ದುಗ್ಗಮ್ಮನ ಜಾತ್ರೆ: ಪ್ರಾಣಿ ಬಲಿ ತಡೆಗೆ ದಯಾನಂದ ಶ್ರೀ ಆಗ್ರಹ

ದಾವಣಗೆರೆ, ಮಾ.13- ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ಪ್ರಾಣಿ ಬಲಿ ನೀಡದಂತೆ ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದುಗ್ಗಮ್ಮನ ಜಾತ್ರೆ ಹಿಂಸಾಮುಕ್ತ, ಪ್ರಾಣಿ ಬಲಿ ಮುಕ್ತ ಜಾತ್ರೆಯಾಗಿ ರೂಪುಗೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.

ವಿದ್ಯಾವಂತರು, ವಿಚಾರಶೀಲರು, ಪ್ರಜ್ಞಾವಂತರೂ ಇರುವ ದಾವಣಗೆರೆಯಲ್ಲಿ ಪ್ರಾಣಿಬಲಿಯಂತಹ ಕೆಟ್ಟ, ಅನಾಗರಿಕ ಪರಂಪರೆ ಕೊನೆಯಾಗದಿರುವುದು ವಿಷಾದನೀಯ. ಪ್ರಾಣಿ ಬಲಿ ನಿಷೇಧಿಸಿ ಹೈ ಕೋರ್ಟ್ ಆದೇಶಿಸಿದ್ದು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಜನರೂ ಸಹ ಪ್ರಾಣಿ ಬಲಿ ಮುಕ್ತ ಹಬ್ಬ ಆಚರಿಸಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆಯಡಿ 13 ವರ್ಷದೊಳಗಿನ ಎಮ್ಮೆ, ಕೋಣಗಳನ್ನೂ ಹತ್ಯೆ ಮಾಡಬಾರದು ಎಂದು ತಿಳಿಸಲಾಗಿದೆ. ಹತ್ಯೆ ನಡೆದರೆ 10 ಲಕ್ಷ ರೂ ವರೆಗೆ ದಂಡ 3-7 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲಾಡಳಿತ ಕೋಣ ಬಲಿ ತಡೆಯುವ ಮೂಲಕ ಕಾನೂನು ಪಾಲಿಸಬೇಕು ಎಂದರು. ದೇವಸ್ಥಾನದ ಸಮಿತಿಯವರು ಸಿರಂಜ್ ಮೂಲಕ ಕೋಣನ ರಕ್ತ ಪಡೆಯುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ಆವರಣದಲ್ಲಿ ಬಲಿ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದರ್ಥ ಬೇರೆಡೆ ಬಲಿ ನೀಡುವ ಉದ್ದೇಶವೇ? ಎಂದು ಪ್ರಶ್ನಿಸಿದ ಸ್ವಾಮೀಜಿ ಯಾವುದೇ ಭಾಗದಲ್ಲಿ ಕೋಣ ಬಲಿ ನೀಡಿದರೂ ಅದು ಅಪರಾಧವಾಗುತ್ತದೆ ಎಂದು ಎಚ್ಚರಿಸಿದರು.

ದೇವಾಲಯಗಳು ವಧಾಲಯಗಳಾಗದೆ, ದಿವ್ಯಾಲಯ, ಜ್ಞಾನಾಲಯ, ಧ್ಯಾನಾಲಯಗಳಾಗಬೇಕು ಎಂದ ಅವರು, ಜಾತ್ರೆ ಮುಗಿಯುವವರೆಗೆ ನಗರದಲ್ಲಿ ಬಲಿ ನೀಡದಂತೆ ಜಾಗೃತಿ ಮೂಡಿಸಲಾಗುತ್ತದೆ ಎಂದರು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಮಹಿಳಾ ಸಂಚಾಲಕಿ ಸುನಂದಾದೇವಿ ಉಪಸ್ಥಿತರಿದ್ದರು.

error: Content is protected !!