೇಡಿಕೆ ಈಡೇರಲಿದೆ. 

– ಅಣಜಿ ಚಂದ್ರಶೇಖರ್, ಎಪಿಎಂಸಿ ಅಧ್ಯಕ್ಷ

ದಾವಣಗೆರೆ, ಜ. 4- ನ್ಯಾಯದ ವ್ಯಾಪಾರ ಮಾಡಿ. ಗ್ರಾಹಕರಿಗೆ, ರೈತರಿಗೆ ಮೋಸ ಮಾಡಬೇಡಿ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಎಪಿಎಂಸಿ ವರ್ತಕರಿಗೆ ಕರೆ ನೀಡಿದರು.

ನಗರದ ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾದ ನೂತನ ಹಣ್ಣಿನ ಮಾರುಕಟ್ಟೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ  ಪೂರ್ಣ ಸೌಲಭ್ಯಗಳು ದೊರಕುವುದು ವಿರಳ. ಸಿಕ್ಕಾಗಿ ಅದನ್ನು  ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಸರ್ಕಾರದಿಂದ ಯಾವುದೇ ಸಹಾಯ ಧನ ದೊರೆಯುವುದಿಲ್ಲ. ಆದರೆ ನಾನು ಸಚಿವನಾಗಿದ್ದಾಗ ಎಪಿಎಂಸಿಗೆ  ಅನುದಾನ ನೀಡುವಂತೆ ಒತ್ತಾಯಿಸಿದ್ದೆ. ಒತ್ತಡಕ್ಕೆ ಮಣಿದು ಸರ್ಕಾರ 750 ಕೋಟಿ ರೂ. ಅನುದಾನ ನೀಡಿತ್ತು. ಆ ಅನುದಾನದಲ್ಲಿ ದಾವಣಗೆರೆೆ ಎಪಿಎಂಸಿಗೆ 250 ಕೋಟಿ ರೂ.ಗಳಷ್ಟು ಅನುದಾನ ನೀಡಿದ್ದೆ.  ಆ ವೇಳೆ ರಾಣೇಬೆನ್ನೂರು ಶಾಸಕರು ದಾವಣಗೆರೆಗೆ ಹೆಚ್ಚಿನ ಅನುದಾನ ನೀಡಿ ಉಳಿದೆಡೆ ಕಡಿಮೆ ಕೊಟ್ಟಿದ್ದಾರೆಂದು ವಿರೋಧಿಸಿದ್ದೂ ಉಂಟು ಎಂದು ನೆನಪಿಸಿಕೊಂಡರು. 

ಇದೀಗ ಬ್ಯಾಡಗಿ ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಎಪಿಎಂಸಿಗಳು ಸರ್ಕಾರದ ಧನ ಸಹಾಯ ಪಡೆದಿವೆ ಎಂದ ಎಸ್ಸೆಸ್,  ಹಲವು ವರ್ಷಗಳಿಂದ ಎಪಿಎಂಸಿ ನೌಕರರಿಗೆ ಬಡ್ತಿ ನೀಡಿರಲಿಲ್ಲ. ನಾನು ಸಚಿವನಾಗಿದ್ದಾಗ ಅವರಿಗೆ ಬಡ್ತಿ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೆ ಎಂದರು.

ಎಪಿಎಂಸಿ ಪ್ರಾಂಗಣದಲ್ಲಿ ಧಾನ್ಯಗಳನ್ನು ಒದಗಿಸಲು ವರ್ತಕರು ನಾಲ್ಕಾಣೆ ಭಾಗ ನೀಡುವ ಕರಾರಿನ ಮೇಲೆ ಸಿಮೆಂಟ್ ಪ್ರಾಂಗಣ ನಿರ್ಮಿಸಲಾಯಿತು. ಆದರೆ ಕೆಲವರು ಇನ್ನೂ ಆ ಹಣವನ್ನು ನೀಡಿಲ್ಲ. ವರ್ತಕರು ಕೇವಲ ವಸೂಲಿಗಷ್ಟೇ ಆದ್ಯತೆ ನೀಡದೆ ಸರ್ಕಾರದ ಸೌಲಭ್ಯ ಉಪಯೋಗಿಸಿಕೊಂಡು ತಮ್ಮ ಪಲಿನ ಹಣವನ್ನೂ ನೀಡಬೇಕು ಎಂದು ಹೇಳಿದರು.

ಪ್ರಸ್ತುತ ಎಪಿಎಂಸಿ ಕಾಯ್ದೆ ತಿದ್ದುಪಡಿ  ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದ್ದು ವರ್ತಕರು ಸಂಘರ್ಷಕ್ಕೆ ಇಳಿಯದೆ ವ್ಯಾಪಾರ ಮಾಡಿಕೊಂಡು ಹೋಗಬೇಕು ಎಂದು ಎಸ್ಸೆಸ್‌ ಕರೆ ನೀಡಿದರು.

162 ಹಮಾಲರಿಗೆ  ವಸತಿ ಸೌಲಭ್ಯಕ್ಕಾಗಿ ಬೇಡಿಕೆ ಇದೆ. ಆಶ್ರಯ ಕಮಿಟಿಯಲ್ಲಿ ಚರ್ಚಿಸಿ ಆಶ್ರಯ ಮನೆ ಕಟ್ಟಿಸಿಕೊಡುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ಬೆಂಗಳೂರು, ಹುಬ್ಬಳ್ಳಿ ಹೊರತುಪಡಿ ಸಿದರೆ ರಾಜ್ಯದಲ್ಲಿಯೇ ದಾವಣಗೆರೆ ಎಪಿಎಂಸಿ ಉತ್ತಮ ಮಾರುಕಟ್ಟೆಯಾಗಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್ ಮಾತನಾಡುತ್ತಾ,  ಮಾರುಕಟ್ಟೆ ನಿರ್ಮಾಣಕ್ಕೆ ಶ್ರಮಿಸಿದ ಎಸ್ಸೆಸ್ ಹಾಗೂ ಎಸ್ಸೆಸ್ಸೆಂ ಅವರ ಹೆಸರನ್ನು ಮಾರುಕಟ್ಟೆಗೆ ನಾಮಕರಣ ಮಾಡಬೇಕಾಗಿತ್ತು. ಮುಂದಾದರೂ ಈ ಬಗ್ಗೆ ಗಮನ ಹರಿಸಿ, ಉತ್ತಮವಾಗಿ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸವಾಗಬೇಕಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ  ಪರಿಶ್ರಮದಿಂದಲೇ  250 ಕೋಟಿ ರೂ. ಅನುದಾನದಲ್ಲಿ ಎಪಿಎಂಸಿ ಮಾರುಕಟ್ಟೆ ಸುಸಜ್ಜಿತವಾಗಿದೆ. ನೂತನ ಮಾರುಕಟ್ಟೆಯ ಪರಿಕಲ್ಪನೆ ಹುಟ್ಟಿದ್ದೇ ಎಸ್ಸೆಸ್ ಹಾಗೂ ಎಸ್ಸೆಸ್ಸೆಂ ಅವರಿಂದ. 

ದಾವಣಗೆರೆ ಎಪಿಎಂಸಿಯಲ್ಲಿ ರಸ್ತೆ, ಒಣಗಿಸಲು ಪ್ರಾಂಗಣ ಸೇರಿದಂತೆ ಉತ್ತಮ ಸೌಲಭ್ಯಗಳಿರುವುದರಿಂದ ಹೆಚ್ಚಿನ ಮಟ್ಟದಲ್ಲಿ ದಾಸ್ತಾನು ಬರುತ್ತಿದೆ. ನಗರದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ್ದ ಮಲ್ಲಿಕಾರ್ಜುನ್ ಅವರನ್ನು ಕಳೆದ ಚುನಾವಣೆಯಲ್ಲಿ ಜನತೆ ಕಡೆಗಣಿಸಿದ್ದು ದುರಂತ. ಮುಂದಾದರೂ ತಪ್ಪುಗಳನ್ನು ಸರಿಪಡಿಸಿಕೊಂಡು ಎಸ್ಸೆಸ್ಸೆಂ ಅವರೊಟ್ಟಿಗೆ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ ಎಂದರು.

ಹಣ್ಣು ಹಾಗೂ ಹೂವಿನ ಮಾರುಕಟ್ಟೆಗೆ ಬರುವ ಗ್ರಾಹಕರ ಅನುಕೂಲಕ್ಕಾಗಿ ಓಡಾಡಲು 10 ಅಡಿ ರಸ್ತೆಗೆ ಜಾಗದ ಅಗತ್ಯವಿದ್ದು, ಜೈವಿಕ ಪ್ರಯೋಗಾಲಯದವರು ಇದನ್ನು ಗಣನೆಗೆ ತೆಗೆದುಕೊಂಡು ಜಾಗ ಬಿಟ್ಟುಕೊಡಬೇಕಿದೆ ಎಂದರು.

ಸಗಟು ಹಣ್ಣಿನ ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ರಹಮಾನ್ ಹೆಚ್.ಕೆ. ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಗರದಲ್ಲಿ ಎಲ್ಲಾ ವ್ಯಾಪಾರಸ್ಥರು ಮಾರುಕಟ್ಟೆಗೆ ತಮ್ಮ ವ್ಯಾಪಾರವನ್ನು ಸ್ಥಳಾಂತರಿಸುವ ಮೂಲಕ ಮಾರುಕಟ್ಟೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಿ.ಆನಂದ್, ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ಮಾತನಾಡಿದರು.  ಸಂಘದ ಕಾರ್ಯದರ್ಶಿ ಕೆ.ಹನೀಫ್ ಸಾಬ್ ಸ್ವಾಗತಿಸಿದರು. ಶಾಂತಲಾ ಪ್ರಾರ್ಥಿಸಿ, ನಿರೂಪಿಸಿದರು.  ವಕ್ಫ್ ಅಧ್ಯಕ್ಷ ಸಿರಾಜ್ ಅಹ್ಮದ್, ಡಿ.ಈರಣ್ಣ, ಕೆ.ಜಿ. ಶಾಂತರಾಜ್, ರಾಜಣ್ಣ, ದೊಗ್ಗಳ್ಳಿ ಬಸವರಾಜ್ ಇತರರು ಉಪಸ್ಥಿತರಿದ್ದರು.

error: Content is protected !!